ಶುಕ್ರವಾರ, ನವೆಂಬರ್ 22, 2019
25 °C
ಸರಳ, ಸುಲಭ ವಿಧಾನದಲ್ಲಿ ಸಾಲ ಪಡೆಯುವ ಕುರಿತು ಜಾಗೃತಿ ಅಭಿಯಾನ

21ರಿಂದ ಬ್ಯಾಂಕ್‌ ಗ್ರಾಹಕರ ವಿಶೇಷ ಮೇಳ

Published:
Updated:
Prajavani

ಶಿವಮೊಗ್ಗ: ರಾಷ್ಟ್ರೀಕೃತ ಹಾಗೂ ಖಾಸಗಿ ಒಡೆತನದ ಬ್ಯಾಂಕುಗಳಿಂದ ಗ್ರಾಹಕರು ಸರಳ, ಸುಲಭ ವಿಧಾನದಲ್ಲಿ ಸಾಲ ಪಡೆಯುವ ಕುರಿತು ಜಾಗೃತಿ ಮೂಡಿಸಲು ವಿಶೇಷ ಗ್ರಾಹಕ ಮೇಳ ಆಯೋಜಿಸಲಾಗಿದೆ ಎಂದು ಕೆನರಾ ಬ್ಯಾಂಕ್‌ ವಿಭಾಗೀಯ ವ್ಯವಸ್ಥಾಪಕ ರಾಘವೇಂದ್ರರಾವ್ ಕನಾಲ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಅ.21 ಮತ್ತು 22ರಂದು ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸಾರ್ವಜನಿಕರಿಗೆ ಮಾಹಿತಿ, ಸಮಾಲೋಚನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬ್ಯಾಂಕುಗಳಲ್ಲಿ ಜನಸಾಮಾನ್ಯರಿಗೆ ದೊರೆಯುವ ಕೃಷಿ ಸಾಲ, ಸಣ್ಣ ಉದ್ದಿಮೆ ಸಾಲ, ಗೃಹ ಹಾಗೂ ವಾಹನ ಸಾಲ ಮತ್ತಿತರ ಸಾಲ-ಸೌಲಭ್ಯಗಳು ಹಾಗೂ ಅದನ್ನು ಪಡೆದುಕೊಳ್ಳುವ ಸಲುವಾಗಿ ಗ್ರಾಹಕರಿಗೆ ಮಾಹಿತಿ ಒದಗಿಸಲಾಗುವುದು. ಸಾಲ ಮಂಜೂರಾತಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ಈ ಗ್ರಾಹಕ ಮೇಳದಲ್ಲಿ ಗ್ರಾಹಕರು ಯಾವುದೇ ಬ್ಯಾಂಕಿನ ಸಿಬ್ಬಂದಿ ಜತೆ ಮುಕ್ತವಾಗಿ ಚರ್ಚಿಸಬಹುದು. ಮಾಹಿತಿಗಾಗಿ 20 ಪ್ರತ್ಯೇಕ ಮಳಿಗೆ ಸ್ಥಾಪಿಸಲಾಗುವುದು. ಆಧಾರ್ ನೋಂದಣಿಗಾಗಿ ಹಾಗೂ ಬ್ಯಾಂಕಿನ ಗ್ರಾಹಕರ ಅನುಕೂಲಗಳಿಗಾಗಿ ಪ್ರತ್ಯೇಕ ಕೌಂಟರ್‌ ತೆರೆಯಲಾಗುವುದು. ನಬಾರ್ಡ್, ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಸಾಲಸೌಲಭ್ಯಗಳು, ಸ್ವ-ಉದ್ಯೊಗ ತರಬೇತಿ, ಘಟಕ ಆರಂಭಿಸಲು ಯೋಜನಾ ವರದಿ ತಯಾರಿಕೆ, ತಾಂತ್ರಿಕ ಸಹಕಾರ ನೀಡಲಾಗುವುದು ಎಂದು ವಿವರ ನೀಡಿದರು.

ಗ್ರಾಹಕ ಮೇಳದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧಿಕಾರಿಗಳು ಜಿಲ್ಲೆಯ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡುವರು. ಹೆಸರು ನೋಂದಣಿ ಮಾಡಿಕೊಳ್ಳುವರು ಎಂದರು.

ಆಧಾರ್, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್, ಆದಾಯ ತೆರಿಗೆ ಪ್ರಮಾಣಪತ್ರ, ವೇತನ ದೃಢೀಕರಣ, ಭಾವಚಿತ್ರ, ಬ್ಯಾಂಕ್ ಪಾಸ್‌ಪುಸ್ತಕದ ನಕಲು ಮಾಹಿತಿಗಳೊಂದಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ಮೇಳದಲ್ಲಿ ಬ್ಯಾಂಕುಗಳು ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಆರ್ಥಿಕ ಸಹಕಾರ ನೀಡಲಿವೆ. ವಿಶೇಷವಾಗಿ ಕೃಷಿ ಕ್ಷೇತ್ರದ ವಿಕಾಸಕ್ಕೆ ಹೆಚ್ಚಿನ ಆದ್ಯತೆ ನೀಡಲಿವೆ. ಗುಡಿ ಕೈಗಾರಿಕೆ, ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕಾ ಕ್ಷೇತ್ರಗಳ ಉನ್ನತಿಗೂ ಅಗತ್ಯ ಸಹಕಾರ ದೊರೆಯಲಿದೆ. ಮನೆ, ವಾಹನ, ಕಾರು, ಮತ್ತಿತರ ವಾಣಿಜ್ಯ ಸಾಲಸೌಲಭ್ಯ ಹಾಗೂ ಮಂಜೂರಾತಿಗೂ ಅವಕಾಶ ದೊರೆಯಲಿದೆ. ವೈದ್ಯಕೀಯ ಮತ್ತಿತರ ವೃತ್ತಿಪರ ಕ್ಷೇತ್ರಗಳಿಗೂ ಸಾಲಸೌಲಭ್ಯ ನೀಡಲಾಗುವುದು ಎಂದು ವಿವರ ನೀಡಿದರು.

ಗ್ರಾಹಕರ ಮೇಳವನ್ನು 21ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಉಪಸ್ಥಿತರಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕ ಸೋಲೊಮನ್ ಮೆನೇಜಸ್, ಎಸ್‌ಬಿಐ ಮುಖ್ಯಸ್ಥ ಆರ್.ಎಸ್.ಕುಮಾರ್, ಕೆನರಾ ಬ್ಯಾಂಕ್‌ ವಿಭಾಗೀಯ ವ್ಯವಸ್ಥಾಪಕ ಆರ್.ಎಂ.ದಯಾನಂದ್ ಇದ್ದರು.

ಪ್ರತಿಕ್ರಿಯಿಸಿ (+)