ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಚ್ಚ ತಗ್ಗಿಸಲು ತಂತ್ರಜ್ಞಾನ ನೆರವಾಗಲಿ

ಗೋವಾದ ಆರೋಗ್ಯ ಸಚಿವ ವಿಶ್ವಜಿತ್‌ ಪಿ. ರಾಣೆ ಆಶಯ
Last Updated 12 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ವೈದ್ಯಕೀಯ ವೆಚ್ಚ ತಗ್ಗಿಸಲು ತಂತ್ರಜ್ಞಾನವು ಪರಿಹಾರ ಸೂಚಿಸಬೇಕು’ ಎಂದು ಗೋವಾದ ಆರೋಗ್ಯ ಸಚಿವ ವಿಶ್ವಜಿತ್‌ ಪಿ. ರಾಣೆ ಆಶಿಸಿದರು.

ಇಲ್ಲಿನ ಯುಎಸ್‌ಎಂ (ಮಲೇಷಿಯಾದ ವಿಶ್ವವಿದ್ಯಾಲಯ)- ಕೆಎಲ್‌ಇ ವೈದ್ಯಕೀಯ ಕಾರ್ಯಕ್ರಮದ ದಶಮಾನೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ್ದ ‘ವೈದ್ಯಕೀಯ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

‘ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ ಸುಧಾರಿತ ತಂತ್ರಜ್ಞಾನ ಮತ್ತು ನವೋದ್ಯಮಗಳ ಆವಿಷ್ಕಾರಗಳ ಪ್ರತಿಫಲವು ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ಸಿಗುವಂತಾಗಬೇಕು’ ಎಂದರು.

‘ಯುವಕರು ವೈದ್ಯಕೀಯವಾಗಿ ಮುಂದುವರಿದ ತಂತ್ರಜ್ಞಾನದ ಮೂಲಕ ಶೀಘ್ರ ರೋಗ ಪತ್ತೆ ಹಚ್ಚುವ ವಿಧಾನಗಳನ್ನು ಕಂಡು ಹಿಡಿಯುತ್ತಿದ್ದಾರೆ. ಅವು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಿವೆ. ಗೋವಾದಲ್ಲಿ ಮಹಿಳೆಯರು ಹೆಚ್ಚಾಗಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಶೀಘ್ರ ರೋಗ ಪತ್ತೆಗಾಗಿ ಅನುಕೂಲವಾಗುವ ತಂತ್ರಜ್ಞಾನವನ್ನು ನವೋದ್ಯಮವೊಂದು ಸಂಶೋಧಿಸಿದೆ. ಆ ಉಪಕರಣವು ರೋಗ ಪತ್ತೆ ಹಚ್ಚಿ ಚಿಕಿತ್ಸೆಯ ಹಾದಿ ಸುಗಮಗೊಳಿಸುತ್ತಿದೆ. ಹಳ್ಳಿಗಳಿಗೇ ಹೋಗಿ ಸ್ಕ್ಯಾನಿಂಗ್‌ಗೂ ಅವಕಾಶವಿದೆ. ಇಂತಹ ಆವಿಷ್ಕಾರಗಳು ನಿರಂತರವಾಗಿ ನಡೆಯಬೇಕು ಮತ್ತು ಜನರಿಗೆ ಉಪಯೋಗ ಆಗಬೇಕು’ ಎಂದು ತಿಳಿಸಿದರು.

ಆವಿಷ್ಕಾರಕ್ಕೆ ಸ್ವಾತಂತ್ರ್ಯ:

‘ಗೋವಾದಲ್ಲಿ ಆರೋಗ್ಯ ಸೌಲಭ್ಯ ವೃದ್ಧಿಗೆ ಹೆಚ್ಚಿನ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿದೆ. ₹ 500 ಕೋಟಿ ವೆಚ್ಚದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ತಲೆ ಎತ್ತಲಿದೆ. ಪ್ರಧಾನಿ ನರೇಂದ್ರ ಮೋದಿ ಆವಿಷ್ಕಾರಕ್ಕೆ ಸ್ವಾತಂತ್ರ್ಯ ನೀಡಿದ್ದಾರೆ’ ಎಂದರು.

‘ಕೆಎಲ್‌ಇ ಸಂಸ್ಥೆಗೂ ಗೋವಾಕ್ಕೂ ಅನನ್ಯ ನಂಟಿದೆ. ನಮ್ಮವರು ಶಿಕ್ಷಣ ಮತ್ತು ಆರೋಗ್ಯಕ್ಕೆ ಈ ಸಂಸ್ಥೆಯನ್ನೇ ನೆಚ್ಚಕೊಂಡಿದ್ದಾರೆ. ಎರಡೂ ರಾಜ್ಯಗಳ ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುವುದು. ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ದೂರದೃಷ್ಟಿಯ ಫಲವಾಗಿ, ಕೆಎಲ್‌ಇ ಸಂಸ್ಥೆ ಎಲ್ಲೆಡೆ ಹೆಸರು ಮಾಡಿದೆ. ಬೆಳಗಾವಿಯೂ ಜಾಗತಿಕ ಮನ್ನಣೆ ಗಳಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಕಲಿಯುತ್ತಿದ್ದಾರೆ:

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ‘10 ವರ್ಷಗಳ ಹಿಂದೆ ಆರಂಭವಾದ ಯುಎಸ್‌ಎಂ- ಕೆಎಲ್‌ಇ ವೈದ್ಯಕೀಯ ಕಾರ್ಯಕ್ರಮದಲ್ಲಿ ಈವರೆಗೆ 467 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಶೇ 100ರಷ್ಟು ಫಲಿತಾಂಶ ಬಂದಿದೆ. ಮಲೇಷಿಯಾ ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿರುವುದು ವಿಶೇಷ’ ಎಂದರು.

ಯುಎಸ್‌ಎಂ–ಕೆಎಲ್‌ಇ ನಿರ್ದೇಶಕ ಡಾ.ಎಚ್‌.ಬಿ. ರಾಜಶೇಖರ ಮಾತನಾಡಿದರು. ವಿಶ್ವಜಿತ್ ರಾಣೆ, ಮಲೇಶಿಯಾದ ಯುಎಸ್‌ಎಂ ಪ್ರತಿನಿಧಿಗಳಾದ ಪ್ರೊ.ತಾನ್‌ ಡಾಟೋ ಜುಲ್ಕಿಫ್ಲಿಬಿ ಅಬ್ದುಲ್ ರಜಾಕ್, ನಿರ್ದೇಶಕ ಡಾ.ಅಹ್ಮದ ಸುಕಾರಿ ಹಲೀಂ, ಡೀನ್ ಪ್ರೊ.ಸೈಫುಲ್ಲಾ ಬಹಾರಿ ಇಸ್ಮಾಯಿಲ್, ಡಾ.ಕಮರುದ್ದೀನ್‌ ಜಾಲಮ್ ಅವರನ್ನು ಸತ್ಕರಿಸಲಾಯಿತು.

ಡಾ.ಎ.ಸಿ. ಪಾಂಗಿ, ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಕುಲಪತಿ ಡಾ.ವಿವೇಕ ಸಾವಜಿ, ಕುಲಸಚಿವ ಡಾ.ವಿ.ಡಿ. ಪಾಟೀಲ, ಜೆಎನ್ಎಂಸಿ ಪ್ರಾಚಾರ್ಯರಾದ ಡಾ.ನಿರಂಜನಾ ಮಹಾಂತಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಡಾ.ಎ.ಎಸ್. ಗೋದಿ, ಡಾ.ಆರ್.ಎಸ್. ಮುಧೋಳ, ಡಾ.ಸದಾನಂದ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT