ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಕಲಾವಿದರಿಗೆ ಮನ್ನಣೆ ನೀಡಿ

47 ನೇ ಮಾಸದ ‘ಕನ್ನಡ ದೀಪ’ ಕಾರ್ಯಕ್ರಮ
Last Updated 4 ಡಿಸೆಂಬರ್ 2018, 13:56 IST
ಅಕ್ಷರ ಗಾತ್ರ

ವಿಜಯಪುರ: ರಂಗಭೂಮಿ ಕಲಾವಿದರು ಬಡವರು. ಆದರೂ ಕಲಾ ಸಂಪನ್ನರು. ಇತರ ಕಲಾವಿದರಿಗೆ ಸಿಗುವ ಗೌರವ, ಮನ್ನಣೆ ರಂಗಭೂಮಿ ಕಲಾವಿದರಿಗೂ ಸಲ್ಲುವಂತೆ ಸರ್ಕಾರ, ಸಂಘ ಸಂಸ್ಥೆಗಳು ಕ್ರಮವಹಿಸಬೇಕು ಎಂದು ಸಾಹಿತಿ ಡಾ.ವಿ.ಎನ್. ರಮೇಶ್ ಹೇಳಿದರು.

ಇಲ್ಲಿನ ಶೃಂಗೇರಿ ಶಾರದಾ ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ಕನ್ನಡ ಕಲಾವಿದರ ಸಂಘದಿಂದ ಆಯೋಜಿಸಿದ್ದ 47 ನೇ ಮಾಸದ ‘ಕನ್ನಡ ದೀಪ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿಷ್ಕಲ್ಮಶ ಹೃದಯಿಗಳು, ಸಾಂಸ್ಕೃತಿಕ ರಾಯಭಾರಿಗಳಾದ ಕಲಾವಿದರಿಗೆ ಹೆಚ್ಚಿನ ಸ್ಥಾನಮಾನ ಸಿಗಬೇಕು. ಅರ್ಹರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಸರ್ಕಾರ ಪ್ರೋತ್ಸಾಹ ನೀಡಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವ ಹಾಗೂ ಸಂಸ್ಕೃತಿಯನ್ನು ರಕ್ಷಿಸಿ ಬೆಳೆಸುವ ಸ್ಥಳೀಯ ಕಲಾವಿದರಿಗೆ ಇಂದಿಗೂ ಸೂಕ್ತ ಸ್ಥಾನಮಾನ ಸಿಗದಿರುವುದು ವಿಷಾದನೀಯ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಮುಖಂಡ ಮಹೇಶ್ ಕುಮಾರ್ ಮಾತನಾಡಿ, ಗ್ರಾಮೀಣ ಜನರ ಜಾನಪದ ಸಂಪತ್ತು ಅಪೂರ್ವವಾದುದು. ಅದನ್ನು ಉಳಿಸಿ, ಮುಂದಿನ ಪೀಳಿಗೆಗೆ ಕೊಡುಗೆಯಾಗುವ ನೀಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ ಎಂದರು.

ಜೇಸಿಐ ಉಪಾಧ್ಯಕ್ಷ ಕೆ.ಶಶಿಕುಮಾರ್ ಮಾತನಾಡಿ, ತೆರೆಯ ಮುಂದೆ ರಾಜ-ರಾಣಿಯರಾಗಿ, ಕುಬೇರನಂತೆ ಮೆರೆಯುವ, ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಕಲಾವಿದನ ಬದುಕು ವಾಸ್ತವದಲ್ಲಿ ಹಾಗಿಲ್ಲ. ಪರದೆಯ ಮುಂದೆ ನಟಿಸುವ ಕಲಾವಿದರು ಕ್ಷಣ ಮಾತ್ರದಲ್ಲಿ ಪರದೆಯ ಹಿಂದೆ ಯಾವುದೋ ಮೂಲೆಯಲ್ಲಿ ಗಂಜಿ ಬೇಯಿಸುತ್ತಿರುತ್ತಾರೆ. ಅವರ ಬದುಕು ಮುಳ್ಳಿನ ಹಾಸಿಗೆಯಲ್ಲಿ ಮೈಚೆಲ್ಲಿದಂತಿದೆ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಕಲಾವಿದರು, ಮಕ್ಕಳ ಶಿಕ್ಷಣ, ಆರೋಗ್ಯ, ಕೌಟುಂಬಿಕ ಜವಾಬ್ದಾರಿ ನಿರ್ವಹಣೆಗಾಗಿ ಹರಸಾಹಸ ಪಡುತ್ತಿದ್ದಾರೆ ಎಂದರು.

ಕಲಾವಿದ ಕೆ.ಶಶಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಜಗೋಪಾಲ್, ಬಿ.ಎಸ್.ಎನ್.ಎಲ್. ನಾಮಿನಿ ನಿರ್ದೇಶಕ ಕನಕರಾಜು, ಕರವೇ ಶಿವಕುಮಾರ್, ಜೆ.ಆರ್. ಮುನಿವೀರಣ್ಣ, ಸೀತಾರಾಮಯ್ಯ, ವಿ.ಸುಭ್ರಮಣಿ, ಟಿ. ಗೋವಿಂದರಾಜು, ಅಮರೇಂದ್ರಪ್ಪ, ಭೈರೇಗೌಡ, ಚಂದ್ರಮುಖಿ ರಮೇಶ್, ಮುಖ್ಯಶಿಕ್ಷಕಿ ಬಿ. ಉಮಾದೇವಿ, ನಳಿನಾ, ಮೈತ್ರಿ, ಪ್ರಭು, ಶ್ರೀಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT