ಜಿವಿಎಸ್ ಧ್ವನಿ ಇಲ್ಲದವರ ದನಿ: ವೀರಣ್ಣ ಎನ್.

ದೇವನಹಳ್ಳಿ: ‘ಸಿರಿವಂತರ ಮನೆಯಲ್ಲಿ ಹುಟ್ಟಿ ಕೂಲಿ ಕಾರ್ಮಿಕರು, ಕೃಷಿಕರ ಪರ ವಿದ್ಯಾರ್ಥಿ ದಿಸೆಯಿಂದಲೇ ಹೋರಾಟ ನಡೆಸಿದ್ದು ಜಿ.ವಿ. ಶ್ರೀರಾಮರೆಡ್ಡಿ ಅವರ ಹೆಗ್ಗಳಿಕೆಯಾಗಿದೆ’ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ವೀರಣ್ಣ ಎನ್. ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಾಂತ ರೈತ ಸಂಘದಿಂದ ಆಯೋಜಿಸಿದ್ದ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಯುವಜನರು, ನೌಕರರು ಸೇರಿದಂತೆ ನೀರಾವರಿ ಪರವಾದ ಹೋರಾಟದಲ್ಲಿ ಅವರ ಛಾಯೆ ಇತ್ತು. ಧ್ವನಿ ಇಲ್ಲದವರಿಗೆ ದನಿಯಾಗಿದ್ದರು. ಹಲವು ದಶಕಗಳ ಸಾರ್ವಜನಿಕ ಮತ್ತು ರಾಜಕಾರಣದ ಬದುಕಿನಲ್ಲಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಅವರಲ್ಲಿದ್ದ ಬದ್ಧತೆಯಿಂದಲೇ ಜನನಾಯಕರಾಗಿದ್ದರು. ಅವಿಭಜಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಹೋರಾಟಕ್ಕೆ ನಾಂದಿ ಹಾಡಿದ್ದರು ಎಂದು ಸ್ಮರಿಸಿದರು.
ಪ್ರಾಂತ ರೈತ ಸಂಘದ ಗೌರವಾಧ್ಯಕ್ಷ ವಿ. ನಾರಾಯಣಸ್ವಾಮಿ ಮಾತನಾಡಿ, ‘ಶಾಸನ ಸಭೆಯಲ್ಲಿ ಗಣಿಗಾರಿಕೆಯಿಂದ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದರು. ಸಾವಿರಾರು ಕೋಟಿ ರಾಯಧನ ಸರ್ಕಾರಕ್ಕೆ ಪಾವತಿಯಾಗುವಂತೆ ಮಾಡಿದ್ದು ಅವರ ಹಿರಿಮೆ. ಮಕ್ಕಳ ಅಪೌಪ್ಟಿಕತೆ ನಿವಾರಣೆಗಾಗಿ ಅಂಗನವಾಡಿ ಕೇಂದ್ರಗಳ ಸ್ಥಾಪನೆಯಲ್ಲೂ ಅವರ ಪಾತ್ರ ಮಹತ್ವದ್ದಾಗಿದೆ’ ಎಂದರು.
ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಡಿ.ಎಸ್. ಗೋವಿಂದ ಮಾತನಾಡಿ, ‘1970ರಲ್ಲಿ ಉಳುವವನೇ ಹೊಲದ ಒಡೆಯನಾಗಬೇಕು ಎಂಬ ಕೂಗು ರಾಜ್ಯದ ಉದ್ದಗಲಕ್ಕೂ ವ್ಯಾಪಿಸಿತು. ಆಗ ಶ್ರೀರಾಮರೆಡ್ಡಿ ಅವರು ಸರ್ಕಾರ ಸಾಗುವಳಿ ಭೂಮಿಯನ್ನು ಮಂಜೂರು ಮಾಡುವ ಕಾಯ್ದೆಯನ್ನು ಜಾರಿ ಮಾಡುವಂತೆ ಹೋರಾಟ ಮಾಡಿದ್ದರು ಎಂದು ಸ್ಮರಿಸಿದರು.
ಮುಖಂಡರಾದ ಯಲಿಯೂರು ಹನುಮಂತಪ್ಪ, ತಾಲ್ಲೂಕು ಸೊಸೈಟಿ ಮಾಜಿ ಅಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಪುಷ್ಪಾವತಮ್ಮ ಎಚ್., ಗೌರಮ್ಮ, ಸಾವಿತ್ರಮ್ಮ, ಪದ್ಮಮ್ಮ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.