ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತಮಟೆ ಚಳವಳಿ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದೇವನಹಳ್ಳಿ: ಪರಿಶಿಷ್ಟರ ಸಬಲೀಕರಣಕ್ಕಾಗಿ ಸರ್ಕಾರ ನೀಡುತ್ತಿರುವ ವಿಶೇಷ ಘಟಕ ಯೋಜನೆಗಳ ಅನುದಾನಕ್ಕೆ ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸುವಂತೆ ಒತ್ತಾಯಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶನಿವಾರ ಪಟ್ಟಣದ ಶಾಸಕರ ಕಚೇರಿಯ ಆವರಣದಲ್ಲಿ ತಮಟೆ ಬಾರಿಸಿ ಪ್ರತಿಭಟನೆ ನಡೆಸಿದರು.

ನಂತರ ಮಾತನಾಡಿದ ಜಿಲ್ಲಾ ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕ ಕಾರಹಳ್ಳಿ ಶ್ರಿನಿವಾಸ್, `ಸಾಕಷ್ಟು ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಶಾಸರಿದ್ದರೂ ಅವರ‌್ಯಾರೂ ವಿಧಾನಸಭೆ ಕಲಾಪದಲ್ಲಿ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಮಾತನಾಡುತ್ತಿಲ್ಲ~ ಎಂದು ಆರೋಪಿಸಿದರು.

ಸರ್ಕಾರ ನೀಡುತ್ತಿರುವ ಮೀಸಲಾತಿ ಅನುಷ್ಠಾನದ ಯೋಜನೆಗಳು ಗ್ರಾಮೀಣ ಪ್ರದೇಶದ ಕೆಳಸ್ತರದವರೆಗೆ ನೇರವಾಗಿ ತಲಪಬೇಕಾದರೆ ಏಕಗವಾಕ್ಷಿ ಪದ್ಧತಿ ಅನಿವಾರ್ಯವಾಗಿದೆ. ದಲಿತರಿಗೆ ಮೀಸಲಿಡುವ ವಿಶೇಷ ಘಟಕ ಯೋಜನೆಯ ಹಣ ದಲಿತೇತರ ಯೋಜನೆಗಳ ಕಾಮಗಾರಿಗೆ ಬಳಕೆಯಾಗುತ್ತಿದ್ದು ಇದನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು. ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೆಕು. ಅಂತೆಯೇ ದಲಿತ ಸಮುದಾಯದ ಇತರೆ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂಬರುವ ಬಜೆಟ್ ಅಧಿವೇಶನದಲ್ಲಿ ಏಕಗವಾಕ್ಷಿ ವ್ಯವಸ್ಥೆಗೆ ಒತ್ತಾಯ ತರಬೇಕೆಂದು ಆಗ್ರಹಿಸಿದರು.

ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ತಿಮ್ಮರಾಯಪ್ಪ ಮಾತನಾಡಿ, ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಶೇ.22.75ಅನುದಾನ ಸೋರಿಕೆಯಾಗುತ್ತಿದ್ದು ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿನ ಏಕಗವಾಕ್ಷಿ ಪದ್ಧತಿ ಜಾರಿಯಾಗಲೇಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿನ ಪರಿಶಿಷ್ಟ ಶಾಸಕರು ಮತ್ತು ಮಂತ್ರಿಗಳು ಜಾಗೃತರಾಗಬೇಕಾಗಿದೆ. ಅವರು ತಮ್ಮ ವೈಯಕ್ತಿಕ ಹಾಗೂ ಪಕ್ಷದ ಹಿತದೃಷ್ಟಿಗಿಂತ ಸಮುದಾಯದ ಪ್ರಗತಿ ಮುಖ್ಯವೆಂಬುದನ್ನು ಸಾಬೀತು ಪಡಿಸಬೇಕಾಗಿದೆ ಎಂದರು. ದಲಿತ ಸಂಘರ್ಷ ಸಮಿತಿ ಟೌನ್ ಅಧ್ಯಕ್ಷ ಡಿ.ಎಂ.ನಾಗರಾಜ್ ಮಾತನಾಡಿ, ತಾಲ್ಲೂಕಿನಾದ್ಯಂತ ಸತತ 18-20ವರ್ಷದಿಂದ ಪರಿಶಿಷ್ಠರಿಗೆ ನಿವೇಶನ ಹಂಚಿಕೆಯಾಗಿಲ್ಲ, ಪರಿಶಿಷ್ಟರ ಕಾಲೋನಿಗಳಲ್ಲಿ ಅಂಬೇಡ್ಕರ್ ಭವನಕ್ಕಾಗಿ ನಿವೇಶನ ಮೀಸಲಿಟ್ಟಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.

ಮೀಸಲಾತಿ ಅಡಿಯಲ್ಲಿ ಆಯ್ಕೆಗೊಂಡು ಸಮುದಾಯವನ್ನೇ ಕಡೆಗಣಿಸುವುದು ಸರಿಯಲ್ಲ. ದಲಿತ ವರ್ಗಗಳ ಸಬಲೀಕರಣಕ್ಕಾಗಿ ವಿಶೇಷ ಘಟಕ ಯೋಜನೆಯ ಮೂಲಕ ಬಜೆಟ್‌ನಲ್ಲಿ ಹೆಚ್ಚಿನ ಅನುದಾನಕ್ಕೆ ಸರ್ಕಾರದಲ್ಲಿನ ದಲಿತ ಮಂತ್ರಿಗಳು ಹಾಗೂ ಶಾಸಕರು ಒತ್ತಾಯಿಸಬೇಕು ಎಂದ ಹೇಳಿದರು.
ಒಂದು ವೇಳೆ ಆಗದಿದ್ದರೆ ಬಜೆಟ್ ನಂತರ ರಾಜ್ಯದಾದ್ಯಂತ ಇರುವ ದಲಿತ ಶಾಸಕರ ಮತ್ತು ಮಂತ್ರಿಗಳ ಮನೆಗಳ ಮುಂದೆ ಘೇರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾ ಸಂಚಾಲಕ ನಾರಾಯಣ ಸ್ವಾಮಿ, ಜಿಲ್ಲಾ ಸಮಿತಿ ಸದಸ್ಯ ಎಂ.ನಾರಾಯಣ ಸ್ವಾಮಿ, ವೆಂಕಟೇಶ , ತಾಲ್ಲೂಕು ಸಂಘಟಕ ಮುನಿರಾಜು, ಸಿ.ಬಿ.ಮೋಹನ್, ಕೆಂಪಣ್ಣ, ಚಂದ್ರು, ತಾಲ್ಲೂಕು ಖಜಾಂಚಿ ರಮೇಶ್, ನರಸಪ್ಪ, ರಾಮಕೃಷ್ಣಪ್ಪ, ಮುನಿಕೃಷ್ಣಪ್ಪ, ದಲಿತ ವಿದ್ಯಾರ್ಥಿ ಒಕ್ಕೂಟ ಸಂಚಾಲಕ ಕೇಶವ್, ದಲಿತ ಮಹಿಳಾ ಒಕ್ಕೂಟ ಜಿಲ್ಲಾ ಪ್ರಧಾನ ಸಂಚಾಲಕಿ ಆಂಜಿನಮ್ಮ, ತಾಲ್ಲೂಕು ಸಂಚಾಲಕಿ ಚಂದ್ರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT