ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನದ ದೊಡ್ಡಿಯಾದ ಸರ್ಕಾರಿ ಶಾಲೆ

ವ್ಯವಸಾಯ ಸೇವಾ ಸಹಕಾರ ಸಂಘ, ಗ್ರಂಥಾಲಯಕ್ಕೆ ಕಟ್ಟಡ ಬಳಸಲು ಸಲಹೆ
Last Updated 28 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ದೇವನಹಳ್ಳಿ: ಅಕ್ಷರ ಜ್ಞಾನ ಬಿತ್ತಿದ ಇಲ್ಲಿನಕೊಯಿರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದು ದನದದೊಡ್ಡಿಯಾಗಿ ಮಾರ್ಪಟ್ಟಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿನ ಶಾಲೆ ಬಳಿ ಬಂದರೆ ಹಸುವಿನ ಸಗಣಿ, ಗಂಜಲದ ವಾಸನೆ ಮೂಗಿಗೆ ರಾಚುತ್ತದೆ. ಸರ್ಕಾರಿ ಶಾಲೆ ಎಂಬ ಸೌಜನ್ಯವೂ ಇಲ್ಲದೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಶಾಲೆಯನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂಬುದು ಸ್ಥಳೀಯರ ಆರೋಪ.

‘ಗ್ರಾಮ ಪಂಚಾಯಿತಿಯಿಂದ ನೂರು ಮೀಟರ್ ಅಂತರದಲ್ಲಿರುವ ಶಾಲೆಯಲ್ಲಿ ಹಲವು ಕೊಠಡಿಗಳಿವೆ. ಶಾಲಾ ಕಟ್ಟಡ ನಿರ್ಮಿಸಿ ಐದು ದಶಕ ಕಳೆದಿದೆ. ಕಟ್ಟಡ ಗುಣಮಟ್ಟದಿಂದ ಕೂಡಿದೆ. ಅದರೂ ಗ್ರಾಮದಿಂದ ಅನತಿ ದೂರದಲ್ಲಿ ನೂತನವಾಗಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಕಳೆದ ಒಂದು ವರ್ಷದಿಂದ ಅಲ್ಲಿಯೇ ತರಗತಿ ನಡೆಸಲಾಗುತ್ತಿದೆ. ಆದರೆ ಈ ಶಾಲೆಯನ್ನು ಯಾವುದಕ್ಕೂ ಬಳಸದೆ ಹಾಗೇ ಬಿಡಲಾಗಿದೆ. ಶಿಕ್ಷಣ ಇಲಾಖೆಯ ಸ್ವತ್ತು ಆಗಿರುವ ಜಾಗ ಮತ್ತು ಕಟ್ಟಡದಲ್ಲಿ ಇಂತಹ ಅವ್ಯವಸ್ಥೆ ನಿರ್ಮಾಣವಾಗಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಚಂದ್ರಪ್ಪ.

‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡ ನಂತರ ತಾಲ್ಲೂಕಿನಲ್ಲಿ ಜಾಗ ಸಿಗುತ್ತಿಲ್ಲ. ಸಿಕ್ಕರೂ ದುಬಾರಿ ಬೆಲೆ ಇದೆ. ಕೊಯಿರಾ ಗ್ರಾಮದಲ್ಲಿ ಹಲವು ಕುಟುಂಬಗಳಿಗೆ ನಿವೇಶನವಿಲ್ಲ. ಒಂದೊಂದು ಇಂಚು ಜಾಗಕ್ಕೂ ಹೆಣಗಾಡಬೇಕಾದ ಪರಿಸ್ಥಿತಿ ಇದೆ. ಕಳೆದ ಮೂರು ವರ್ಷಗಳಿಂದ ವಿಶ್ವಾನಾಥಪುರ ವ್ಯವಸಾಯ ಸೇವಾ ಸಹಕಾರ ಸಂಘ ವಿಭಾಗಿಸಿ ಕೊಯಿರಾ ಗ್ರಾಮದಲ್ಲಿ ನೂತನವಾಗಿ ಸಹಕಾರ ಸಂಘ ಆರಂಭಿಸಿ ಎಂದು ಒತ್ತಾಯ ಮಾಡಲಾಗುತ್ತಿದೆ. ಆದರೂ ನಿವೇಶನವಿಲ್ಲ, ಕಟ್ಟಡವಿಲ್ಲ ಎಂದು ಸಬೂಬು ಹೇಳಿಕೊಂಡೇ ಸಹಕಾರ ಸಂಘದ ನಿರ್ದೇಶಕರು ಕಾಲಹರಣ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದು ಪಶುಗಳ ಕೊಟ್ಟಿಗೆಯಾಗಿರುವ ಶಾಲೆಯಲ್ಲಿ ಸಂಘ ಆರಂಭಿಸಬಹುದು. ಗ್ರಂಥಾಲಯಕ್ಕೂ ಉಪಯೋಗಿಸಬಹುದು’ ಎಂದು ಸ್ಥಳೀಯ ನಿವಾಸಿ ಚಿಕ್ಕೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಮಾತನಾಡಿ, ‘ಶಾಲಾ ಕಟ್ಟಡದಲ್ಲಿ ಪಶುಗಳನ್ನು ಕಟ್ಟ‌ಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಬಿ.ಆರ್.ಸಿ. ಮತ್ತು ಸಿ.ಆರ್.ಪಿ ನೇಮಕಕ್ಕೆ ಪರೀಕ್ಷೆ ನಡೆಯುತ್ತಿದೆ. ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT