ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ಇಳಿಕೆ: ಜನರ ಆತಂಕ ದೂರ

ವೈದ್ಯಕೀಯ ಸಿಬ್ಬಂದಿಯ ಪರಿಶ್ರಮಕ್ಕೆ ಜಿಲ್ಲಾಧಿಕಾರಿ ಶ್ರೀನಿವಾಸ್‌ ಅಭಿನಂದನೆ
Last Updated 3 ಜೂನ್ 2021, 4:18 IST
ಅಕ್ಷರ ಗಾತ್ರ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವುದು ಜನರಲ್ಲಿ ಕೊಂಚ ಆತಂಕವನ್ನು ಕಡಿಮೆ ಮಾಡಿದೆ.

ಜಿಲ್ಲೆಯಲ್ಲಿನ ಜನರ ಆರೋಗ್ಯ ಸುಧಾರಣೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಮೊಬೈಲ್ ಕ್ಲಿನಿಕ್‌ಗಳನ್ನು ಹಳ್ಳಿಗಳಿಗೆ ಕಳುಹಿಸಿ ಜನರನ್ನು ಅಲ್ಲೆ ತಪಾಸಣೆ ಮಾಡಲಾಗುತ್ತಿದೆ. ಸೋಂಕು ದೃಢಪಟ್ಟವರಿಗೆ ಸ್ಥಳದಲ್ಲೇ ಔಷಧಿ ಕಿಟ್ ವಿತರಣೆ ಮಾಡುವಂತಹ ಮಹತ್ತರವಾದ ಪ್ರಯತ್ನದಿಂದಾಗಿ ಸೋಂಕಿನ ಪ್ರಕರಣ ಕಡಿಮೆ ಮಾಡುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗುತ್ತಿದೆ.

ಜಿಲ್ಲೆಯಲ್ಲಿ ಪ್ರತಿನಿತ್ಯ ಸಾವಿರಾರು ಪ್ರಕರಣಗಳು ದಾಖಲಾಗುತ್ತಿದ್ದವು. ಇದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ ಹಾಗೂ ಆಮ್ಲಜನಕ ಸಿಗದೆ ಸೋಂಕಿತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವು ದಿನಗಳ ಕಾಲ ಗಂಭೀರವಾದ ರೋಗದ ಲಕ್ಷಣ ಇಲ್ಲದವರನ್ನು ಮನೆಗಳಲ್ಲೇ ಐಸೋಲೇಷನ್ ಮಾಡುವ ಮೂಲಕ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ಹೊರಟಿದ್ದ ಜಿಲ್ಲಾಡಳಿತ ಕ್ರಮ ಫಲಿಸಲಿಲ್ಲ. ಕೊನೆಗೆ ಎಚ್ಚೆತ್ತುಕೊಂಡು ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಿತು.

ಈ ಸೆಂಟರ್‌ಗಳಿಗೆ ಅಗತ್ಯವಿರುವ ಔಷಧಿಗಳು, ಆಮ್ಲಜನಕ ಸಾಂದ್ರಕಗಳನ್ನು ಪೂರೈಕೆ ಮಾಡಿದೆ. ಹಳ್ಳಿಗಳಲ್ಲಿ ಸೋಂಕು ದೃಢಪಡುತ್ತಿದ್ದಂತೆ ಅಂತಹವರನ್ನು ತಕ್ಷಣ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲು ಮಾಡಿಕೊಂಡು ಅವರಿಗೆ ಚಿಕಿತ್ಸೆ ನೀಡುವ ಮೂಲಕ ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳುವ ಪ್ರಯತ್ನ ಸಾಗುತ್ತಿದೆ.

ಜನರು ಮೈಮರೆಯಬಾರದು: ರಾಜ್ಯ ಸರ್ಕಾರ ಕೋವಿಡ್ ಸೋಂಕಿನ ಪ್ರಮಾಣ ನಿಯಂತ್ರಣ ಮಾಡಲಿಕ್ಕಾಗಿ ಜಾರಿಗೊಳಿಸಿರುವ ಲಾಕ್‌ಡೌನ್ ನಿಯಮಗಳನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕು. ಆಗ ಮಾತ್ರವೇ ಸೋಂಕಿನ ಪ್ರಕರಣಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲಿಕ್ಕೆ ಸಾಧ್ಯವಾಗುತ್ತದೆ.

‘ಬೆಳಗಿನ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ನೀಡಿರುವ ಸಮಯವನ್ನು ದುರುಪಯೋಗ ಮಾಡಿಕೊಂಡು ತಮ್ಮ ಇಷ್ಟಾನುಸಾರ ತಿರುಗಾಡುವುದು, ಮಾಸ್ಕ್ ಹಾಕದೇ ಇರುವುದು, ಕೈಗಳನ್ನು ತೊಳೆಯದೇ ಇರುವುದು, ಜನಸಂದಣಿ ಸೇರುವುದು, ಕೈಗಳನ್ನು ಕುಲುಕುವುದು, ಅಂತರ ಕಾಪಾಡದೇ ನಡೆದುಕೊಂಡರೆ ಅಂತಹವರಿಂದ ಸೋಂಕು ಪುನಃ ಹೇರಳವಾಗಿ ಹರಡುವಂತಹ ಸಾಧ್ಯತೆ ಹೆಚ್ಚಾಗಿದೆ’ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.

ಎರಡನೇ ಅಲೆಯಲ್ಲಿ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿರುವುದು ಕೊಂಚ ನಿರಾಳತೆ ಮೂಡಿಸಿದೆ. 3 ಅಲೆಯನ್ನೂ ಎದುರಿಸಬೇಕಾಗುತ್ತದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಮಕ್ಕಳಿಗಾಗಿ ಪ್ರತ್ಯೇಕವಾಗಿ ಹಾಸಿಗೆಗಳನ್ನು ಮುಂಜಾಗ್ರತಾ ಕ್ರಮವಾಗಿ ಮೀಸಲಿಟ್ಟುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಸಿಬ್ಬಂದಿಯ ನಿರಂತರ ಪರಿಶ್ರಮ:‘ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆ ಮಾಡಿ, ಸೋಂಕಿತರನ್ನು ಗುಣಮುಖರನ್ನಾಗಿ ಮಾಡುವುದೇ ಸಿಬ್ಬಂದಿಯ ಗುರಿ. ಸೋಂಕು ಇತರರಿಗೆ ಹರಡದಂತೆ ಅಗತ್ಯವಾಗಿರುವ ಮುಂಜಾಗ್ರತೆ ವಹಿಸುವಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ, ಟಾಸ್ಕ್‌ಫೋರ್ಸ್ ಸಮಿತಿಯ ಸದಸ್ಯರಿಗೆ ಸಹಕಾರ ನೀಡುತ್ತಿರುವ ವಿವಿಧ ಸಂಘ, ಸಂಸ್ಥೆಗಳ ಸಹಕಾರದಿಂದ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT