ಮಹಿಳೆ ಆತ್ಮಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹ

ಗುರುವಾರ , ಜೂಲೈ 18, 2019
29 °C
ಪೊಲೀಸ್ ಠಾಣೆ ಆವರಣದಲ್ಲಿ ಮೃತರ ಸಂಬಂಧಿಕರ ಪ್ರತಿಭಟನೆ

ಮಹಿಳೆ ಆತ್ಮಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹ

Published:
Updated:
Prajavani

ದೇವನಹಳ್ಳಿ: ನಗರದ ಮಂಜುನಾಥ ನಗರದ ಬಡಾವಣೆಯಲ್ಲಿ ಸೋಮವಾರ ಮಹಿಳೆ ಮಂಜುಳಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಂತೆ ಮೃತರ ಸಂಬಂಧಿಕರು ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ಮೃತರ ಸಂಬಂಧಿ ರಾಮಪ್ಪ ಮಾತನಾಡಿ, ‘ಮನೆಯ ಮಾಲೀಕ ಸೋಮಶೇಖರ್ ಮತ್ತು ಅವರ ಪತ್ನಿ ಗೀತಾ ಹಾಗೂ ಮಗಳು ಬಿಂದು, ಮನೆ ಖಾಲಿ ಮಾಡಿಸುವ ಹುನ್ನಾರದಿಂದ ನೀರಿನ ವಿಚಾರದ ನೆಪದಲ್ಲಿ ಗಲಾಟೆ ಮಾಡಿ ಬಾಡಿಗೆದಾರರಾದ ಸುಬ್ರಮಣಿ ಮತ್ತು ಪತ್ನಿ ಮಂಜುಳಾ ಅವರ ಮೇಲೆ ಮನೆಯ ಬಳಿ ಹಲ್ಲೆ ನಡೆಸಿದ್ದಾರೆ’ ಎಂದು ದೂರಿದರು.

‘ಹಲ್ಲೆ ನಡೆಸಿದ ನಂತರ ಅವರೇ ಬಂದು ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರ ಮೂಲಕ ಠಾಣೆಗೆ ಕರೆಯಿಸಿ ಠಾಣೆಯಲ್ಲಿ ಮತ್ತೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಅಮಾಯಕ ಹೆಣ್ಣುಮಗಳ ಸಾವಿಗೆ ಕಾರಣರಾದ ಮೂವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು.

ಮುನಿರಾಜು ಮಾತನಾಡಿ, ‘ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದ ನಂತರ ಠಾಣೆಯಿಂದ ಹೊರಹೋಗುವ ವೇಳೆ ಪೊಲೀಸರ ಮುಂದೆಯೇ ಮೃತರನ್ನು ಹಿಗ್ಗಾಮುಗ್ಗ  ಥಳಿಸಿದ್ದಾರೆ. ಸಾರ್ವಜನಿಕರಿಗೆ ಮತ್ತು ನೊಂದವರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಆರೋಪಿಯ ಪ್ರಭಾವಕ್ಕೆ ಒಳಗಾಗಿ ಪರೋಕ್ಷವಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ’ ಎಂದು ದೂರಿದರು.

‘ಘಟನೆ ಸಂದರ್ಭದಲ್ಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿದರು.

ಸಂಬಂಧಿ ರಾಜಣ್ಣ ಮಾತನಾಡಿ, ‘ಠಾಣೆ ಮುಂದೆ ಪೊಲೀಸರ ಎದುರು ಆರೋಪಿಗಳು ಹಲ್ಲೆ ಮಾಡಿದ ನಂತರ ಸೌಮ್ಯ ಸ್ವಭಾವದ ಮಂಜುಳಾ ಅವಮಾನಿತಳಾಗಿ ಪತಿಯನ್ನು ಆಸ್ಪತ್ರೆಗೆ ಕಳುಹಿಸಿ ವಿಡಿಯೋಧ್ವನಿ ಮುದ್ರಣ ಮಾಡಿ, ಹಲ್ಲೆ ನಡೆಸಿದ ಆರೋಪಿಗಳ ಹೆಸರನ್ನು ಮತ್ತು ಪೊಲೀಸರ ಕರ್ತವ್ಯ ಪ್ರಸ್ತಾಪಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಪರಿಸ್ಥಿತಿ ಏನು, ಪೊಲೀಸರು ಈ ರೀತಿ ಮಾಡಿದರೆ ಸಮಸ್ಯೆ ಹೇಳಿಕೊಂಡು ಠಾಣೆಗೆ ಬರುವ ಸಾರ್ವಜನಿಕರ ಪಾಡೇನು. 24 ತಾಸು ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದರೆ ಅವರು ಯಾರ ಮರ್ಜಿಗೆ ಒಳಗಾಗಿದ್ದಾರೆ’ ಎಂದು ಕೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !