‘ಮಹಾದಾಯಿ ನೀರು ಬಳಸಲು 3 ಅಣೆಕಟ್ಟೆಗಳ ನಿರ್ಮಾಣ’

7

‘ಮಹಾದಾಯಿ ನೀರು ಬಳಸಲು 3 ಅಣೆಕಟ್ಟೆಗಳ ನಿರ್ಮಾಣ’

Published:
Updated:

ಬೆಳಗಾವಿ:  ಮಹಾದಾಯಿ ನ್ಯಾಯಮಂಡಳಿ ರಾಜ್ಯಕ್ಕೆ ಹಂಚಿಕೆ ಮಾಡಿರುವ13.5 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ರಾಜ್ಯ ಸರ್ಕಾರ ಹಲವು ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕಾಗಿದೆ. ಮುಖ್ಯವಾಗಿ ನೀರು ಸಂಗ್ರಹಿಸಲು ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಮೂರು ಕಡೆ ಅಣೆಕಟ್ಟೆಗಳು ಹಾಗೂ ಕಾಲುವೆಗಳ ನಿರ್ಮಾಣ ಮಾಡಬೇಕಾಗಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಳಸಾ, ಹಲ್ಸರಾ ಹಾಗೂ ಬಂಡೂರಿ ಬಳಿ ಮೂರು ಅಣೆಕಟ್ಟೆಗಳನ್ನು ತುರ್ತಾಗಿ ನಿರ್ಮಿಸಬೇಕಾಗಿದೆ. ಇದಕ್ಕೆ ಅಂದಾಜು ₹ 400 ಕೋಟಿ ಅನುದಾನದ ಅವಶ್ಯಕತೆ ಬೀಳಬಹುದು ಎಂದು ಕರ್ನಾಟಕ ನೀರಾವರಿ ನಿಗಮದ ಎಕ್ಸಿಕ್ಯುಟಿವ್‌ ಎಂಜಿನಿಯರ್‌ರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಣಕುಂಬಿ ಸುತ್ತಮುತ್ತಲಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುವ ಮಳೆಯ ನೀರು ಮಲಪ್ರಭಾ, ಕಳಸಾ ಹಾಗೂ ಬಂಡೂರಿ ನಾಲಾ ಮೂಲಕ ಪ್ರತ್ಯೇಕವಾಗಿ ಹರಿದು ಹೋಗುತ್ತದೆ. ಮಲಪ್ರಭಾ ರಾಜ್ಯದ ಕಡೆ ಮುಖ ಮಾಡಿದರೆ, ಕಳಸಾ– ಬಂಡೂರಿ ನಾಲಾ ನೀರು ಮಹಾದಾಯಿ ಮೂಲಕ ಗೋವಾದತ್ತ ಹೋಗುತ್ತದೆ. ಈ ನೀರನ್ನು ಮಲಪ್ರಭಾಗೆ ಜೋಡಿಸಲು ಕಾಲುವೆಗಳನ್ನು (ಇಂಟರ್‌ ಕನೆಕ್ಟಿಂಗ್‌ ಕೆನಾಲ್‌) ನಿರ್ಮಿಸಬೇಕಾಗಿದೆ.

ಮೊದಲ ಹಂತವಾಗಿ ಕಳಸಾ– ಮಲಪ್ರಭಾ ಕಾಲುವೆಯನ್ನು 2007–08ರಲ್ಲಿ ನಿರ್ಮಿಸಲಾಗಿದೆ (ನ್ಯಾಯ ಮಂಡಳಿಯ ತೀರ್ಪಿನ ಹಿನ್ನೆಲೆಯಲ್ಲಿ ಈ ಕಾಲುವೆಯನ್ನು ಮುಚ್ಚಲಾಗಿದೆ). ಮುಂದಿನ ಹಂತದಲ್ಲಿ ಕಳಸಾ– ಹಲ್ಸರಾ ಹಾಗೂ ಬಂಡೂರಿ– ಮಲಪ್ರಭಾಗೆ ಸಂಪರ್ಕ ಕಲ್ಪಿಸುವ ಕಾಲುವೆಗಳನ್ನು ನಿರ್ಮಿಸಬೇಕಾಗಿದೆ. ಈ ರೀತಿ ಮಾಡುವ ಮೂಲಕ ಮಲಪ್ರಭಾ ನದಿಗೆ 4 ಟಿಎಂಸಿ ಅಡಿ ನೀರು ಹರಿಸಬಹುದಾಗಿದೆ.

