ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಪಂಪು, ಮೋಟಾರು ರಿಪೇರಿ– ರೈತರಿಗೆ ದುಬಾರಿ

ಬೇಸಿಗೆ ಹಿನ್ನೆಲೆಯಲ್ಲಿ ಪದೇಪದೇ ಕೆಟ್ಟು ಹೋಗುವ ಯಂತ್ರಗಳು
Published 20 ಮಾರ್ಚ್ 2024, 5:43 IST
Last Updated 20 ಮಾರ್ಚ್ 2024, 5:43 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಬೇಸಿಗೆ ಆರಂಭವಾಯಿತೆಂದರೆ ವರ್ಷವಿಡೀ ಸಂಪಾದನೆ ಮಾಡಿದ ಹಣವೆಲ್ಲಾ ಪಂಪು, ಮೋಟಾರುಗಳ ರಿಪೇರಿಗಾಗಿ ಖರ್ಚು ಮಾಡಬೇಕಾದಂತಹ ಪರಿಸ್ಥಿತಿ ರೈತರಿಗೆ ಎದುರಾಗುತ್ತದೆ.

ಏಕೆಂದರೆ ಬಹುತೇಕ ಪಂಪು, ಮೋಟಾರುಗಳು ಬೇಸಿಗೆಯಲ್ಲಿ ಸುಟ್ಟು ಹೋಗಿ ರಿಪೇರಿ ಮಾಡಿಸುವ ಸಂದರ್ಭ ರೈತರಿಗೆ ಎದುರಾಗುತ್ತದೆ. 

‘ತೀವ್ರ ಮಳೆಯ ಕೊರತೆಯ ನಡುವೆಯೂ ಕೊಳವೆಬಾವಿ ಕೊರೆದು 3 ಎಕರೆ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ನಾಟಿ ಮಾಡಿದ್ದೇವೆ. ಇನ್ನೇನು ಬೆಳೆ ಕೈಗೆ ಸಿಗಬೇಕು ಎನ್ನುವಷ್ಟರಲ್ಲಿ ಪಂಪು, ಮೋಟಾರು ಸುಟ್ಟುಹೋಗಿವೆ. ಅದನ್ನು ಕೊಳವೆಬಾವಿಯಿಂದ ಮೇಲೆತ್ತಿ, ರಿಪೇರಿ ಮಾಡಿಸಿ, ಪುನಃ ಕೊಳವೆಬಾವಿಗೆ ಬಿಡುವಷ್ಟರಲ್ಲಿ 25 ಸಾವಿರ ಬೇಕು ಎಂದು ನೊಂದು ನುಡಿದರು ರೈತ ಮುನಿರಾಜು.

ಒಮ್ಮೆ ರಿಪೇರಿ ಮಾಡಿಸಿಕೊಂಡು ಬಂದು ಬಿಟ್ಟರೆ, ಪುನಃ ವಾರ, ಹದಿನೈದು ದಿನಗಳಿಗೆ ಮತ್ತೆ ರಿಪೇರಿಗೆ ಬರುತ್ತದೆ. ಬೇಸಿಗೆ ಕಳೆಯುವಷ್ಟರಲ್ಲಿ ನಾಲ್ಕೈದು ಬಾರಿ ರಿಪೇರಿಗೆ ಬಂದರೆ, ಹಣ ಎಲ್ಲಿಂದ ತರೋದು? ಕೊಳವೆಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆಯಾಗಿದೆ. ನೀರಿಲ್ಲದೆ ರಾತ್ರಿಯ ವೇಳೆ ಖಾಲಿ ಮೋಟಾರು ಚಾಲನೆಯಾಗುವುದರಿಂದ ಸುಟ್ಟುಹೋಗುತ್ತಿವೆ. ವಿದ್ಯುತ್ ಕೂಡಾ ಪದೇ ಪದೇ ಕೈ ಕೊಡುತ್ತದೆ ಇದರಿಂದಲೂ ಪಂಪು ಮೋಟಾರು, ಸುಟ್ಟುಹೋಗುತ್ತಿವೆ’ ಎನ್ನುತ್ತಾರೆ ಅವರು. 

‘ಕಷ್ಟಪಟ್ಟು ಬೆಳೆ ಬೆಳೆದರೂ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ, ತೀರಾ ಕಡಿಮೆ ಬೆಲೆ ಕೇಳುತ್ತಾರೆ. ಮಾರಾಟ ಮಾಡುವಂತೆಯೂ ಇಲ್ಲ, ಬೆಳೆಯನ್ನು ತೋಟದಲ್ಲಿ ಬಿಡುವಂತೆಯೂ ಇಲ್ಲ. ನಮಗೆ ಧರ್ಮಸಂಕಟವಾಗಿಬಿಟ್ಟಿದೆ’ ಎಂದು ರೈತ ನಾರಾಯಣಸ್ವಾಮಪ್ಪ ಅಳಲು ತೋಡಿಕೊಂಡರು.

ರೈತ ಶಂಕರಪ್ಪ ಮಾತನಾಡಿ, ‘ಈ ಬಾರಿ ಮಳೆಯಾಗಿದ್ದರೆ, ಕೃಷಿಹೊಂಡಗಳಲ್ಲಾದರೂ ಒಂದಷ್ಟು ನೀರು ಇರುತ್ತಿದ್ದವು. ಮಳೆಯಿಲ್ಲದೆ ನೀರೂ ಇಲ್ಲ. ಕೊಳವೆಬಾವಿಯಿಂದ ಹಾಯಿಸೋಣವೆಂದರೆ, ಒಂದು ಕಡೆಗೆ ವಿದ್ಯುತ್ ಸಮಸ್ಯೆ. ಮತ್ತೊಂದು ಕಡೆ ಪಂಪು, ಮೋಟಾರುಗಳು ಕೆಟ್ಟುಹೋಗುತ್ತಿವೆ. ದಿಕ್ಕು ಕಾಣದಂತಾಗಿದೆ. ದಾಳಿಂಬೆ ಗಿಡಗಳು ಒಣಗುತ್ತಿವೆ. ಸೀಬೆಹಣ್ಣಿನ ಗಿಡಗಳಿಗೆ ಪ್ರೂನಿಂಗ್ ಮಾಡಿದ್ದು, ಚಿಗುರು ಬಂದಿದೆ. ಬೇಸಿಗೆಯಲ್ಲಿ ನೀರು ಕೊಡಬೇಕು. ಇಲ್ಲವಾದರೆ ಚಿಗುರಿನಲ್ಲಿ ಕಾಯಿ ಸರಿಯಾಗಿ ಬರಲ್ಲ. ಇದೇ ಸಮಯಕ್ಕೆ ಪಂಪು ಮೋಟಾರು ಕೆಟ್ಟುಹೋಗಿದೆ. ರಿಪೇರಿ ಮಾಡಿಸುವುದಕ್ಕೂ ಸಾಲ ಮಾಡಿಕೊಂಡು ಬಂದಿದ್ದೇವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬೆಳಿಗ್ಗೆ ನಾಲ್ಕು ತಾಸು, ರಾತ್ರಿ ನಾಲ್ಕು ತಾಸು ವಿದ್ಯುತ್ ನೀಡಬೇಕು. ಆದರೆ, ಬೆಸ್ಕಾಂನವರು ದಿನಕ್ಕೆ 7 ಗಂಟೆ ಕೊಡುತ್ತಿದ್ದಾರೆ. ಮೂರು ಫೇಸ್ ವಿದ್ಯುತ್ ಕೊಟ್ಟಾಗ ಕಾದುಕೊಂಡಿದ್ದು ಮೋಟಾರು ಚಾಲನೆ ಮಾಡಿಕೊಳ್ಳಬೇಕು. ಸಿಂಗಲ್ ಫೇಸ್‌ನಲ್ಲಿ ಮೋಟಾರು ಚಾಲನೆ ಮಾಡಿದರೆ, ಸುಟ್ಟುಹೋಗುತ್ತಿವೆ ಎಂದರು.

ಬೇಸಿಗೆ ಆರಂಭವಾಗುತ್ತಿದ್ದಂತೆ ಪಂಪು, ಮೋಟಾರುಗಳು ರಿಪೇರಿಗೆ ಬರುತ್ತವೆ. ನಾವು ಎಷ್ಟೇ ಮುತುವರ್ಜಿಯಿಂದ ರಿಪೇರಿ ಮಾಡಿಕೊಟ್ಟರೂ, ನೀರಿನ ಕೊರತೆ, ವಿದ್ಯುತ್ ಸಮಸ್ಯೆಯಿಂದ ಪುನಃ ಸುಟ್ಟುಹೋಗುತ್ತವೆ. ನಮಗೂ ನೋವಾಗುತ್ತದೆ. ಆದರೆ, ವಿಧಿಯಿಲ್ಲ, ಸುಟ್ಟುಹೋಗಿರುವ ವಸ್ತುಗಳು ತೆಗೆದು ಹೊಸ ವಸ್ತುಗಳನ್ನು ಅಳವಡಿಸಲೇಬೇಕು. ಕೆಲವು ರೈತರು ಹಣವನ್ನೂ ಕೊಡಲ್ಲ. ಬೆಳೆ ಬಂದಾಗ ಕೊಡ್ತೇವೆ ಎಂದು ಹೋಗುತ್ತಾರೆ. ಅವರ ಬೆಳೆಗಳು ನಷ್ಟವಾದರೆ ನಮಗೆ ಬರಬೇಕಾಗಿರುವ ಹಣವೂ ಬರಲ್ಲ ಎನ್ನುತ್ತಾರೆ ಪಂಪು, ಮೋಟಾರು ರಿಪೇರಿ ಮಾಡುವ ಸದಾಖತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT