ಮಂಗಳವಾರ, ನವೆಂಬರ್ 19, 2019
28 °C
ಸ್ವಯಂಪ್ರೇರಿತ ರಕ್ತದಾನ ಶಿಬಿರ, ರಕ್ತ ಸಂಗ್ರಹ ಮಹತ್ವದ ಕುರಿತು ತಿಳಿವಳಿಕೆ

‘ರಕ್ತದಾನದಿಂದ ಅಡ್ಡ ಪರಿಣಾಮಗಳಿಲ್ಲ’

Published:
Updated:
Prajavani

ವಿಜಯಪುರ: ‘ರಕ್ತಕ್ಕೆ ಪರ್ಯಾಯ ಮತ್ತೊಂದಿಲ್ಲ. ಅದನ್ನು ಇತರ ಯಾವುದೇ ರೀತಿ ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ರಕ್ತದ ಕೊರತೆ ಅನುಭವಿಸುತ್ತಿರುವವರಿಗೆ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬೇಕು’ ಎಂದು ಪ್ರಗತಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಎಸ್.ಕೃಪಾಶಂಕರ್ ಹೇಳಿದರು.

ಇಲ್ಲಿನ ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬುಧವಾರ ಪ್ರಗತಿ ಪ್ರಥಮ ದರ್ಜೆ ಕಾಲೇಜು, ಯುವ ರೆಡ್‌ಕ್ರಾಸ್ ಸೊಸೈಟಿ, ಎನ್ಎಸ್ಎಸ್ ಘಟಕ, ಪ್ರಗತಿ ಕೈಗಾರಿಕಾ ತರಬೇತಿ ಕೇಂದ್ರ ವಿಜಯಪುರ, ಸಮುದಾಯ ಆರೋಗ್ಯ ಕೇಂದ್ರ ವಿಜಯಪುರ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ವಯಂಪ್ರೇರಿತ ಉಚಿತ ರಕ್ತದಾನ ಶಿಬಿರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಜೀವನದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಬಹುದಾದ ಸಾಮಾಜಿಕ ಕಾರ್ಯ ರಕ್ತದಾನ. ಒಬ್ಬರು ದಾನ ನೀಡುವ ರಕ್ತದಿಂದ ಮೂರು ಜನರ ಜೀವ ಉಳಿಸಲು ಸಾಧ್ಯವಿದೆ. ರಕ್ತಹೀನತೆ, ನಾನಾ ಕಾಯಿಲೆಗಳಿಂದ ಬಳಲುವವರು ಮತ್ತು ಅಪಘಾತದಂತಹ ತುರ್ತು ಸಂದರ್ಭಗಳನ್ನು ನಿಭಾಯಿಸಲು ರಕ್ತ ಸಂಗ್ರಹದ ಅಗತ್ಯವಿದೆ. ಅಂತಹ ಸಂಕಷ್ಟದಲ್ಲಿರುವವರ ನೆರವಿಗೆ ಬರಲು ಪ್ರತಿಯೊಬ್ಬ ಆರೋಗ್ಯವಂತರೂ ರಕ್ತದಾನಕ್ಕೆ ಮುಂದಾಗುವುದರ ಮೂಲಕ ಮಾನವೀಯತೆ ಮೆರೆಯಬೇಕು’ ಎಂದರು.

ಪ್ರಾಂಶುಪಾಲ ಡಾ.ಎನ್.ನಾಗರಾಜ್ ಮಾತನಾಡಿ, ‘ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ರಕ್ತದ ಅವಶ್ಯಕತೆ ಬರುತ್ತದೆ. ರಕ್ತದಾನ ಮಾಡುವುದರಿಂದ ಪುನಃ ರಕ್ತ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಮಾತ್ರವಲ್ಲ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಆದ್ದರಿಂದ ಆರೋಗ್ಯವಂತ 18ರಿಂದ 65 ವರ್ಷದೊಳಗಿನವರು ರಕ್ತದಾನ ಮಾಡಬೇಕು. ಜತೆಗೆ ಇತರರನ್ನು ರಕ್ತದಾನ ಮಾಡಲು ಪ್ರೇರೇಪಿಸಬೇಕು’ ಎಂದರು.

ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಆರ್.ಶೆಟ್ಟಿನಾಯಕ್ ಮಾತನಾಡಿ, ‘ಇಂದು ಅನೇಕರು ಸಂಚಾರ ನಿಯಮಗಳನ್ನು ಪಾಲಿಸದೆ ಅಪಘಾತಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಬೇಕು. ರಕ್ತದಾನದ ಬಗ್ಗೆ ಹಲವರಿಗೆ ತಪ್ಪು ಕಲ್ಪನೆಗಳಿವೆ. ಆದರೆ ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುತ್ತದೆಯೇ ವಿನಾ ಹಾಳಾಗುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ರಕ್ತದಾನದ ಮಹತ್ವ ಅರಿತು ಜೀವರಕ್ಷಣೆ ಮಾಡಬೇಕು’ ಎಂದರು.‌

ಯೂತ್ ರೆಡ್‌ಕ್ರಾಸ್ ಸೊಸೈಟಿ ವೈದ್ಯಾಧಿಕಾರಿ ಡಾ.ನರೇಶ್‌ ಬಾಬು, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಶಕೀಲಾ, ಐಟಿಐ ಕಾಲೇಜು ಪ್ರಾಂಶುಪಾಲ ವೆಂಕಟೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್, ಡಾ.ಕುಮಾರ್, ಶ್ರೀನಿವಾಸ್, ನವೀನ್, ಮಂಜುನಾಥ್, ಸತೀಶ್, ಸುಮಂತ್ ಇದ್ದರು.

ಪ್ರತಿಕ್ರಿಯಿಸಿ (+)