ಗುರುವಾರ , ಸೆಪ್ಟೆಂಬರ್ 19, 2019
26 °C
ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿ ಕಾರ್ಯಕರ್ತರಿಂದ ರವಾನೆ

ಸಂತ್ರಸ್ತರಿಗೆ ₹ 16 ಲಕ್ಷದ ಪರಿಹಾರ ಸಾಮಗ್ರಿ

Published:
Updated:
Prajavani

ದೇವನಹಳ್ಳಿ: ‘ಉತ್ತರ ಕರ್ನಾಟಕದ ಸಂತ್ರಸ್ತರ ನೆರವಿಗೆ ₹ 16 ಲಕ್ಷ ಮೌಲ್ಯದ ದಿನಬಳಕೆ ವಸ್ತು, ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ’ ಎಂದು ಆರ್.ಎಸ್.ಎಸ್.ಮುಖಂಡ ಗೋಪಾಲ್ ಹೇಳಿದರು.

ಇಲ್ಲಿನ ಪುಟ್ಟಪ್ಪನಗುಡಿ ಬೀದಿಯಲ್ಲಿನ ತಮ್ಮ ನಿವಾಸದ ಮುಂದೆ ದಿನಬಳಕೆಯ ವಸ್ತುಗಳು ಮತ್ತು ಪರಿಕರ ಹೊತ್ತ ಲಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. 

‘ರಾಜ್ಯದ ಮುಖ್ಯಸ್ಥರ ಆದೇಶದ ಮೇರೆಗೆ ಸ್ಥಳೀಯ ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿ ಕಾರ್ಯಕರ್ತರಿಂದ ಸಾರ್ವಜನಿಕವಾಗಿ ಸಂಗ್ರಹಿಸಲಾದ ದಿನಬಳಕೆ ವಸ್ತುಗಳನ್ನು ಬೆಂಗಳೂರಿನ ಹಲಸೂರಿನಲ್ಲಿರುವ ಆರ್.ಎಸ್.ಎಸ್ ಕೇಂದ್ರ ಕಚೇರಿಗೆ ರವಾನಿಸಲಾಗುತ್ತದೆ. ಈಗಾಗಲೇ ವಿಜಯಪುರ, ಬೂದಿಗೆರೆ ವ್ಯಾಪ್ತಿಯಿಂದ ಎರಡು ಸರಕು ಸಾಗಾಣಿಕೆ ವಾಹನಗಳಲ್ಲಿ ತಲುಪಿಸಲಾಗಿದ್ದು ಇಂದು ಮೂರನೇ ವಾಹನದಲ್ಲಿ ಕಳುಹಿಸಿಕೊಡಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಬಿ.ರಾಜಣ್ಣ ಮಾತನಾಡಿ, ನೆರೆ ಸಂತ್ರಸ್ತರಿಗೆ ಎಷ್ಟು ಪರಿಹಾರ ನೀಡಿದರೂ ಸಾಲದು. ಆದರೂ ತಾಲ್ಲೂಕು ವ್ಯಾಪ್ತಿಯಿಂದ 200 ಚೀಲ ಅಕ್ಕಿ (ಪ್ರತಿ ಚೀಲ 25 ಕೆ.ಜಿ), ಅಡುಗೆ ಮಾಡುವ ವಿವಿಧ ಗಾತ್ರದ 350 ಪಾತ್ರೆಗಳು, ಹತ್ತು ಕ್ವಿಂಟಲ್ ಗೋಧಿ ಹಿಟ್ಟು, ಎರಡು ಕ್ವಿಂಟಲ್ ತೊಗರಿ ಬೇಳೆ, ಒಂದು ಕ್ವಿಂಟಲ್ ಕಡಲೆ ಬೇಳೆ, 400 ಸ್ವೆಟರ್, 600 ಸೀರೆ, ಸಾಮಾನ್ಯ ರೋಗಗಳಿಗೆ ₹18 ಸಾವಿರ ಮೌಲ್ಯದ ಔಷಧಿ, 400 ಸ್ಟೀಲ್ ತಟ್ಟೆ, 1,500 ಸ್ಟೀಲ್ ಲೋಟ, 50 ಲೀಟರ್ ಗುಡ್ ಲೈಫ್ ಹಾಲಿನ ಪೊಟ್ಟಣ ಒಟ್ಟು 50 ಬಾಕ್ಸ್, 250 ಹೊದಿಕೆ, 5 ಕ್ವಿಂಟಲ್ ಬೂಸಾ, ತಲಾ 25 ಬಾಟಲ್ ಇರುವ (ಅರ್ಧ ಲೀಟರ್) ಒಟ್ಟು 125 ಬಾಕ್ಸ್ ಕುಡಿಯುವ ನೀರು ರವಾನಿಸಲಾಗುತ್ತಿದೆ. ಇದರ ಜೊತೆಗೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವ ಚಿಂತನೆ ಇದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಘಟಕ ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್ ಮಾತನಾಡಿ, ‘ಆರ್.ಎಸ್.ಎಸ್ ಸೂಚನೆ ಮೇರೆಗೆ ಅತಿವೃಷ್ಟಿಯಲ್ಲಿ ನೊಂದವರಿಗೆ ಮಾನವೀಯತೆಯಿಂದ ಸ್ಪಂದಿಸುವಂತೆ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಬಲವಂತ ಮತ್ತು ಒತ್ತಡದಿಂದ ಪರಿಕರ ಸಂಗ್ರಹ ಮಾಡುತ್ತಿಲ್ಲ. ಸ್ವಯಂಪ್ರೇರಿತರಾಗಿ ನೀಡುವವರಿಂದ ಮಾತ್ರ ಪಡೆಯಲಾಗುತ್ತದೆ’ ಎಂದರು.

‘ಹತ್ತಾರು ಜಿಲ್ಲೆಗಳಲ್ಲಿ ನೆರೆ ಸಂತ್ರಸ್ತರು ಇರುವುದರಿಂದ ಬೇರೆಡೆಯಿಂದ ಸಂಗ್ರಹವಾಗುವ ಪರಿಕರವನ್ನು ಆರ್‌ಎಸ್‌ಎಸ್‌ ಕೇಂದ್ರ ಕಚೇರಿ ಆವರಣದಲ್ಲಿ ಪರಿಶೀಲನೆ ನಡೆಸಿ ಅಗತ್ಯ ವಸ್ತುಗಳ ಪಟ್ಟಿಯನ್ನು ಮಾಡಿ ಈಗಾಗಲೇ ಪರಿಹಾರದ ಸರಕು ಸಾಗಾಣಿಕೆಗೆ ನಿಯೋಜನೆಗೊಂಡಿರುವ ಮಾರ್ಗಾಧಿಕಾರಿಗಳ ಮೂಲಕ ರವಾನಿಸಲಿದ್ದಾರೆ’ ಎಂದು ಹೇಳಿದರು.

ಬಿಜೆಪಿ ತಾಲ್ಲೂಕು ಘಟಕ ಉಪಾಧ್ಯಕ್ಷರಾದ ಕೆ.ಸಿ.ಮುನಿರಾಜು ರಾಧಾಕೃಷ್ಣ, ಪ್ರಧಾನ ಕಾರ್ಯದರ್ಶಿ ಸುನಿಲ್‌, ಖಜಾಂಚಿ ಮಂಜುನಾಥ್‌, ರೈತ ಮೋರ್ಚಾ ತಾಲ್ಲೂಕು ಘಟಕ ಉಪಾಧ್ಯಕ್ಷ ಜಿ.ಎನ್‌.ಗೋಪಾಲ್‌, ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಘಟಕ ಅಧ್ಯಕ್ಷ ಆನಂದಗೌಡ, ಮುಖಂಡರಾದ ಎಸ್.ಶಿವಪ್ರಸಾದ್‌, ಉಮೇಶ್‌, ಕೋಡಿಮಂಚೇನಹಳ್ಳಿ ಉಮೇಶ್‌, ಎ. ಬಿ.ವಿ.ಪಿ ಮುಖಂಡರಾದ ಪ್ರಜೀತ್‌, ಅನಿಲ್‌ ಇದ್ದರು.

Post Comments (+)