ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಸ್ಥೈರ್ಯ ತುಂಬಿಸಲು ಕ್ರೀಡೆ ಸಹಕಾರಿ

’ಧಮ್ಮ ಟ್ರೋಫಿ-2019’ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ
Last Updated 24 ಮಾರ್ಚ್ 2019, 13:45 IST
ಅಕ್ಷರ ಗಾತ್ರ

ವಿಜಯಪುರ: ಕ್ರೀಡೆಗಳು ಯುವಜನರನ್ನು ದುಶ್ಚಟಗಳಿಂದ ದೂರ ಮಾಡಿ, ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬಿಸಲು ಸಹಕಾರಿಯಾಗುತ್ತದೆ ಎಂದು ನಳಂದಾ ರೆಸಿಡೆನ್ಸಿಯಲ್ ಇಂಟರ್ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಎಂ. ಲೋಕೇಶ್ ಹೇಳಿದರು.

ಸಮೀಪದ ಚೌಡಪ್ಪನಹಳ್ಳಿ ಇರುವ ಸ್ಕೂಲ್‌ನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಹಾಗೂ ಪ್ರೌಢಶಾಲೆಯ ಬಾಲಕ, ಬಾಲಕಿಯರ ’ಧಮ್ಮ ಟ್ರೋಫಿ-2019’ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬದಲಾಗುತ್ತಿರುವ ಸಮಾಜದಲ್ಲಿ ಯುವಜನರು ಹೊಣೆಗಾರಿಕೆಯನ್ನು ಮರೆಯುತ್ತಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಲ್ಲಿ ತೊಡಗುತ್ತಿದ್ದಾರೆ. ಇದರ ಜೊತೆಯಲ್ಲೇ ಸ್ಥಳೀಯ ಕ್ರೀಡೆಗಳನ್ನು ಮರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಯುವಜನರ ಸಂಘಟನೆಯ ಜೊತೆಗೆ ಅವರಲ್ಲಿ ಹುದುಗಿಹೋಗುತ್ತಿರುವ ಆತ್ಮವಿಶ್ವಾಸವನ್ನು ಹೊರಗೆಳೆಯಲಿಕ್ಕೆ ಸಾಧ್ಯವಾಗುತ್ತದೆ ಎಂದರು.

ವಕೀಲ ಸಿದ್ಧಾರ್ಥ ಮಾತನಾಡಿ, ಕ್ರೀಡೆಗಳೂ ಶಿಕ್ಷಣದ ಒಂದು ಭಾಗವಾಗಿವೆ. ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ, ವಯಸ್ಕರೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕ ಸಾಮರ್ಥ್ಯ ಹಾಗೂ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ರಾಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಮೊದಲು ನಗರ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು ಕ್ರೀಡೆಗಳನ್ನು ಬಿಟ್ಟು, ಟಿ.ವಿಗಳು, ಕಂಪ್ಯೂಟರ್‌ಗಳ ಮುಂದೆ ಕುಳಿತು ಕಾಲ ಕಳೆಯುತ್ತಿದ್ದರು. ಈಗ ಗ್ರಾಮೀಣ ಪ್ರದೇಶಗಳಲ್ಲಿನ ಯುವಜನರೂ ಅದೇ ಕೆಲಸ ಮಾಡುತ್ತಿದ್ದಾರೆ ಎಂದರು.

ಗ್ರಾಮಾಂತರ ಪ್ರದೇಶಗಳಲ್ಲಿ ಯುವಜನರು ಪ್ರತಿದಿನ ಸಂಜೆ ಸ್ಥಳೀಯ ಕ್ರೀಡೆಗಳಾದ ವಾಲಿಬಾಲ್, ಕಬಡ್ಡಿಯಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುತ್ತಿದ್ದರು. ಆಗ ಎಲ್ಲರನ್ನು ಒಗ್ಗಟ್ಟು, ಪ್ರೀತಿ ವಿಶ್ವಾಸಗಳಿರುತ್ತಿದ್ದವು. ಈಗೆಲ್ಲವೂ ತಂತ್ರಜ್ಞಾನ ಮುಂದುವರೆದಿರುವುದರಿಂದ ಪ್ರೀತಿ, ವಿಶ್ವಾಸಗಳು ಕಣ್ಮರೆಯಾಗಿ ಪ್ರತಿಯೊಂದು ಹಂತದಲ್ಲೂ ರಾಜಕೀಯವಾಗಿಯೆ ನೋಡುತ್ತಿದ್ದಾರೆ ಎಂದರು.

ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರಗಳನ್ನು ವಿತರಣೆ ಮಾಡಲಾಯಿತು. ವಿಜೇತರಾದ ತಂಡಗಳಿಗೆ ಬಹುಮಾನ ವಿತರಣೆ ಮಾಡಿದರು. ದೇವನಹಳ್ಳಿ ವಾರಿಯರ್ಸ್, ದೇವನಾಯಕನಹಳ್ಳಿ ಬ್ಲಾಸ್ಟರ್, ಬೂದಿಗೆರೆ ಲಯನ್ಸ್, ಕನ್ನಮಂಗಲ ಟೈಗರ್ಸ್, ಪ್ಯಾಂಥರ‍್ಸ್, ಬೊಮ್ಮನಹಳ್ಳಿ ಆರ್.ಸಿ.ಬಿ. ಸ್ಕೋಡ್, ಗಂಗವಾರ ಸೂಪರ್‌ ಕಿಂಗ್ಸ್, ಚೌಡಪ್ಪನಹಳ್ಳಿ ರಾಯಲ್ ಚಾಲೆಂಜರ್ಸ್‌ ತಂಡಗಳು ಭಾಗವಹಿಸಿದ್ದವು.

ಪ್ರಥಮ ಬಹುಮಾನವನ್ನು ಪ್ಯಾಂಥರ್ಸ್ ತಂಡ, ದ್ವಿತೀಯ ಬಹುಮಾನ ರಾಯಲ್ ಚಾಲೆಂಜರ್ಸ್‌ ತಂಡವರು ಪಡೆದುಕೊಂಡರು.

ಮುಖಂಡರಾದ ಚಾಂದ್‌ ಪಾಷ, ಬಿದಲಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಲಿತೇಶ್, ಅಶ್ವಥ್, ರವಿ, ಬಾಬು, ಮಂಜುನಾಥ್, ಮುನಿಶಾಮಿಗೌಡ, ದೇವರಾಜ್, ಪ್ರಾಂಶುಪಾಲೆ ಮೇರಿ ಸೆಲಿನಾ, ದೈಹಿಕ ಶಿಕ್ಷಕ ನಸೀರ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT