ಬೆಳಗಾವಿ ತಾಲ್ಲೂಕು: 192 ಅಂಗನವಾಡಿಗಳಿಗೆ ಸ್ವಂತ ಸೂರಿಲ್ಲ!

7
ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ

ಬೆಳಗಾವಿ ತಾಲ್ಲೂಕು: 192 ಅಂಗನವಾಡಿಗಳಿಗೆ ಸ್ವಂತ ಸೂರಿಲ್ಲ!

Published:
Updated:
Deccan Herald

ಬೆಳಗಾವಿ: ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ 113 ಅಂಗನವಾಡಿಗಳು ಬಾಡಿಗೆ ಕೊಠಡಿಯಲ್ಲಿ, 30 ಶಾಲೆಗಳ ಕಟ್ಟಡದಲ್ಲಿ ಹಾಗೂ 49 ಸಮುದಾಯ ಭವನ ಮತ್ತಿತರ ಕಡೆಗಳಲ್ಲಿ ನಡೆಯುತ್ತಿವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೇವತಿ ಹಿರೇಮಠ ತಿಳಿಸಿದರು.

ಸೋಮವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ವ್ಯಾಪ್ತಿಯಲ್ಲಿ 670 ಅಂಗನವಾಡಿ ಕೇಂದ್ರಗಳಿವೆ. ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರು ಸೇರಿ 50,054 ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ವಿತರಿಸುವ ಭೌತಿಕ ಗುರಿ ನೀಡಲಾಗಿದೆ. ಈ ಪೈಕಿ ನಿತ್ಯ 47,700 ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಈ ಸಾಲಿನಲ್ಲಿ 16 ಕಟ್ಟಡಗಳು, 36 ಶೌಚಾಲಯಗಳ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಬಾಲಸ್ನೇಹಿ ಕೇಂದ್ರಗಳು

‘ಈ ಸಾಲಿನಲ್ಲಿ 62 ಅಂಗನವಾಡಿಗಳನ್ನು ಬಾಲಸ್ನೇಹಿ ಕೇಂದ್ರಗಳೆಂದು ರೂಪಿಸಲು ಯೋಜಿಸಲಾಗಿದೆ. ಗೋಡೆಗಳಲ್ಲಿ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗುವುದು. ವರ್ಣಮಾಲೆ ಹಾಗೂ ಅಕ್ಷರಗಳನ್ನು ಬರೆಸಲಾಗುವುದು. ಈ ಮೂಲಕ ಮಕ್ಕಳನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ. ಈಚೆಗೆ 210 ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗಿತ್ತು. ಈಗ ಅವರ ಸಂಖ್ಯೆ 185ಕ್ಕೆ ಇಳಿದಿದೆ. ನಿಯಮಿತವಾಗಿ ತೂಕ ಪರೀಕ್ಷಿಸಲಾಗುತ್ತಿದೆ. ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

‘ಹಲಗಾದಲ್ಲಿ ಕಾರ್ಯಕರ್ತೆ ಹುದ್ದೆಗೆ ಅದೇ ಗ್ರಾಮದ ವಿಧವೆ ಇದ್ದರೂ ಬೇರೊಬ್ಬರನ್ನು ಆಯ್ಕೆ ಮಾಡಲಾಗಿದೆ. ಆ ಊರಿನವರಲ್ಲದ ಮಹಿಳೆಗೆ ರಹವಾಸಿ ದೃಢೀಕರಣ ಪತ್ರ ನೀಡಲಾಗಿದೆ. ಇದೇ ರೀತಿ ಹಲವು ಕಡೆಗಳಲ್ಲಿ ಸರ್ಕಾರದ ನಿಯಮ ಉಲ್ಲಂಘಿಸಲಾಗಿದೆ’ ಎಂದು ಸದಸ್ಯರಾದ ಯಲ್ಲಪ್ಪ ಕೋಲಕಾರ, ಮಹಾಂತೇಶ ದೂರಿದರು.

‘ಇದು ತಾತ್ಕಾಲಿಕ ಆಯ್ಕೆ ಪಟ್ಟಿಯಾಗಿದೆ. ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ’ ಎಂದು ಸಿಡಿಪಿಒ ತಿಳಿಸಿದರು.

ಪಂಚಾಯ್ತಿಯಲ್ಲಿ ಹೆಸರು ಬರೆಸಿ

‘ಗ್ರಾಮ ಪಂಚಾಯ್ತಿಗಳಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯರಿಗೆ ಗೌರವ ದೊರೆಯುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಶಾಸಕರ ಹೆಸರುಗಳನ್ನು ಅಲ್ಲಿ ಬರೆಸಬೇಕು. ಪ್ರತ್ಯೇಕ ಕುರ್ಚಿಗಳ ವ್ಯವಸ್ಥೆಯನ್ನೂ ಮಾಡಬೇಕು’ ಎಂದು ಅಧ್ಯಕ್ಷ ಶಂಕರಗೌಡ ಪಾಟೀಲ ತಾಕೀತು ಮಾಡಿದರು.

‘ಪಿಡಿಒಗಳು ತಮ್ಮ ಮಾತು ಕೇಳುತ್ತಿಲ್ಲ. ಅವರು ಸಭೆಗೂ ಬರುವುದಿಲ್ಲ. ಇದರಿಂದಾಗಿ ಹಲವು ಸಮಸ್ಯೆಗಳು ಬಗೆಹರಿಯುತ್ತಿಲ್ಲ’ ಎಂದು ಸದಸ್ಯರು ಒಕ್ಕೊರಲಿನಿಂದ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ‘ಅ.15ರಂದು ಪಿಡಿಒಗಳ ಸಭೆ ಕರೆಯಬೇಕು. ಗ್ರಾಮ ಲೆಕ್ಕಾಧಿಕಾರಿಗಳೂ ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.

ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸಬೇಕು ಎಂದು ಸೂಚಿಸಿದರು.

ಉಪಾಧ್ಯಕ್ಷ ಮಾರುತಿ ಸನದಿ, ಇಒ ಪದ್ಮಜಾ ಪಾಟೀಲ, ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !