ಶುಕ್ರವಾರ, ಆಗಸ್ಟ್ 19, 2022
25 °C

ಬೀದಿನಾಯಿ ನಿಯಂತ್ರಿಸಲು ಜನರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದಲ್ಲಿ ವಿಪರೀತ ತಲೆ ಎತ್ತಿರುವ ಮಾಂಸದ ಅಂಗಡಿಗಳಿಂದಾಗಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದೆ. ಜನರು ರಸ್ತೆಗಳಲ್ಲಿ ಮಾತ್ರವಲ್ಲದೇ ಮನೆಗಳ ಸಮೀಪದಲ್ಲಿ ಓಡಾಡಲೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆಗಳಲ್ಲಿ ಹಿಂಡು ಹಿಂಡಾಗಿ ಮಿತಿಮೀರಿರುವ ಬೀದಿನಾಯಿಗಳು, ಹಲವು ಬಡಾವಣೆಗಳಲ್ಲಿ ಸಾರ್ವಜನಿಕರ ಮೇಲೆ ದಾಳಿ ನಡೆಸಿವೆ. ಇಲ್ಲಿನ ನಾಗರಿಕರು ನಿತ್ಯವೂ ರಸ್ತೆಯಲ್ಲಿ ಓಡಾಡಲು ಭಯಭೀತರಾಗಿದ್ದಾರೆ. ಈಗಾಗಲೇ ಸಾಕಷ್ಟು ಮಕ್ಕಳು ನಾಯಿಗಳ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳ ಮೇಲೆ ನಾಯಿಗಳು ಹಾರುವುದು, ಪರಚುವುದು ಮಾಡುತ್ತಿರುತ್ತವೆ. ರಸ್ತೆಗಳಲ್ಲಿ ಹಿಂಡಾಗಿ ಮಲಗಿರುತ್ತವೆ. ನಾಯಿಗಳ ಹಾವಳಿಯಿಂದ ಜನರು ಬೇಸತ್ತಿದ್ದಾರೆ.

ಗುಂಪಾಗಿ ದಾಳಿ: ನಾಯಿಗಳು ರಸ್ತೆಯಲ್ಲಿ ಗುಂಪು ಗುಂಪಾಗಿ ಓಡಾಡುತ್ತಿದ್ದು, ಯಾರಾದರೂ ಪಾದಚಾರಿಗಳು ರಸ್ತೆಯಲ್ಲಿ ಓಡಾಡುತ್ತಿದ್ದರೆ ಅವರ ಮೈಮೇಲೆ ಬಿದ್ದು ಗಾಯಗೊಳಿಸುತ್ತಿವೆ. ಆದರಲ್ಲೂ ರಾತ್ರಿ ವೇಳೆ ನಾಯಿಗಳ ಕಾಟ ಹೇಳ ತೀರದು. ಗುಂಪುಗೂಡಿ ರಾತ್ರಿಯಲ್ಲಾ ಬೊಗಳುತ್ತಾ ನಾಗರಿಕರ ನಿದ್ದೆಗೆಡಿಸುತ್ತಿವೆ. ಬೊಗಳುವುದು, ಕೂಗಿಕೊಳ್ಳುವುದು ಮಾಡುವುದರಿಂದ ಜನತೆ ನೆಮ್ಮದಿಯಿಂದ ಮಲಗಲು ಸಾಧ್ಯವಾಗುತ್ತಿಲ್ಲ.

ಮನೆ ಬಾಗಿಲಿಗೂ ಬರುತ್ತವೆ: ‘ಅನೇಕ ಬಾರಿ ಪುರಸಭೆಯವರಿಗೆ ಮನವಿ ಮಾಡಿದರೂ ನಾವು ಏನು ಮಾಡಲೂ ಸಾಧ್ಯವಿಲ್ಲ. ಅವುಗಳನ್ನು ಹಿಡಿಯಲು ನಮ್ಮಲ್ಲಿ ಪ್ರತ್ಯೇಕವಾದ ಅನುದಾನಗಳಿಲ್ಲ. ನಾಯಿಗಳನ್ನು ಹಿಂಸಿಸುವಂತಿಲ್ಲ. ಅವುಗಳನ್ನು ಹಿಂಸೆ ಮಾಡಿದರೆ ಪ್ರಾಣಿದಯಾ ಸಂಘದವರು ಗಲಾಟೆ ಮಾಡುತ್ತಾರೆ ಎಂದು ಅಧಿಕಾರಿಗಳು ಕೈ ತೊಳೆದುಕೊಳ್ಳುತ್ತಿದ್ದರೆ, ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳಬೇಕು’ ಎಂದು ಸ್ಥಳೀಯ ನಿವಾಸಿ ಮುನಿರಾಜು ಆಕ್ರೋಶ ವ್ಯಕ್ತಪಡಿಸಿದರು.

ಗೃಹಿಣಿ ಸರಸ್ವತಮ್ಮ ಮಾತನಾಡಿ, ‘ಮನೆಯ ಮುಂದೆ ಪಾತ್ರೆಗಳನ್ನು ಇಟ್ಟಿದ್ದರೆ, ಅವುಗಳನ್ನು ಹೋಗಿ ನೆಕ್ಕಿ ನೀರು ಕುಡಿಯುತ್ತವೆ. ಓಡಿಸಲು ಹೋದರೆ ನಮ್ಮ ಮೇಲೆ ಎರಗುತ್ತವೆ. ಇದರಿಂದ ಮಹಿಳೆಯರು ಮನೆಯ ಮುಂದೆ ಪಾತ್ರೆಗಳನ್ನು ಇಡಲು ಹೆದರುತ್ತಿದ್ದಾರೆ. ಕೆಲವೊಮ್ಮೆ ಪಾತ್ರೆಗಳನ್ನು ಎರಡು ಮೂರು ನಾಯಿಗಳು ಸೇರಿಕೊಂಡು ಎತ್ತಿಕೊಂಡು ಹೋಗಿರುವ ನಿದರ್ಶನಗಳು ಇವೆ. ಆದರೂ ಪುರಸಭೆಯವರು ನಾಯಿಗಳ ಹಾವಳಿ ನಿಯಂತ್ರಿಸಲು ಮುಂದಾಗುತ್ತಿಲ್ಲ. ಈಗಾಲಾದರೂ ಪುರಸಭೆಯವರು ಎಚ್ಚೆತ್ತುಕೊಂಡು ನಾಯಿಗಳನ್ನು ನಿಯಂತ್ರಿಸಿ ನಾಗರಿಕರು ನೆಮ್ಮದಿಯಿಂದ ಓಡಾಡಲು ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು