ಮಂಗಳವಾರ, ಆಗಸ್ಟ್ 16, 2022
20 °C

ಉರುಳಿಗೆ ಬಿದ್ದ ಜಿಂಕೆ ನಾಯಿಗಳಿಗೆ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತುರಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೀದಿ ನಾಯಿಗಳಿಗೆ ಜಿಂಕೆಗಳು ಬಲಿಯಾಗುವುದು ಮುಂದುವರಿದಿದೆ. ಕಾಡಿನೊಳಗೆ ಬೀದಿ ನಾಯಿಗಳ ಹಾವಳಿಗೆ ನಿಯಂತ್ರಣ ಹಾಕದಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಬಗ್ಗೆ ಪ್ರಾಣಿಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಕಳ್ಳ ಬೇಟೆಗಾರರು ಜಿಂಕೆಗಳಿಗಾಗಿ ಅಲ್ಲಲ್ಲಿ ಉರುಳು ಹಾಕಿದ್ದಾರೆ. ಇದಕ್ಕೆ ಜಿಂಕೆಗಳು ಸಿಕ್ಕಿ ಹಾಕಿಕೊಳ್ಳುತ್ತಿವೆ. ಕಳ್ಳಬೇಟೆಗಾರರು ಬರುವುದರೊಳಗೆ ಬೀದಿ ನಾಯಿಗಳು ಈ ಜಿಂಕೆಗಳ ಬೇಟೆಯಾಡುತ್ತಿವೆ. ನಾನು ನೋಡಿದಂತೆ, ಈವರೆಗೆ 15ಕ್ಕೂ ಹೆಚ್ಚು ಜಿಂಕೆಗಳು ಬೀದಿನಾಯಿಗಳಿಗೆ ಬಲಿಯಾಗಿವೆ’ ಎಂದು ಪರಿಸರವಾದಿ ಜೋಸೆಫ್‌ ಹೂವರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಜಿಂಕೆಗಳು ಮಾತ್ರವಲ್ಲದೆ, ನವಿಲು, ಕಾಡುಕೋಳಿಗಳನ್ನೂ ಬೀದಿನಾಯಿಗಳು ಬೇಟೆಯಾಡುತ್ತಿವೆ. ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೆ, ನಾಯಿಗಳನ್ನು ಸಾಯಿಸಿದರೆ ಪ್ರಾಣಿ ದಯಾ ಸಂಘದವರು ನಮ್ಮ ವಿರುದ್ಧ ದೂರು ನೀಡುತ್ತಾರೆ. ಜಿಂಕೆಗಳು ಸಾಯುತ್ತಿದ್ದರೆ ಊರಿನ ಜನ ಬೈಯುತ್ತಾರೆ. ಏನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ ಎಂದು ಅವರು ಹೇಳುತ್ತಾರೆ’ ಎಂಬುದಾಗಿ ಹೂವರ್ ತಿಳಿಸಿದರು. 

‘ಅರಣ್ಯ ಇಲಾಖೆಯವರು ಮನಸು ಮಾಡಿದರೆ, ಅರ್ಧ ಗಂಟೆಯಲ್ಲಿ ಕಾರ್ಯಾಚರಣೆ ಮುಗಿಸಬಹುದು. ಸುಮಾರು 550 ಎಕರೆ ವಿಸ್ತಾರದಲ್ಲಿರುವ ಈ ಅರಣ್ಯ ಪ್ರದೇಶದಲ್ಲಿ ಬೀದಿ ನಾಯಿಗಳನ್ನು ಪತ್ತೆ ಹಚ್ಚಿ ಸ್ಥಳಾಂತರಿಸುವುದು ಅರಣ್ಯ ಸಿಬ್ಬಂದಿಗೆ ಸಾಗಿಸುವುದು ಕಷ್ಟವಾಗುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಕೋವಿಡ್‌ನಿಂದ ಕಾರ್ಯಾಚರಣೆ ಸ್ಥಗಿತ ! 

‘ಅರಣ್ಯ ಪ್ರದೇಶದ ಪಕ್ಕದಲ್ಲಿಯೇ ಹಾಸ್ಟೆಲ್‌ ಒಂದಿದೆ. ಅದರ ಬಳಿಯಲ್ಲಿನ ಬಯಲು ಪ್ರದೇಶದಲ್ಲಿ ಕಸವನ್ನು ತಂದು ಸುರಿಯಲಾಗುತ್ತಿದೆ. ಈ ಕಸ ಹೆಕ್ಕಲು ಬರುವ ನಾಯಿಗಳು ಅರಣ್ಯಪ್ರದೇಶವನ್ನು ಪ್ರವೇಶಿಸುತ್ತಿವೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. 

‘ಕಳೆದ ವರ್ಷ ಎಂಟು ಜಿಂಕೆಗಳು ನಾಯಿಗಳಿಗೆ ಬಲಿಯಾಗಿದ್ದವು. ಎರಡು ತಿಂಗಳಲ್ಲಿ ಎರಡು ಜಿಂಕೆಗಳು ಸಾವಿಗೀಡಾಗಿವೆ. ನಾಯಿಗಳನ್ನು ಹಿಡಿದು, ಸ್ಥಳಾಂತರಿಸಲು ತಂಡವನ್ನು ರಚಿಸಲಾಗಿತ್ತು. ಕಾರ್ಯಾಚರಣೆ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡತೊಡಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು’ ಎಂದು ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು. 

    ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

    ಈ ವಿಭಾಗದಿಂದ ಇನ್ನಷ್ಟು