ಕುಡಿಯುವ ನೀರು ಪೂರೈಕೆ:

ಈ ಯೋಜನೆಯಿಂದ ಬೆಳಗಾವಿ ತಾಲ್ಲೂಕಿನ ರಾಮದುರ್ಗ, ಬೈಲಹೊಂಗಲ, ಸವದತ್ತಿ, ಹುಬ್ಬಳ್ಳಿ– ಧಾರವಾಡ, ನವಲಗುಂದ, ಗದಗ ಜಿಲ್ಲೆಯ ನರಗುಂದ, ರೋಣ ಪಟ್ಟಣಗಳ ಜನರಿಗೆ ಕುಡಿಯುವ ನೀರು ಪೂರೈಸಬಹುದಾಗಿದೆ. ಎಲ್ಲೆಲ್ಲಿ ಕೊಳವೆ ಅಳವಡಿಸುವ ಕಾಮಗಾರಿ ಅಪೂರ್ಣವಾಗಿದೆಯೋ ಅದನ್ನು ತಕ್ಷಣ ಪೂರ್ಣಗೊಳಿಸಬೇಕಾಗಿದೆ.

ಜಲವಿದ್ಯುತ್‌ ಘಟಕ:

ಖಾನಾಪುರ ತಾಲ್ಲೂಕಿನ ಜಾಂಬೋಟಿ ಬಳಿಯ ಕೊಟ್ನಿ ಹತ್ತಿರ ಸ್ಥಾಪಿಸಲು ಉದ್ದೇಶಿಸಿರುವ ಜಲವಿದ್ಯುತ್‌ ಉತ್ಪಾದನಾ ಘಟಕಕ್ಕೆ ನ್ಯಾಯಮಂಡಳಿಯು 8.02 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ವಿದ್ಯುತ್‌ ಘಟಕ ನಿರ್ಮಾಣವನ್ನು ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿ) ಶೀಘ್ರದಲ್ಲಿ ಕೈಗೆತ್ತಿಕೊಳ್ಳಬೇಕಾಗಿದೆ.

ನೀರು ಹಂಚಿಕೆ ವಿಷಯವು ನ್ಯಾಯ ಮಂಡಳಿಗೆ ಹೋಗಿದ್ದರಿಂದ ವಿದ್ಯುತ್‌ ಘಟಕ ನಿರ್ಮಿಸುವ ಸಂಬಂಧ ಯಾವುದೇ ಪ್ರಕ್ರಿಯೆಯನ್ನು ಕೆಪಿಸಿ ಕೈಗೆತ್ತಿಕೊಂಡಿರಲಿಲ್ಲ. ಈಗ ತೀರ್ಪು ಬಂದಿದ್ದು, ನಿರ್ಮಾಣ ಕಾರ್ಯವನ್ನು ಆರಂಭಿಸಬಹುದಾಗಿದೆ.

ಮೂಲ ಯೋಜನೆಯಲ್ಲಿ 337.73 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದಿಸಲು 14 ಟಿಎಂಸಿ ಅಡಿ ನೀರು ಕೇಳಲಾಗಿತ್ತು. ಆದರೆ, ಈಗ 8.02 ಟಿಎಂಸಿ ಅಡಿ ನೀರು ದೊರೆತಿರುವುದರಿಂದ ವಿದ್ಯುತ್‌ ಉತ್ಪಾದನೆಯೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಎಕ್ಸಿಕ್ಯುಟಿವ್‌ ಎಂಜಿನಿಯರ್‌ ಅಭಿಪ್ರಾಯ ಪಟ್ಟರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !