ಸೂಲಿಬೆಲೆ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ.
ಗ್ರಾಮ ಪಂಚಾಯಿತಿಯ ಎಲ್ಲಾ ವಾರ್ಡ್‌ಗಳಲ್ಲಿಯೂ ಒಂದೊಂದು ಗುಂಪು ಹೆಚ್ಚಾಗಿದ್ದು, ಜನ ಓಡಾಡುವಾಗ ಮತ್ತು ವಾಹನ ಚಲಾಯಿಸುವ ವೇಳೆ ಹಿಂಬಾಲಿಸಿಕೊಂಡು ಬೊಗಳುತ್ತವೆ.
ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ, ವಯೋವೃದ್ಧರು ವಾಯು ವಿಹಾರಕ್ಕೆ ತೆರಳುವ ವೇಳೆ ನಾಯಿಗಳು ದಾಳಿ ನಡೆಸುತ್ತವೆ. ಈಗಾಗಲೇ ಐದಾರು ಮಂದಿ ನಾಯಿಗಳಿಂದ ಕಚ್ಚಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸೂಲಿಬೆಲೆ ಸಂತೆ ಬಸ್ ನಿಲ್ದಾಣ, ಗಿಡ್ಡಪ್ಪನಹಳ್ಳಿ- ಸೂಲಿಬೆಲೆ ರಸ್ತೆ, ಗಂಗಮ್ಮ ದೇವಸ್ಥಾನ, ಮಾಂಸದಂಗಡಿ ಮತ್ತು ಮಾಂಸಹಾರ ಹೋಟೆಲ್ ಸಮೀಪ ನಾಯಿಗಳ ದಂಡು ಬೀಡು ಬಿಟ್ಟಿರುತ್ತದೆ. ಈ ಪ್ರದೇಶಗಳಲ್ಲಿ ಜನ ಓಡಾಡಲು ಭಯಪಡುತ್ತಾರೆ.
ಹಗಲಿನಲ್ಲಿ ಸಾಧುವಂತೆ ವರ್ತಿಸುವ ಶ್ವಾನಗಳು ಸಂಜೆಯಾಗುತ್ತಿದ್ದಂತೆ ಮೃಗದಂತೆ ಕೆರಳಿ ನಿಲ್ಲುತ್ತವೆ. ಈ ಸಮಯದಲ್ಲಿ ಮಕ್ಕಳು ಮತ್ತು ಮಹಿಳೆಯರು ಹೊರಬರಲು ಹೆದರುತ್ತಾರೆ. ಸೈಕಲ್ ಮತ್ತು ಬೈಕ್ ಸಂಚರಿಸುವ ವೇಳೆ ಹಿಂಬಾಲಿಸಿಕೊಂಡು ಬಂದು ದಾಳಿ ನಡೆಸುತ್ತವೆ. ಈ ಘಟನೆಯಲ್ಲಿ ಹಲವು ಮಂದಿ ಬಿದ್ದು ಗಾಯಗೊಂಡಿದ್ದಾರೆ.
ಕಸದ ರಾಶಿ ನಾಯಿಗಳ ಮತ್ತೊಂದು ಅಡ್ಡೆಯಾಗಿದ್ದು, ತ್ಯಾಜ್ಯದಲ್ಲಿನ ಆಹಾರ ತಿನ್ನಲು ಶ್ವಾನಗಳ ಗುಂಪುಗಳ ನಡುವೆ ಕಾದಾಟ ನಡೆಯುತ್ತಲೆ ಇರುತ್ತದೆ. ಈ ವೇಳೆ ಚಲಿಸುವ ವಾಹನಗಳಿಗೆ ಅಡ್ಡ ಬಂದು ವಾಹನ ಸವಾರರು ಬೀಳುವುದು ಸಾಮಾನ್ಯವಾಗಿದೆ.
ರಾತ್ರಿ ವೇಳೆ ನಾಯಿಗಳ ಕೂಗಾಟ, ಚೀರಾಟದಿಂದ ನೆಮ್ಮದಿಯ ನಿದ್ದೆ ಮಾಡಿ ಹಲವು ತಿಂಗಳು ಕಳೆದಿದೆ. ನಾಯಿಗಳ ಉಪಟಲಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಾಯಿಗಳ ಹಾವಳಿಯಿಂದ ಬೀದಿಯಲ್ಲಿ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಮನೆಗೆ ಅವಶ್ಯಕ ವಸ್ತು ತರಲು ಅಂಗಡಿಗೆ ಹೋಗಲು ಭಯಪಡುವಂತಾಗಿದೆ.
-ದೀವಿಕಾ ಗೃಹಿಣಿ
ಶಾಲಾ ಬಸ್‌ಗೆ ಹೋಗುವ ವೇಳೆ ಬೀದಿ ನಾಯಿಗಳ ಕಾಟ ಹೆಚ್ಚಾಗಿರುವುದರಿಂದ ಪೋಷಕರು ಜೊತೆಗೆ ಬರಬೇಕು. ಹಲವು ಬಾರಿ ನಾಯಿ ದಾಳಿಯಿಂದ ಪಾರಾಗಿದ್ದೇನೆ.
-ನಿರ್ಮಲ್ ವಿದ್ಯಾರ್ಥಿ
ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಕ್ರಮ
ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ವಹಿಸಲಾಗಿದೆ. ತಾಲ್ಲೂಕು ಪಶುಪಾಲನ ಇಲಾಖೆ ಅಧಿಕಾರಿ ಬಳಿ ವಿಷಯ ಚರ್ಚಿಸಲಾಗಿದೆ. ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಸ್ಪಂದನ ಸಂಸ್ಥೆಗೆ ಆದೇಶ ನೀಡಲಾಗಿದೆ. ಶೀಘ್ರವೇ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಆರಂಭವಾಗಲಿದ್ದು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಬೀಳಲಿದೆ.ಟಿ.ಎಸ್. ಮಂಜುನಾಥ್ ಪಿಡಿಒ ಸೂಲಿಬೆಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.