ಡಿಸಿ ಕಚೇರಿಗೆ ಸೌರ ವಿದ್ಯುತ್‌ ವ್ಯವಸ್ಥೆ

7
ನೂತನ ಜಿಲ್ಲಾಡಳಿತ ಕಚೇರಿಗೆ ಜಿಲ್ಲಾಧಿಕಾರಿ ಕರಿಗೌಡ ಭೇಟಿ, ಪರಿಶೀಲನೆ

ಡಿಸಿ ಕಚೇರಿಗೆ ಸೌರ ವಿದ್ಯುತ್‌ ವ್ಯವಸ್ಥೆ

Published:
Updated:
Deccan Herald

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ನೂತನ ಜಿಲ್ಲಾಡಳಿತ ಕಚೇರಿಗೆ ಸೌರ ವಿದ್ಯುತ್‌ ಮತ್ತು ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು.

ತಾಲ್ಲೂಕಿನ ಚಪ್ಪರದಕಲ್ಲು ಬಳಿ ಇರುವ ಜಿಲ್ಲಾಡಳಿತ ಕಚೇರಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಅ.2ರಂದು ಜಿಲ್ಲಾಡಳಿತ ಕಚೇರಿ ಅಧಿಕೃತವಾಗಿ ಕಾರ್ಯಾರಂಭ ಮಾಡಲು ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಅಗತ್ಯ ಕಾಮಗಾರಿಗೆ ಮೊದಲ ಆದ್ಯತೆ ನೀಡುವಂತೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ ಎಂದರು.

ಆಡಳಿತ ಕಚೇರಿ ಒಳ ಆವರಣ ಕಾಮಗಾರಿ ಬಹುತೇಕ ಮುಗಿದಿದೆ. ಕೆಲವೊಂದು ಕೊಠಡಿಗಳ ಬಾಗಿಲು ಮತ್ತು ಬಣ್ಣ ಬಳಿಯುವ ಕೆಲಸ ಈ ತಿಂಗಳ ಅಂತ್ಯಕ್ಕೆ ಮುಗಿಯಲಿದೆ. ಕಚೇರಿ ಹೊರಭಾಗದಲ್ಲಿ ನಾಲ್ಕು ದಿಕ್ಕುಗಳಿಂದ ಪ್ರವೇಶ ದ್ವಾರವಿದ್ದು ಸುತ್ತ ರಸ್ತೆ ಕಾಮಗಾರಿ ಬಾಕಿ ಇದೆ ಎಂದು ತಿಳಿಸಿದರು.

ಬೃಹತ್ ಆಡಳಿತ ಕಚೇರಿ ಸಂಕೀರ್ಣದ ಮೇಲ್ಭಾಗ ಅಂದಾಜು 1.10 ಎಕರೆ ವಿಸ್ತೀರ್ಣದಲ್ಲಿ ಸೌರ ವಿದ್ಯುತ್‌ ವ್ಯವಸ್ಥೆ ಅಳವಡಿಸಿದರೆ ಕೊಳವೆ ಬಾವಿ, ಮೋಟಾರ್ ಪಂಪ್ ಮತ್ತು ಕಚೇರಿ ವ್ಯಾಪ್ತಿಯಲ್ಲಿ ಫ್ಯಾನ್ ಮತ್ತು ದೀಪಗಳಿಂದ ವಿದ್ಯುತ್ ಉಳಿಸಬಹುದು. ಹನಿ ನೀರು ಅತ್ಯಮೂಲ್ಯವಾಗಿರುವುದರಿಂದ ಮಳೆ ನೀರು ಸಂಗ್ರಹ ಪದ್ಧತಿ ಅನಿರ್ವಾಯವಾಗಿದೆ ಎಂದರು.

ಪ್ರಸ್ತುತ ಜಿಲ್ಲಾಡಳಿತ ಕಚೇರಿ ಕಟ್ಟಡ ಮತ್ತು ಜಾಗ 9ಎಕರೆ ವ್ಯಾಪ್ತಿ ಹೊಂದಿದೆ. ಕಟ್ಟಡದ ಒಳ ಆವರಣದಲ್ಲಿ ಅಗತ್ಯವಿರುವ ಜಾಗದಲ್ಲಿ ಸಸಿ ಬೆಳೆಸಲಾಗುತ್ತದೆ. ಹೊರ ಆವರಣದ ತಡೆಗೋಡೆ ಸುತ್ತ ವಿವಿಧ ಜಾತಿಯ ಸಸಿ ನೆಡಬೇಕು ಮತ್ತು ಮುಖ್ಯದ್ವಾರದ ಮುಂಭಾಗ ಅಲಂಕಾರಿಕ ಹೂವಿನ ಗಿಡಗಳು ಮತ್ತು ಹುಲ್ಲು ಹಾಸು ಆಳವಡಿಸುವಂತೆ ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ₹10 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಸೌಲಭ್ಯಗಳ ಕೊರತೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಕ್ಯಾಂಟೀನ್ ವ್ಯವಸ್ಥೆ ಸದ್ಯಕ್ಕಿಲ್ಲ. ಜಿಲ್ಲಾಡಳಿತ ಕಚೇರಿ ಆರಂಭವಾದರೆ ಹಲವು ಉಪಾಹಾರ ಕೇಂದ್ರಗಳು ತಲೆ ಎತ್ತಲಿವೆ. ಕುಡಿಯುವ ನೀರನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಪೂರೈಕೆ ಮಾಡಲಿದೆ. ಜಿಲ್ಲಾ ಕೇಂದ್ರಕ್ಕೆ ಸಕಾಲದಲ್ಲಿ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಅರಣ್ಯಾಧಿಕಾರಿ ಬೈರಾರೆಡ್ಡಿ, ಪ್ರೊಬೆಷನರಿ ಉಪ ವಿಭಾಗಾಧಿಕಾರಿ ಮಮತಾ ಇದ್ದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !