ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ ಸಮಸ್ಯೆಗೆ ಸ್ಪಂದಿಸುವುದೇ ಬೆಳಗಾವಿ ಅಧಿವೇಶನ?

ವಿವಿಧ ಸಮಸ್ಯೆಗಳ ವಿರುದ್ಧ ಧ್ವನಿಯಾಗುತ್ತಾರಾ ಜನಪ್ರತಿನಿಧಿಗಳು I ಚುನಾವಣಾ ವರ್ಷ ಹೊಸ ಯೋಜನೆಗಳತ್ತ ಜನರ ಚಿತ್ತ
Last Updated 19 ಡಿಸೆಂಬರ್ 2022, 4:08 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಬೆಂಗಳೂರು ವೈಮಾನಿಕ ಹೆಬ್ಬಾಗಿಲು’ ಎಂದೇ ಪ್ರಖ್ಯಾತಿಗೊಂಡಿರುವ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತನ್ನ ಒಡಲಲ್ಲಿ ಇಟ್ಟುಕೊಂಡರೂ, ದಶಕಗಳ ಕಾಲದಿಂದಲೂ ಸಮಸ್ಯೆಗಳ ಸುಳಿಯಲ್ಲಿ ಬಂಧಿಯಾಗಿದೆ.

ನಗರ ನಿರ್ಮಾತೃ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸಿ ವಿಶ್ವ ದಾಖಲೆ ನಿರ್ಮಿಸಿರುವ ಕರ್ನಾಟಕ ಸರ್ಕಾರ, ರಾಜ್ಯದ ಅತ್ಯಂತ ಬೇಡಿಕೆಯ ಭೂ ಪ್ರದೇಶವಿರುವ ದೇವನಹಳ್ಳಿಯ ಸಮಸ್ಯೆಗಳಿಗೆ ಇಂದಿನಿಂದ ನಡೆಯುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪರಿಹಾರ ದೊರೆಯಲಿವೆಯೇ ಎಂದು ಇಲ್ಲಿನ ಜನ ಎದುರು ನೋಡುತ್ತಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಗೂ ದಿನಗಣನೆ ಆರಂಭವಾಗಿದ್ದು, ರಾಜಕೀಯ ಲಾಭಕ್ಕಾಗಿಯಾದರೂ, ಮೂಲ ಸೌಲಭ್ಯಗಳನ್ನು ಪಟ್ಟಣಕ್ಕೆ ಸಿಗಲಿವಿಯೇ ಎಂಬುದು ಜನರ ನಿರೀಕ್ಷೆಯಾಗಿದೆ. ಅಲ್ಲದೆ, ರಾಜ್ಯ ರಾಜಧಾನಿ ಬೆಂಗಳೂರಿಗೆ ನಿತ್ಯ ಸಾವಿರಾರು ಟನ್‌ ತರಕಾರಿ ಪೂರೈಸುವ ಕೃಷಿಕರು ತಮ್ಮ ಭೂಮಿಯ ಅಳಿವು-ಉಳಿವಿನ ಪ್ರಶ್ನೆಯ ಅತಂತ್ರದಲ್ಲಿದ್ದಾರೆ.

ವೃತ್ತಿಪರ ಕಾಲೇಜು: ಇಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರ್‌ ಕಾಲೇಜುಗಳಿಲ್ಲ. ಹೀಗಾಗಿಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ವೃತ್ತಿಪರ ಕಾಲೇಜುಗಳ ಕೊರತೆ ಇದೆ. ವಿಜಯಪುರದಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಯ ಅವಶ್ಯಕತೆ ಇದೆ. ವಿಶ್ವಮಾನ್ಯ ನಗರದಲ್ಲಿ ವಿದ್ಯಾಭ್ಯಾಸಕ್ಕೆ ಸರ್ಕಾರ ಬೆಂಬಲ ನೀಡದೆ ಇರುವುದು ಮಾತ್ರ ಬೇಸರದ ಸಂಗತಿಯೇ.

ನಿರುದ್ಯೋಗ, ನೀರಿನ ಬವಣೆ: ಅಂತರರಾಷ್ಟ್ರೀಯ ಮಟ್ಟದ ಕಂಪನಿಗಳು ದೇವನಹಳ್ಳಿಯಲ್ಲಿ ತಲೆ ಎತ್ತುತ್ತಿವೆ. ಆದರೆ ಇಲ್ಲಿನ ಸ್ಥಳೀಯರಿಗೆ ದೊಡ್ಡ ಪ್ರಮಾಣದ ಉದ್ಯೋಗಗಳು ಲಭಿಸುತ್ತಿಲ್ಲ. ಅನ್ಯ ಭಾಷಿಕರಿಗೆ ದೊರೆಯುವ ಸ್ಥಾನಮಾನಗಳು ಕ್ಷೇತ್ರದ ಜನತೆಗೆ ದೊರೆಯದಿರುವುದು ಅಸಮಾನತೆಗೆ ಹಿಡಿದ ಕನ್ನಡಿಯಾಗಿದೆ. ನೀರಿಗಾಗಿ ಅಂತರ್ಜಲವನ್ನೇ ನಂಬಿಕೊಂಡಿರುವ ಜನತೆಗೆ ಮಹತ್ವಾಕಾಂಕ್ಷಿಯಾದ ನೀರಾವರಿ ಯೋಜನೆಗಳ ಲಾಭ ಇನ್ನೂ ಲಭಿಸಿಲ್ಲ.

ಬಸ್‌, ನಿಲ್ದಾಣ ಸಂತೆಗಾಗಿ ಜಾಗ: ಸುಸರ್ಜಿತ ಬಸ್‌ ನಿಲುಗಡೆಯಿಲ್ಲದೇ ದೇವನಹಳ್ಳಿ, ವಿಜಯಪುರ ಪಟ್ಟಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ಡಿಪೊಗೆ ಜಾಗ ಮಂಜೂರಾಗಿದ್ದರೂ, ಇಂದಿಗೂ ಡಿಪೊ ನಿರ್ಮಾಣವಾಗಿಲ್ಲ. ವ್ಯವಸ್ಥಿತ ಸಂಚಾರ ವ್ಯವಸ್ಥೆಯಿಲ್ಲದೆ ಜನರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ದೇವನಹಳ್ಳಿಯ ವಾರದ ಸಂತೆಗಳಿಗೆ ಹೈಟೆಕ್‌ ಸ್ಪರ್ಶ ಇನ್ನೂ ಕನಸಾಗಿಯೇ ಉಳಿದಿದೆ.

ಸರ್ಕಾರಿ ನೌಕರರ ಸಮುಚ್ಚಯ; ಎಸ್‌ಪಿ ಕಚೇರಿ: ದೇವನಹಳ್ಳಿಯಲ್ಲಿ ಕರ್ತವ್ಯ ನಿರ್ವಹಿಸುವ ಬಹುತೇಕ ಸರ್ಕಾರಿ ಅಧಿಕಾರಿಗಳು ನೌಕರರ ಸಮುಚ್ಚಯವಿಲ್ಲದೇ ಕಾರ್ಯ ಕ್ಷೇತ್ರದ ಹೊರಗೆ ವಾಸಿಸುತ್ತಿದ್ದಾರೆ.ಆವತಿ ಬಳಿ ಜಾಗಗುರುತಿಸಿದ್ದರೂ ಅಭಿವೃದ್ಧಿ ಕೆಲಸವಾಗಿಲ್ಲ. ಕುಂದಾಣದ ಬೀರಸಂದ್ರದಲ್ಲಿಜಿಲ್ಲಾಡಳಿತ ಭವನ ಕಾರ್ಯ ನಿರ್ವಹಿಸುತ್ತಿದ್ದರೂ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಇಂದಿಗೂ ಬೆಂಗಳೂರಿನಲ್ಲಿದೆ.

ರೈತ ಹೋರಾಟ; ರೇಷ್ಮೆ ಮಾರುಕಟ್ಟೆ: ಭೂಸ್ವಾಧೀನ ವಿರೋಧಿಸಿ ಇಲ್ಲಿನ ಚನ್ನರಾಯಪಟ್ಟಣ ಹಾಗೂ ಕುಂದಾಣ ಭಾಗದ ಜನತೆ ಧರಣಿ, ಸತ್ಯಾಗ್ರಹ ಮಾಡುತ್ತಿದ್ದಾರೆ. ಪಟ್ಟಣಗಳ ಬಂದ್‌ ಮಾಡಿ ಸರ್ಕಾರಕ್ಕೆ ನೂರಾರು ಸಲ ಮನವಿ ನೀಡಲಾಗಿದೆ.ಆದರೆ, ಅನ್ನದಾತರ ಫಲವತ್ತಾದ ಭೂಮಿ ಕಸಿಯಲು ಸರ್ಕಾರ ಮುಂದಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ವಿಜಯಪುರದಲ್ಲಿ ರೇಷ್ಮೆ ಹೈಟೆಕ್‌ ಮಾರುಕಟ್ಟೆ ಘೋಷಣೆಯಾಗಿಯೇ ಉಳಿದಿದೆ.

ಉದ್ಘಾಟನೆಯಾಗದ ಭವನ; ಸರ್ವಿಸ್‌ ರಸ್ತೆಯಿಲ್ಲದ ಹೆದ್ದಾರಿ:ಕ್ಷೇತ್ರದಲ್ಲಿ ಹಲವಾರು ಭವನಗಳು ಕಾಮಗಾರಿ ಪೂರ್ಣಗೊಂಡರೂ, ಉದ್ಘಾಟನೆ ಭಾಗ್ಯ ಮಾತ್ರ ದೊರೆತ್ತಿಲ್ಲ. ಇನ್ನು ಉದ್ಘಾಟನೆಯಾದ ಭವನಗಳಲ್ಲಿ ಕಳಪೆ ಕಾಮಗಾರಿಯ ಆರೋಪಗಳು ಕೇಳಿ ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರಿಗೆ ಹೋಗುವ ಸ್ಥಳೀಯರು ದೊಡ್ಡ ಮೊತ್ತದ ಟೋಲ್‌ ಪಾವತಿ ಮಾಡಬೇಕಿದ್ದು, ಸ್ಥಳೀಯರಿಗೆ ಟೋಲ್‌ನಿಂದ ವಿನಾಯ್ತಿ ಹಾಗೂ ಸರ್ವೀಸ್ ರಸ್ತೆ ಒದಗಿಸಬೇಕು ಎಂಬ ದಶಕಗಳ ಕೂಗಿಗೆ ಸರ್ಕಾರ ಇನ್ನೂ ಓಗೊಟ್ಟಿಲ್ಲ.

ಪ್ರವಾಸೋದ್ಯಮ ಹಿನ್ನಡೆ: ಆವತಿ ಬೆಟ್ಟ, ದೇವನಹಳ್ಳಿ ಕೋಟೆ, ನಲ್ಲೂರಿನ ಹುಣಸೆ ತೋಪು, ಕುಂದಾಣ ಬೆಟ್ಟ, ತಿಮ್ಮರಾಯಸ್ವಾಮಿ ಬೆಟ್ಟ ಸೇರಿದಂತೆ ಇತರ ಪ್ರವಾಸಿ ತಾಣಗಳ ಅಭಿವೃದ್ಧಿಗಳಿಗೆ ಅನುದಾನಗಳು ಬಿಡುಗಡೆಯಾಗಿದ್ದರೂ ಅವುಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಮುಂದಾಗಿಲ್ಲ.

ವಿಶ್ವದ ಅನೇಕ ಪ್ರಯಾಣಿಕರು ದೇವನಹಳ್ಳಿಗೆ ಆಗಮಿಸುತ್ತಾರೆ. ಅವರಿಗೆ ಸ್ಥಳೀಯ ಸಂಸ್ಕೃತಿಯ ಪರಿಚಯಿಸುವ ಕೆಲಸವೂ ಆಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT