ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ರೀಲರುಗಳಿಗೆ ಮಳೆ ಸಂಕಷ್ಟ

ಮೋಡ ಕವಿದ ವಾತಾವರಣದಿಂದ ನೂಲು ಬಿಚ್ಚಾಣಿಕೆ ಸಮಸ್ಯೆ
Last Updated 14 ನವೆಂಬರ್ 2022, 5:12 IST
ಅಕ್ಷರ ಗಾತ್ರ

ವಿಜಯಪುರ(ಬೆಂ.ಗ್ರಾಮಾಂತರ): ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಎಲ್ಲೆಡೆ ಮೋಡ ಮುಸುಕಿದ ವಾತಾವರಣ ಹಾಗೂ ಮಳೆಯಿಂದಾಗಿ ರೇಷ್ಮೆಗೂಡು ನೂಲು ಬಿಚ್ಚಾಣಿಕೆ ಸರಿಯಾಗಿ ಆಗುತ್ತಿಲ್ಲ. ಇದರ ಪರಿಣಾಮ ರೇಷ್ಮೆನೂಲಿನ ಗುಣಮಟ್ಟ ಕಾಪಾಡಿಕೊಂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪರದಾಡುವಂತಾಗಿದೆ.

‘ಕಳೆದ ಒಂದು ವಾರದಿಂದಲೂ ಮೋಡ ಕವಿದ ವಾತಾವರಣವಿರುವ ಕಾರಣ, ಗುಣಮಟ್ಟದ ಗೂಡು ಮಾರುಕಟ್ಟೆಗೆ ಬರುವುದು ದುಸ್ತರವಾಗಿದೆ. ನೂಲು ಬಿಚ್ಚಾಣಿಕೆಯ ಕಸುಬು ಬಿಟ್ಟರೆ ನಮಗೆ ಬೇರೆ ಯಾವುದೇ ಕೆಲಸ ಬರಲ್ಲ. ಮನೆ ಮಂದಿಯೆಲ್ಲಾ ಇದೇ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕಾರಣ, ನೂಲು ಬಿಚ್ಚಾಣಕೆ ಸರಿಯಾಗಿ ಆಗದಿದ್ದರೂ ಕೂಡಾ ಗೂಡು ಖರೀದಿ ಮಾಡಲೇಬೇಕು. ರೈತರ ಶ್ರಮಕ್ಕೂ ಅನ್ಯಾಯವಾಗದಂತೆ ನಾವು ಹರಾಜಿನಲ್ಲಿ ಬೆಲೆ ಕೊಡಲೇಬೇಕು. ಆದ್ದರಿಂದ ಗರಿಷ್ಠ₹686ರವರೆಗೂ ಗೂಡು ಹರಾಜು ಕರೆಯುತ್ತಿದ್ದೇವೆ. ಆದರೆ, ಗೂಡು ತೆಗೆದುಕೊಂಡು ಹೋದರೆ, ನೂಲು ಬಿಚ್ಚಾಣಿಕೆ ಸರಿಯಾಗಿ ಆಗದೆ ನಾವು ನಷ್ಟ ಅನುಭವಿಸುವಂತಾಗಿದೆ’ ಎಂದು ನೂಲು ಬಿಚ್ಚಾಣಿಕೆದಾರ ಬಾಬಾಜಾನ್ ಹೇಳಿದರು.

ನೂಲು ಗುಣಮಟ್ಟ ಇಲ್ಲದಿದ್ದರೆ ಮಾರಾಟ ಮಾಡಲು ಕಷ್ಟವಾಗುತ್ತದೆ. ನೂಲು ಮಾರಾಟ ಮಾಡದಿದ್ದರೆ ಪುನಃ ಗೂಡು ಖರೀದಿಗೆ ಬಂಡವಾಳ ಇರಲ್ಲ. ಸರ್ಕಾರ, ನೂಲು ಬಿಚ್ಚಾಣಿಕೆದಾರರಿಗೆ ದುಡಿಮೆ ಬಂಡವಾಳ ನೀಡುವುದಾಗಿ ಹೇಳಿತ್ತು. ಇದುವರೆಗೂ ಅದರ ಪ್ರಸ್ತಾಪವೇ ಇಲ್ಲವಾಗಿದೆ. ಇದರಿಂದ ನಾವು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದೇವೆ ಎಂದು ಹೇಳಿದರು.

ಮಾರುಕಟ್ಟೆಯ ಉಪನಿರ್ದೇಶಕ ಸುಂದರರಾಜ್ ಮಾತನಾಡಿ, ರೇಷ್ಮೆನೂಲು ಬಿಚ್ಚಾಣಿಕೆಯ ಬೆಲೆ ಈಗ ಸುಧಾರಿಸಿದೆ. ಮೋಡಕ್ಕೆ ಸಿಕ್ಕಿರುವ ಗೂಡಿನಿಂದ ಸರಿಯಾಗಿ ಬಿಚ್ಚಾಣಿಕೆಯಾಗದಿದ್ದರೆ ಅಂತಹ ನೂಲಿನ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಗೂಡಿನ ಬೆಲೆಯೂ ಕೂಡಾ ಉತ್ತಮವಾಗಿರುವ ಕಾರಣ, ರೈತರಿಗೂ ಪ್ರೋತ್ಸಾಹಧನ ಬರುತ್ತಿಲ್ಲ. ನೂಲು ಬಿಚ್ಚಾಣಿಕೆದಾರರಿಗೆ ಪ್ರೋತ್ಸಾಹಧನ ನೀಡುವ ಅನಿವಾರ್ಯತೆಯ ಕುರಿತು, ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದರು.

‘ನಮ್ಮ ನೆರವಿಗೆ ಸರ್ಕಾರ ಬರಲಿ’

ನೂಲು ಬಿಚ್ಚಾಣಿಕೆದಾರ ಅಪ್ಜಲ್ ಮಾತನಾಡಿ, ‘ನೂಲು ಬಿಚ್ಚಾಣಿಕೆ ಸರಿಯಾಗಿ ಆಗದಿದ್ದರೂ, ನಾವು ರೈತರಿಗೆ ಉತ್ತಮ ಬೆಲೆ ನೀಡದಿದ್ದರೆ, ರೈತರು ಮಾರುಕಟ್ಟೆಗೆ ಗೂಡು ತರುವ ಬದಲು ಹಳ್ಳಿಗಳಲ್ಲೇ ಮಾರಾಟ ಮಾಡಿಕೊಳ್ಳುತ್ತಾರೆ. ಇದರಿಂದ ಮಾರುಕಟ್ಟೆಯನ್ನೇ ನಂಬಿಕೊಂಡಿರುವ ನೂಲು
ಬಿಚ್ಚಾಣಿಕೆದಾರರು ಹಾಗೂ ಸರ್ಕಾರಕ್ಕೆ ತುಂಬಾ ನಷ್ಟವಾಗುತ್ತದೆ’ ಎಂದರು.

‘ಹೀಗಾಗಿ ನಾವು ನಿರಂತರವಾಗಿ ಗೂಡು ಖರೀದಿ ಮಾಡುತ್ತಿದ್ದೇವೆ. ಸರ್ಕಾರ, ನಮಗೆ ದುಡಿಮೆ ಬಂಡವಾಳ ನೀಡಬೇಕು. ವಾತಾವರಣದ ವೈಪರಿತ್ಯದಿಂದ ನಾವು ನಷ್ಟಕ್ಕೆ ಒಳಗಾದಾಗ ನಮ್ಮ ನೆರವಿಗೆ ಧಾವಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT