4
ಎಸ್.ಜೆ.ಸಿ.ಆರ್.ವಿದ್ಯಾನಿಕೇತನ ಶಾಲೆಯಲ್ಲಿ ಪ್ರಜಾವಾಣಿ ‘ಸಹಪಾಠಿ’ ಬಿಡುಗಡೆ

‘ಕನ್ನಡ ಪತ್ರಿಕೆ, ಪುಸ್ತಕ ಓದಿ; ಭಾಷೆ ಬೆಳೆಸಿ’

Published:
Updated:
ನಿಖಿತಾ

ದೊಡ್ಡಬಳ್ಳಾಪುರ: ಮಾತೃಭಾಷೆ ತಾಯಿಗೆ ಸಮಾನವಾದದ್ದು. ಅದನ್ನು ಉಳಿಸಿಕೊಳ್ಳಲು ಮಾತೃ ಭಾಷೆಯಲ್ಲಿ ಪ್ರಕಟವಾಗುವ ದಿನಪತ್ರಿಕೆ, ಪುಸ್ತಕ ಖರೀದಿಸಿ ಓದಬೇಕೆಂದು ಸರ್ಕಲ್‌ ಇನ್‌ಸ್ಪ‍ಕ್ಟರ್ ಜಿ.ಸಿದ್ದರಾಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ಮೆಳೇಕೋಟೆ ಕ್ರಾಸ್‌ ಎಸ್.ಜೆ.ಸಿ.ಆರ್.ವಿದ್ಯಾನಿಕೇತನ ಶಾಲೆಯಲ್ಲಿ ಸೋಮವಾರ ಪ್ರಜಾವಾಣಿ ವಿದ್ಯಾರ್ಥಿ ಸಂಚಿಕೆ ‘ಸಹಪಾಠಿ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕನ್ನಡದಲ್ಲಿ ವಿವಿಧ ಪ್ರಾದೇಶಿಕ ಸೊಗಡು ಹೊಂದಿರುವ ಆಡು ಭಾಷೆಗಳು ಇವೆ. ಈ ಭಾಷೆಗಳ ಬಗ್ಗೆ ಕೀಳರಿಮೆ ಇಲ್ಲದೆ ಮಾತನಾಡುವ ಮೂಲಕ ಉಳಿಸಿಕೊಳ್ಳಬೇಕು. ಈ ಬಗ್ಗೆ ಶಿಕ್ಷಕರು, ಹಿರಿಯರು ಮಕ್ಕಳಿಗೆ ತಿಳಿ ಹೇಳಬೇಕು. ಜಾಗತೀಕರಣದ ಸಂದರ್ಭದಲ್ಲಿ ಉದ್ಯೋಗ ಸೇರಿದಂತೆ ಎಲ್ಲ ದೃಷ್ಟಿಯಿಂದಲು ಇಂಗ್ಲಿಷ್‌ ಭಾಷೆ ಕಲಿಯುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

‘8ನೇ ತರಗತಿಯಲ್ಲಿ ಇದ್ದಾಗ ಪ್ರಥಮ ಬಾರಿಗೆ ಪ್ರಜಾವಾಣಿ ಪತ್ರಿಕೆ ಓದಲು ಆರಂಭಿಸಿದೆ. ಇಂದಿಗೂ ಪ್ರಜಾವಾಣಿ ಸುದ್ದಿ, ಮಾಹಿತಿ ನೀಡುವಲ್ಲಿ ವಿಶ್ವಾಸಾರ್ಹತೆ, ಗಟ್ಟಿತನ ಉಳಿಸಿಕೊಂಡು ಬಂದಿದೆ. ಇದೀಗ ವಿದ್ಯಾರ್ಥಿಗಳಿಗೆ ಮಾತ್ರ ಅಗತ್ಯ ಇರುವಷ್ಟು ಮಾಹಿತಿ ನೀಡುವ ಉದ್ದೇಶದಿಂದ ‘ಸಹಪಾಠಿ’ ವಿದ್ಯಾರ್ಥಿ ಸಂಚಿಕೆ ಹೊರ ತಂದಿರುವುದು ಸ್ವಾಗತಾರ್ಹ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನವನ್ನು ವಿದ್ಯಾರ್ಥಿ ಜೀವನದಿಂದಲೇ ತಿಳಿದುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಮುಂದಿನ ಉನ್ನತ ವ್ಯಾಸಂಗಕ್ಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಲು ಹೆಚ್ಚು ಸಹಕಾರಿಯಾಗಲಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಸುನಿಲ್‌ಕುಮಾರ್‌ ಮಾತನಾಡಿ, ‘ಇವತ್ತಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸಣ್ಣ ಹುದ್ದೆಯಿಂದ ಹಿಡಿದು ಉನ್ನತ ಹುದ್ದೆವರೆಗೂ ಪ್ರತಿ ಹಂತದಲ್ಲೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಇಂತಹ ಸಂದರ್ಭದಲ್ಲಿ ಪ್ರಜಾವಾಣಿಯ ‘ಸಹಪಾಠಿ’ ಎಲ್ಲ‌ ಹಂತದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ, ಕೆಎಎಸ್‌, ಐಎಎಸ್‌ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ಪಠ್ಯ ಪ್ರತಿನಿತ್ಯ ಪ್ರಕಟಿಸುತ್ತಿದೆ. ಈ ಮಾಹಿತಿ ಸಂಗ್ರಹ ಯೋಗ್ಯವಾಗಿದೆ. ನಮ್ಮಲ್ಲಿ ಸಾಮಾನ್ಯ ಜ್ಞಾನ ವೃದ್ಧಿಗೆ ದಿನ ಪತ್ರಿಕೆಗಳ ಓದು ಅತ್ಯಂತ ಮಹತ್ವದ್ದಾಗಿದೆ’ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮೆಳೇಕೋಟೆ ಕ್ರಾಸ್‌ನ ಎಸ್.ಜೆ.ಸಿ.ಆರ್.ವಿ.ಶಾಲೆಯ ಮುಖ್ಯಶಿಕ್ಷಕರಾದ ಎಸ್.ವೆಂಕಟೇಶಪ್ಪ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಅಪ್ಪಯ್ಯ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ವೆಂಕಟೇಶ್‌ಬಾಬು, ಶಾಲೆಯ ಸಹ ಶಿಕ್ಷಕ ವಿಜಯಕುಮಾರ್‌, ಮುಖಂಡರಾದ ಮುತ್ತಣ್ಣ, ಶ್ರೀನಿವಾಸ್‌ ಇದ್ದರು.

8ನೇ ತರಗತಿ ವಿದ್ಯಾರ್ಥಿನಿ ನಿಶ್ಚಿತಾ, ಮೋನಿಷಾ ಪ್ರಾರ್ಥಿಸಿದರು. ಶೇಕ್‌ಮೌಲ ನಿರೂಪಿಸಿದರು.

ವಿದ್ಯಾರ್ಥಿಗಳಿಗೆ ಪೂರ್ಣ ಮಾಹಿತಿ

ವಿದ್ಯಾರ್ಥಿಗಳಿಗೆ ಅಗತ್ಯ ಇರುವಷ್ಟು ಸಾಮಾನ್ಯ ಸುದ್ದಿ, ವಿದ್ಯಾಭ್ಯಾಸಕ್ಕೆ ತಕ್ಕಷ್ಟು ಮಾಹಿತಿಯನ್ನು ‘ಸಹಪಾಠಿ’ ನೀಡುತ್ತಿರುವುದು ಕಲಿಗೆ ಅನುಕೂಲ. ಇದರಿಂದ ಸಾಮಾನ್ಯ ಜ್ಞಾನ, ಪಠ್ಯಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ
ಮೋನಿಲಕಾ, 10ನೇ ತರಗತಿ

ಸರ್ಧೆಯ ಮಾರ್ಗದರ್ಶಿ

ವಿದ್ಯಾರ್ಥಿ ದಿಸೆಯಿಂದಲೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳ್ಳಲು ಇದು ಸಹಕಾರಿಯಾಗಿದೆ. ವಿಜ್ಞಾನ, ಸಾಹಿತ್ಯ, ಬದುಕಿನ ಮಾರ್ಗದರ್ಶಿ ಕೈಪಿಡಿಯಾಗಿ ‘ಸಹಪಾಠಿ’ ರೂಪುಗೊಂಡಿದೆ
ನಿಖಿತಾ, 10ನೇ ತರಗತಿ

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !