ಭಾನುವಾರ, ಡಿಸೆಂಬರ್ 15, 2019
23 °C

ಕಂದಾಯ ದಾಖಲಾತಿ ನಾಡಕಚೇರಿಗೆ ರವಾನಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಹೋಬಳಿಯ ಕಂದಾಯ ದಾಖಲೆಗಳನ್ನು ಇಲ್ಲಿನ ನಾಡಕಚೇರಿಗೆ ವರ್ಗಾವಣೆ ಮಾಡುವಂತೆ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇದುವರೆಗೂ ವರ್ಗಾಯಿಸಿಲ್ಲ’ ಎಂದು ಮುಖಂಡ ಸುರೇಶ್ ಆರೋಪಿಸಿದರು.

‘ಪಹಣಿ, ಮ್ಯುಟೇಷನ್ ಸೇರಿದಂತೆ ಅಗತ್ಯ ಹಳೇ ದಾಖಲೆಗಳು ಪಡೆಯಬೇಕಾದರೆ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕು. ಇಲ್ಲಿ ನಾಡಕಚೇರಿಯಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಇಲ್ಲಿನ ಕಂಪ್ಯೂಟರ್ ಕೇಂದ್ರದಲ್ಲಿ ಜಾತಿ, ಆದಾಯ ಪ್ರಮಾಣ ಪತ್ರ, ಹೊಸ ಪಹಣಿ, ಮ್ಯುಟೇಷನ್ ಪಡೆಯಲು ಅವಕಾಶವಿದೆ. ಪಹಣಿಗಳು, ಮ್ಯುಟೇಷನ್‌ಗಳಲ್ಲಿನ ತಿದ್ದುಪಡಿ ಮಾಡಿಸಿಕೊಳ್ಳಬೇಕಾದರೆ ತಾಲ್ಲೂಕು ಕಚೇರಿಗೆ ಹೋಗಬೇಕು. ಕೆಲ ಬಡವರು ತಾಲ್ಲೂಕು ಕೇಂದ್ರಕ್ಕೆ ಹೋಗಿ ಬರಲು ಸಾಧ್ಯವಾಗದೆ, ಮಧ್ಯವರ್ತಿಗಳ ಮೊರೆ ಹೋಗಿ ದುಬಾರಿ ಹಣ ಕೊಡಬೇಕಾಗಿದೆ’ ಎಂದರು.

ಮುಖಂಡ ಶ್ರೀನಿವಾಸಮೂರ್ತಿ ಮಾತನಾಡಿ, ‘ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾದ ಮೇಲೆ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿರುವ ಕಾರಣ ಪಟ್ಟಣದಲ್ಲೂ ಭೂಮಿಯ ಬೆಲೆ ಜಾಸ್ತಿಯಾಗಿದೆ. ಸಾಕಷ್ಟು ಸರ್ಕಾರಿ ಗೋಮಾಳದ ಭೂಮಿ ತಮಗೆ ಅನುಕೂಲಕ್ಕೆ ತಕ್ಕಂತೆ ದಾಖಲೆ ಮಾಡಿಕೊಂಡು ಬಿಟ್ಟಿದ್ದಾರೆ. ಸರ್ಕಾರಿ ಭೂಮಿ ಉಳಿಸಬೇಕು ಎಂದು ನಾವು ಸಾಕಷ್ಟು ಹೋರಾಟಗಳನ್ನು ಮಾಡಿದ್ದೇವೆ. ಹೋಬಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾಡಕಚೇರಿಗೆ ವರ್ಗಾವಣೆ ಮಾಡಬೇಕು, ಕಡತಗಳು ಇಲ್ಲಿಗೆ ತಂದರೆ ಭದ್ರತೆಯ ಕೊರತೆಯಿರುತ್ತದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ರಾತ್ರಿಯ ವೇಳೆ ಪೊಲೀಸರು ಗಸ್ತು ಮಾಡುತ್ತಾರೆ. ನಾಡಕಚೇರಿಗೆ ಪ್ರತ್ಯೇಕವಾಗಿ ಭದ್ರತೆ ಒದಗಿಸುವ ಮೂಲಕ ದಾಖಲಾತಿಗಳು ಇಲ್ಲಿಗೆ ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ರೈತರಿಗೆ ಅನುಕೂಲವಾಗಬೇಕು, ಮಧ್ಯವರ್ತಿಗಳ ಮೊರೆಹೋಗಿ ದಾಖಲೆಗಳು ಪಡೆಯುವುದನ್ನು ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಹಿಂದೆ ದಾಖಲೆಗಳನ್ನು ಇಲ್ಲಿಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯ ಮಾಡಿದ್ದೆವು. ಅಂದಿನ ತಹಶೀಲ್ದಾರ್ ಅವರು ಕಡಗಳನ್ನೂ ಸಿದ್ದಪಡಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದರು. ಭದ್ರತೆ ಕಾರಣ ನೀಡಿ ವಿಳಂಬ ಮಾಡಿದ್ದರು ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಬೇಸರ ವ್ಯಕ್ತಪಡಿಸಿದರು.

ತಹಶೀಲ್ದಾರ್ ಅನಿಲ್‌ಕುಮಾರ್ ಮಾತನಾಡಿ, ‘ಎಲ್ಲಾ ಹೋಬಳಿಗಳ ದಾಖಲೆ ಕಡತಗಳನ್ನು ಇಂಡೆಕ್ಸ್ ಮಾಡಿದ್ದೇವೆ. ಹೋಬಳಿಗೆ ಸಂಬಂಧಿಸಿದ ಕಡತಗಳು ವರ್ಗಾವಣೆ ಮಾಡಿಕೊಳ್ಳುವಂತೆ ಉಪತಹಶೀಲ್ದಾರ್ ಸೂಚನೆ ನೀಡುತ್ತೇನೆ’ ಎಂದರು.

ಪ್ರತಿಕ್ರಿಯಿಸಿ (+)