ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿಗಾಗಿ ವೃದ್ಧರ ಅಲೆದಾಟ: ಕ್ರಮಕ್ಕೆ ಒತ್ತಾಯ

ಸಿಬ್ಬಂದಿ ಕೊರತೆ, ಸರ್ವರ್ ಸಮಸ್ಯೆ ಇಂದ ದಿನಗಟ್ಟಲೆ ಕಾಯಬೇಕಾದ ಸ್ಥಿತಿ
Last Updated 26 ಜೂನ್ 2019, 16:31 IST
ಅಕ್ಷರ ಗಾತ್ರ

ವಿಜಯಪುರ: ‘ಇಲ್ಲಿನ ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಜನರಿಗೆ ಸಿಗಬೇಕಿರುವ ಸೌಲಭ್ಯಗಳಲ್ಲಿ ವಿಳಂಬವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು’ ಎಂದು ಬಿಜೆಪಿ ಮುಖಂಡ ಕನಕರಾಜು ಒತ್ತಾಯಿಸಿದ್ದಾರೆ.

‘ನಗರದಲ್ಲಿ 23 ವಾರ್ಡ್‌ಗಳಿವೆ. ತಾಲ್ಲೂಕು ಕೇಂದ್ರ ದೇವನಹಳ್ಳಿಗಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರವಾಗಿದೆ. 50 ಸಾವಿರ ಜನಸಂಖ್ಯೆ ಇದೆ. ಬಹುತೇಕ ಮಂದಿ ಬ್ಯಾಂಕುಗಳ ಬದಲಿಗೆ ಅಂಚೆ ಕಚೇರಿಯನ್ನೇ ನೆಚ್ಚಿ ವ್ಯವಹರಿಸುತ್ತಿದ್ದಾರೆ. ಆದರೆ ಇಲ್ಲಿ ಒಬ್ಬರು ಪೋಸ್ಟ್ ಮಾಸ್ಟರ್ ಮಾತ್ರ ಇದ್ದಾರೆ. ಯಾವಾಗ ಅಂಚೆ ಕಚೇರಿಗೆ ಬಂದರೂ ಜನಸಂದಣಿ ಇರುತ್ತದೆ. ವೃದ್ಧರು ಪಿಂಚಣಿ ಹಣಕ್ಕಾಗಿ ಗಂಟೆಗಟ್ಟಲೆ ಕಾಯಬೇಕಿದೆ’ ಎಂದು ಅವರು ಹೇಳಿದರು.

‘ಸಿಬ್ಬಂದಿ ಕೊರತೆ ಇದೆ. ಪಿಂಚಣಿ, ಮನಿ ಆರ್ಡರ್, ಆಧಾರ್ ತಿದ್ದುಪಡಿ ಎಲ್ಲವನ್ನೂ ನಾವೇ ನಿಭಾಯಿಸಬೇಕು. ಸಹಕರಿಸಿ ಎನ್ನುತ್ತಾರೆ ಅಧಿಕಾರಿಗಳು. ಕೆಲವೊಮ್ಮೆ ಸರ್ವರ್ ಸಮಸ್ಯೆಯಾದರೆ ಗಂಟೆಗಳ ಕಾಲ ಕಾದು ಕುಳಿತಿರಬೇಕಿರುತ್ತದೆ. ಸರ್ಕಾರ ಪಿಂಚಣಿ ಹಣ ಮದ್ಯವರ್ತಿಗಳ ಮೂಲಕ ದುರುಪಯೋಗವಾಗಬಾರದು ಎನ್ನುವ ಕಾರಣಕ್ಕೆ ಬ್ಯಾಂಕ್ ಖಾತೆ, ಅಂಚೆ ಕಚೇರಿಯಲ್ಲಿನ ಖಾತೆಗಳಿಗೆ ಜಮೆ ಮಾಡುತ್ತಿದೆ. ಕೆಲ ವೃದ್ಧರು ಮನೆಯಿಂದ ಹೊರ ಬರಲಿಕ್ಕೂ ಸಾಧ್ಯವಾಗದೆ ಅನಿವಾರ್ಯವಾಗಿ ಮತ್ತೊಬ್ಬರನ್ನು ಅವಲಂಬಿಸಲೇಬೇಕಿದೆ. ಅವರೇ ಸ್ವತಃ ಅಂಚೆ ಕಚೇರಿ ಅಥವಾ ಬ್ಯಾಂಕಿಗೆ ಹೋಗಿ ಸಾಲಿನಲ್ಲಿ ನಿಂತು ಪಿಂಚಣಿ ಪಡೆಯಬೇಕಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಸ್ಥಳೀಯ ನಿವಾಸಿ ಕೇಶವಮೂರ್ತಿ ಮಾತನಾಡಿ ‘ಅಂಚೆ ಇಲಾಖೆ ಮಾತ್ರವಲ್ಲದೆ ಯಾವುದೇ ಇಲಾಖೆಗೆ ಹೋದರೂ ಇದೇ ಪರಿಸ್ಥಿತಿ ಇದೆ. ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ಮನೆ ಬಾಗಿಲಿಗೆ ಸೌಲಭ್ಯ ತಲುಪಿಸುತ್ತೇವೆ ಎನ್ನುವುದು ಬಾಯಿ ಮಾತಿಗೆ ಮಾತ್ರ ಎಂಬಂತಿದೆ. ಆದರೆ ವಾಸ್ತವವೇ ಬೇರೆ. ಯಾವುದೇ ಯೋಜನೆ ಜನರ ಮನೆ ಬಾಗಿಲಿಗೆ ಬರುತ್ತಿಲ್ಲ. ಅಧಿಕಾರಿಗಳಿಂದ ಸಿಬ್ಬಂದಿ ಕೊರತೆ ಎನ್ನುವ ಉತ್ತರ ಬರುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿಜಯಪುರಕ್ಕೆ ಅಧಿಕಾರಿಗಳು ಬರಲು ಬೇಸರಿಸುತ್ತಾರೆ. ಕೆಲಸ ಜಾಸ್ತಿ, ಸಿಬ್ಬಂದಿ ಕಡಿಮೆ. ಜೊತೆಗೆ ಜನರಿಂದ ಬರುವ ಪ್ರಶ್ನೆಗಳನ್ನು ಎದುರಿಸಬೇಕು. ಸೇವೆ ಸ್ವಲ್ಪ ತಡವಾದರೂ ಜನ ಅಧಿಕಾರಿಗಳ ಮೇಲೆ ಮುಗಿ ಬೀಳುತ್ತಾರೆ. ಸರ್ವರ್ ಅಂದ್ರೆ ಏನು ಅಂತ ವೃದ್ಧರಿಗೆ ಗೊತ್ತಿಲ್ಲ. ಬೆಳಿಗ್ಗೆ ಎಂಟು ಗಂಟೆಯಿಂದಲೇ ಊಟ–ತಿಂಡಿ ಇಲ್ಲದೆ ಕಾಯುತ್ತಿರುತ್ತಾರೆ. ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ನೇಮಕ ಮಾಡಬೇಕು. ಆಗ ಮಾತ್ರ ನಿಗದಿತ ಸಮಯದಲ್ಲಿ ಸೇವೆ ಲಭ್ಯವಾಗಲು ಸಾಧ್ಯ’ ಎಂದರು.

ಸ್ಥಳೀಯ ನಿವಾಸಿ ಕೃಷ್ಣಮೂರ್ತಿ ಮಾತನಾಡಿ ‘ಅಂಚೆ ಕಚೇರಿ ಮುಂಭಾಗದಲ್ಲಿ ಅಂಚೆ ಪತ್ರಗಳನ್ನು ಹಾಕಲು ಪೆಟ್ಟಿಗೆ ಇಟ್ಟಿದ್ದಾರೆ. ಇದರ ಮುಂದೆ ಸಾಲಾಗಿ ದ್ವಿಚಕ್ರ ವಾಹನ ನಿಲ್ಲಿಸಿರುವುದರಿಂದ ಅದರ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ. ಪೊಲೀಸ್ ಇಲಾಖೆ ಇದನ್ನು ಗಮನಿಸಿ ವಾಹನಗಳನ್ನು ಇಲ್ಲಿ ನಿಲ್ಲಿಸದಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT