ವಿಜಯಪುರ(ದೇವನಹಳ್ಳಿ): ‘ವಾಸಕ್ಕೆ ಸ್ವಂತ ಮನೆ ಇಲ್ಲ. ತಿಂಗಳು ಬಂತೆಂದರೆ ದುಡಿದ ಹಣವನ್ನು ಮನೆಯ ಬಾಡಿಗೆಗೆ ಕಟ್ಟಬೇಕು. ಉಳಿದ ಹಣದಲ್ಲಿ ಕುಟುಂಬ ನಿರ್ವಹಣೆ, ಮಕ್ಕಳು ಓದಿನ ಖರ್ಚು. ಇದರ ನಡುವೆ ನಮ್ಮ ಗೂಡಿನ ಕನಸು ಕಮರಿ ಹೋಗುತ್ತಿದೆ. ನಮಗೆಲ್ಲ ಸ್ವಂತ ಮನೆ ಎನ್ನುವುದು ಮರೀಚಿಕೆ...’
–ಇದು ವಿಜಯಪುರದ ನಿವಾಸಿ ಮುನಿಸ್ವಾಮಿ ಅವರ ಅಸಹಾಯಕತೆ ಮತ್ತು ನೋವಿನ ಮಾತು. ಈ ಕೊರಗು ಇವರೊಬ್ಬರದಲ್ಲ ಪಟ್ಟಣ ಮತ್ತು ಹೋಬಳಿಯಾದ್ಯಂತ ಇರುವ ಮನೆ ಮತ್ತು ನಿವೇಶನ ರಹಿತರದ್ದು.
ಸ್ವಂತ ಸೂರಿನಡಿ ಬದುಕಬೇಕು, ಸ್ವಂತ ನಿವೇಶನ ಹೊಂದಬೇಕೆಂಬ ಬಡ ಜನರ ಕನಸು ನೆನಸಾಗಿಲ್ಲ. ಸ್ವಂತ ಸೂರಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ, ಬಾಡಿಗೆ ಮನೆಯಲ್ಲೇ ಬದುಕಿನ ಬಂಡಿ ದೂಡುತ್ತಿದ್ದಾರೆ.
ಪಟ್ಟಣ ಅಲ್ಲದೆ ಗ್ರಾಮೀಣ ಭಾಗದಲ್ಲೂ ಬಹಳಷ್ಟು ಮಂದಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಪಟ್ಟಣದಲ್ಲಿರುವ 10 ಸಾವಿರ ಕುಟುಂಬಗಳ ಪೈಕಿ 3,018 ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. 2,118 ಮಂದಿ ನಿವೇಶನ ಕೋರಿ ಪುರಸಭೆಗೆ ಅರ್ಜಿ ಸಲ್ಲಿಸಿದ್ದಾರೆ.
ವಸತಿರಹಿತರಿಗೆ ಮನೆ ಕಟ್ಟಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದೆ. ಆದರೆ ಅವು ಅರ್ಹರಿಗೆ ತಲುಪುತ್ತಿಲ್ಲ ಎನ್ನುವುದಕ್ಕೆ ವಿಜಯಪುರದಲ್ಲಿರುವ ವಸತಿರಹಿತರೇ ಸಾಕ್ಷಿ.
ಸ್ವಂತ ಸೂರು ಕಟ್ಟಿಕೊಳ್ಳಲು ಭೂಮಿ ಗುರುತಿಸಿಕೊಡಿ ಎಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನೆ ಆಗಿಲ್ಲ. ಇದರಿಂದ ಬೇಸರಗೊಂಡವರು ಸ್ವಂತ ಮನೆ ಕನಸನ್ನೆ ಮರೆತ್ತಿದ್ದಾರೆ.
ಹಗಲಿನಲ್ಲಿ ಮೈ ಮರಿಯುವಂತೆ ಕೂಲಿ ಮಾಡಿಕೊಂಡು ಬಂದರೂ ರಾತ್ರಿಯ ವೇಳೆ ನೆಮ್ಮದಿ ನಿದ್ದೆ ಮಾಡಲು ಸ್ವಂತ ಮನೆ ಇಲ್ಲ. ಹೆಚ್ಚು ಸದಸ್ಯರು ಇರುವ ಕುಟುಂಬಗಳು ವಿಭಜನೆಗೊಂಡು ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ.
ಚಿಕ್ಕ ಮನೆಗೂ ₹6 ಸಾವಿರ: ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಇರುವುದರಿಂದ ಇಲ್ಲಿನ ಭೂಮಿ ಬೆಲೆ ಏರಿಕೆಯಾಗಿದ್ದು, ಮನೆಗಳ ಬಾಡಿಗೆಯನ್ನೂ ಏರಿಕೆ ಮಾಡಲಾಗಿದೆ. ಒಂದು ಕೊಠಡಿಯಿರುವ ಚಿಕ್ಕಮನೆಗೆ ₹6 ಸಾವಿರ ಬಾಡಿಗೆ, ₹50 ಸಾವಿರ ಮುಂಗಡ ಪಾವತಿಸಬೇಕು. ಈ ಮನೆಯಲ್ಲಿ ಮೂರು ಕೇವಲ ಮೂರ್ನಾಲ್ಕು ಮಂದಿ ಮಾತ್ರ ವಾಸ ಮಾಡುವುದು ಕಷ್ಟವೇ ಎನ್ನುತ್ತಾರೆ ಸ್ಥಳೀಯರು.
ಚುನಾವಣೆಗಳಲ್ಲಿ ಮತ ಕೇಳುವ ವೇಳೆ ಭರವಸೆ ಕೊಡುವ ರಾಜಕೀಯ ವ್ಯಕ್ತಿಗಳು ಚುನಾವಣೆ ಮುಗಿದ ಮೇಲೆ ಕಾಣಿಸಿಕೊಳ್ಳುವುದೆ ಇಲ್ಲ. ನಮ್ಮ ಬವಣೆಯನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಂಡು ನಿವೇಶನ ಮಂಜೂರು ಮಾಡಿಕೊಡಬೇಕು.
-ರಾಜಮ್ಮ ಸತ್ಯಮ್ಮ ಕಾಲೋನಿ ನಿವಾಸಿ
ಸರ್ಕಾರ ನಮಗೆ ವಸತಿ ಅಥವಾ ನಿವೇಶನ ವ್ಯವಸ್ಥೆ ಕಲ್ಪಿಸಿಕೊಡಬೇಕು. ಬಾಡಿಗೆ ಮನೆಗಳಿಂದ ನಮಗೆ ಮುಕ್ತಿ ಕೊಡಬೇಕು. ದುಡಿದ ಕೂಲಿ ಹಣವನ್ನು ಬಾಡಿಗೆ ಕಟ್ಟುವಂತಾಗಿದೆ.
- ಶೋಭಾವತಿ ಸ್ಥಳೀಯ ನಿವಾಸಿ
ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಕಂದಾಯ ಇಲಾಖೆಯಿಂದ ಭೂಮಿ ಮಂಜೂರು ಮಾಡಿ ಹಸ್ತಾಂತರಿಸಿದರೆ ಮಾತ್ರ ಪುರಸಭೆಯಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅರ್ಜಿ ಆಹ್ವಾನಿಸಬಹುದು
-ಜಿ.ಆರ್.ಸಂತೋಷ್ ಮುಖ್ಯಾಧಿಕಾರಿ ಪುರಸಭೆ
ನೆಂಟರು ಬಂದರೆ ಕಷ್ಟ
‘ದೂರದ ಊರುಗಳಿಂದ ಅಪರೂಪಕ್ಕೆ ನೆಂಟರು ಮನೆಗೆ ಬಂದರೆ ಮಲಗಲು ಜಾಗವಿಲ್ಲದ ಕಾರಣ ಸಂಜೆಯ ವೇಳೆಗೆ ಅವರನ್ನು ವಾಪಸ್ಸು ಕಳುಹಿಸಬೇಕು. ಇಲ್ಲವೇ ಅಕ್ಕಪಕ್ಕದ ಮನೆಗಳವರ ಮನವೊಲಿಸಿ ರಾತ್ರಿಯಲ್ಲಿ ಮಲಗುವುದಕ್ಕೆ ಅವಕಾಶ ಕೇಳಬೇಕು’. ‘ನಮ್ಮ ಕಷ್ಟ ನೋಡಿ ನೆಂಟರು ಬರುವುದನ್ನು ಬಿಟ್ಟಿದ್ದಾರೆ. ಬಂದರೂ ಸಂಜೆಯ ವೇಳೆಗೆ ವಾಪಸ್ಸು ಹೋಗುತ್ತಾರೆ. ಇದರಿಂದ ನಮಗೆ ತುಂಬಾ ನೋವಾಗುತ್ತಿದೆ. ಬಾಡಿಗೆ ಮನೆಗಳಲ್ಲಿ ಎಲ್ಲಾ ಸೌಕರ್ಯ ಇಲ್ಲ. ಇರುವ ಎರಡು ಶೌಚಾಲಯಗಳನ್ನೆ ಎಲ್ಲಾ ಬಾಡಿಗೆ ಮನೆಗಳವರೂ ಉಪಯೋಗಿಸಿಕೊಳ್ಳಬೇಕು. ಈ ಬಗ್ಗೆ ಮಾಲೀಕರನ್ನು ಕೇಳಿದರೆ ನೀವು ಕೊಡುತ್ತಿರುವ ಬಾಡಿಗೆ ಕಡಿಮೆ ಎಲ್ಲಾ ಸೌಲಭ್ಯ ಬೇಕಾದರೆ ತಿಂಗಳಿಗೆ ₹8 ಸಾವಿರ ಬಾಡಿಗೆ ಆಗುತ್ತೆ ಎನ್ನುತ್ತಾರೆ’ ಎಂದು ಸ್ಥಳೀಯ ಕಾರ್ಮಿಕ ಮಹಿಳೆ ವಿಮಲಮ್ಮ ಹೇಳಿದರು. ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ವಾಸ ಇರುವ ನಾಗರಿಕರು ಸ್ವಂತ ಮನೆ ಹೊಂದಿದ್ದರೂ ಚಿಕ್ಕ ಚಿಕ್ಕ ಮನೆಗಳಾಗಿವೆ. ಕೆಲವರು ಶಿಥಿಲವಾಗಿರುವ ಮನೆಗಳಲ್ಲಿ ಪ್ಲಾಸ್ಟಿಕ್ ಪೇಪರ್ ಮೇಲೊದಿಕೆಯನ್ನಾಗಿ ಮಾಡಿಕೊಂಡು ವಾಸವಾಗಿದ್ದಾರೆ. ಕಿರಿದಾದ ರಸ್ತೆಗಳು ಕಿರಿದಾದ ಮನೆಗಳಲ್ಲಿ ವಿಧಿಯಿಲ್ಲದೆ ವಾಸ ಮಾಡುತ್ತಿದ್ದಾರೆ. ನಿವೇಶನಗಳು ಕೊಟ್ಟರೆ ಮನೆ ನಿರ್ಮಿಸಿಕೊಳ್ಳುತ್ತೇವೆ’ ಎಂದು 16ನೇ ವಾರ್ಡ್ ನಿವಾಸಿ ರಾಜಮ್ಮ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.