ಅತಿವೃಷ್ಟಿ, ಅನಾವೃಷ್ಟಿಗೆ ನಾವೇ ಕಾರಣ

7
ನಾಗದಳ, ಯುವ ಸಂಚಲನ ತಂಡದ ನೇತೃತ್ವದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಜಲ ಜಾಗೃತಿ ಜಾಥಾ

ಅತಿವೃಷ್ಟಿ, ಅನಾವೃಷ್ಟಿಗೆ ನಾವೇ ಕಾರಣ

Published:
Updated:
Deccan Herald

ದೊಡ್ಡಬಳ್ಳಾಪುರ: ‘ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿರುವುದೇ ಕೇರಳ ಹಾಗೂ ಕೊಡಗಿನಲ್ಲಿ ಮಹಾಮಳೆಗೆ ಅತಿಹೆಚ್ಚಿನ ಆಸ್ತಿಪಾಸ್ತಿ ಪ್ರಾಣಹಾನಿ ಸಂಭವಿಸಲು ಮುಖ್ಯ ಕಾರಣವಾಗಿದೆ’ ಎಂದು ನಾಗದಳ ಸಂಘಟನೆ ಸಂಚಾಲಕ ಸಿ.ನಟರಾಜ್ ಹೇಳಿದರು.

ಅತಿವೃಷ್ಟಿಯಿಂದಾಗಿ ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿರುವ ಅಪಾಯಕಾರಿ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯರಿಗೆ ಜಲ ಜಾಗೃತಿ ಉಂಟುಮಾಡುವ ಉದ್ದೇಶದಿಂದ ಭಾನುವಾರ ನಗರದ ನಾಗದಳ ಹಾಗೂ ಯುವ ಸಂಚಲನ ತಂಡದ ನೇತೃತ್ವದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ನಡೆದ ಜಾಗೃತಿ ಜಾಥಾದಲ್ಲಿ ಮಾತನಾಡಿದರು.

ಪರಿಸರದ ವಿಷಯದಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶಗಳಾದ ಪಶ್ಚಿಮಘಟ್ಟಗಳಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚಾಗಿದೆ. ಅಭಿವೃದ್ಧಿ ಹೆಸರಿನ ಪರಿಸರನಾಶದ ಕ್ರಿಯೆಗಳಾದ ಅರಣ್ಯ ನಾಶ, ಗಣಿಗಾರಿಕೆ, ಅವೈಜ್ಞಾನಿಕ ಕಟ್ಟಡಗಳ ನಿರ್ಮಾಣದಿಂದ ಹೆಚ್ಚಿನ ಹಾನಿ ಸಂಭವಿಸಿದೆ. ಈ ಬಗ್ಗೆ ಹತ್ತಾರು ವರ್ಷಗಳಿಂದಲೂ ಪರಿಸರ ತಜ್ಞರು ಎಚ್ಚರಿಸುತ್ತಾ ಬಂದರೂ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ವರದಿಯನ್ನು ನೀಡಿದ್ದರೂ ಅವರ ಶಿಫಾರಸನ್ನು ಮೂಲೆಗುಂಪಾಗಿಸಿ ನಿರಂತರ ಪರಿಸರ ನಾಶ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.

ಎಷ್ಟೇ ಮಳೆ ಸುರಿದರೂ ಅದನ್ನು ತಾಳಿಕೊಳ್ಳುವ, ಹೆಚ್ಚಿನ ನೀರನ್ನು ಭೂಮಿಯ ಪದರಗಳಲ್ಲಿ ಇಂಗಿಸಿಕೊಂಡು ಮಣ್ಣು ಸವೆಯದಂತೆ ಕಾಪಾಡಿಕೊಳ್ಳುವ ಶಕ್ತಿ ದಟ್ಟ ಅರಣ್ಯಗಳ ಭೂಮಿಗೆ ಇತ್ತು. ಅರಣ್ಯವನ್ನೇ ನಾಶಮಾಡಿ ಕಾಂಕ್ರೀಟ್ ಕಾಡು ನಿರ್ಮಿಸಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಲಾದರೂ ಎಚ್ಚೆತ್ತುಕೊಂಡು ಇನ್ನು ಮುಂದೆ ಇಂತಹ ಅಪಾಯ ಸಂಭವಿಸದಂತೆ ಪಶ್ಚಿಮಘಟ್ಟಗಳ ಉಳಿವಿಗೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಾಗದಳ ಸಂಚಾಲಕ ಸುಂ.ಸು.ಬದರಿನಾಥ್ ಮಾತನಾಡಿ, ಕೊಡಗು, ಕೇರಳದ ಪ್ರಕೃತಿಯ ಎಚ್ಚರಿಕೆ ಘಂಟೆಯಿಂದ ಎಲ್ಲ ಜನರೂ ಎಚ್ಚೆತ್ತುಕೊಳ್ಳಬೇಕು. ಇಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ಲಾಸ್ಟಿಕ್‍ನ ದುರ್ಬಳಕೆಗೆ ಕಡಿವಾಣ ಹಾಕಿ ಜಲ ಕಾಲುವೆಗಳಲ್ಲಿ ಅದು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಿದರೆ ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಾಗಲಿದೆ ಎಂದರು.

ನಗರದ ರುಮಾಲೆ ಛತ್ರದಿಂದ ಪ್ರಾರಂಭವಾದ ಜಲಜಾಗೃತಿ ಜಾಥಾ ಪ್ರಮುಖ ರಸ್ತೆಗಳ ಸಂಚರಿಸುತ್ತ ಜಲ ಜಾಗೃತಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಪರಿಸರ ಜಾಗೃತಿ ಗೀತೆಗಳನ್ನು ಹಾಡಲಾಯಿತು. ಯುವ ಸಂಚಲನದ ಚಿದಾನಂದ, ಮುರುಳಿ, ದಿವಾಕರ್‍ ನಾಗ್, ಶ್ರೀಭಾಸ್ಕರ್, ಪವನ್, ನಾಗದಳ ನಾಗರಾಜ್, ಎ.ವಿ.ರಘು, ರೇವಂತ್, ಹಿತೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !