ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಸ್ಥಳೀಯರು

Last Updated 21 ನವೆಂಬರ್ 2019, 14:33 IST
ಅಕ್ಷರ ಗಾತ್ರ

ದೇವನಹಳ್ಳಿ: ಇಲ್ಲಿನ ಕೊಯಿರಾ ಬೆಟ್ಟದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದ್ದು, ಸ್ಥಳಿಯರು ನಿಟ್ಟುಸಿರು ಬಿಡುವಂತಾಗಿದೆ.

ಒಂದು ವರ್ಷದಿಂದ ಬೆಟ್ಟದಲ್ಲಿ ಚಿರತೆ ಇದ್ದು, ಬೆಟ್ಟದ ಸುತ್ತಲೂ ಬೆಳಗ್ಗೆ ಮತ್ತು ಸಂಜೆ ವೇಳೆ ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಹಲವು ಬಾರಿ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆರಂಭದಲ್ಲಿ ಅರಣ್ಯ ಇಲಾಖೆ ತಲೆ ಕೆಡಿಸಿಕೊಂಡಿರಲಿಲ್ಲ. ಚಿರತೆ ಇರುವುದು ಸುಳ್ಳು, ಕಲ್ಲುಗಣಿ ಅಕ್ರಮವಾಗಿ ನಡೆಸಲು ಸುಳ್ಳು ಸುದ್ದಿ ಹರಡಿಸಿದ್ದಾರೆ ಎಂದೇ ಕೆಲವರು ನಂಬಿದ್ದರು. ಒಂದೆರಡು ಗ್ರಾಮಗಳಿಗೆ ನುಗ್ಗಿ, ಮನೆಯ ಅಕ್ಕಪಕ್ಕದಲ್ಲಿ ಚಿರತೆ ಸದ್ದು ಕೇಳಿಸಿಕೊಂಡ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಣಾಮ ಬೋನು ಇಡಲಾಗಿತ್ತು.

ಈ ಹಿಂದೆ ಎರಡು ತಿಂಗಳ ಹಿಂದೆ ಬೋನು ಇಡಲಾಗಿತ್ತು. ಆದರೆ ಚಿರತೆ ಅತ್ತ ಸುಳಿದಿರಲಿಲ್ಲ. ಕಳೆದ ಎಂಟು ದಿನಗಳ ಹಿಂದೆ ಬೋನಿನಲ್ಲಿ ನಾಯಿಯನ್ನು ಕೂಡಿ ಹಾಕಲಾಗಿತ್ತು. ಮಧ್ಯಾಹ್ನ ನಾಯಿಗೆ ಆಹಾರ ನೀಡಲು ಹೋದಾಗ ಚಿರತೆ ಬೋನಿಗೆ ಬಿದ್ದಿರುವುದು ಕಂಡುಬಂದಿದೆ ಎಂದು ಸ್ಥಳೀಯರು ತಿಳಿಸಿದರು.

‘ಪ್ರಸ್ತುತ ಇಡಲಾದ ಬೋನು ಕಳಪೆಗುಣಮಟ್ಟದಿಂದ ಕೂಡಿದೆ. ನೆಲದ ಕಡೆಗೆ ಮುಖ ಮಾಡಲಾದ ಬೋನಿನ ಕಬ್ಬಿಣದ ಸೀಟು ತೀರ ತೆಳುವಾಗಿದ್ದು, ಚಿರತೆ ತನ್ನ ಬಾಯಿಯಿಂದ ಸೀಟನ್ನು ಕತ್ತರಿಸಿದೆ. ಇದು ಇಲಾಖೆಯ ಬೇಜವಾಬ್ದಾರಿ ತೋರಿಸುತ್ತದೆ’ ಎಂದು ಆರೋಪಿಸುತ್ತಾರೆ ಮನಗೊಂಡನಹಳ್ಳಿ ಗ್ರಾಮದ ಜಗದೀಶ್‌.

ಬೋನಿನಲ್ಲಿ ಚಿರತೆ ಸೆರೆಯಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ ಪರಿಣಾಮ ನೂರಾರು ಸಾರ್ವಜನಿಕರು ಬೆಟ್ಟದಲ್ಲಿ ಜಮಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT