ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಿಲ್ಲೆಯಲ್ಲಿ 6,197 ಶಿಕ್ಷಕರ ಹುದ್ದೆ ಖಾಲಿ!

ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ, ಸುಧಾರಣಾ ಕಾರ್ಯಕ್ರಮಗಳು ಗೌಣ
Last Updated 26 ಸೆಪ್ಟೆಂಬರ್ 2022, 4:06 IST
ಅಕ್ಷರ ಗಾತ್ರ

ಬೆಳಗಾವಿ: ಅಖಂಡ ಬೆಳಗಾವಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಬರೋಬ್ಬರಿ 6,197 ಶಿಕ್ಷಕರ ಹುದ್ದೆಗಳು ಖಾಲಿ ಇವೆ!

ಪ್ರಾದೇಶಿಕವಾಗಿ ರಾಜ್ಯದ ಎರಡನೇ ಅತಿ ದೊಡ್ಡ ಜಿಲ್ಲೆ, ರಾಜಕೀಯ ಶಕ್ತಿ ಕೇಂದ್ರ ಎಂದೆಲ್ಲ ಎಲ್ಲರೂ ‘ಬೆನ್ನು ತಟ್ಟುತ್ತಲೇ’ ಇದ್ದಾರೆ. ಆದರೆ, ಶಿಕ್ಷಕರ ಕೊರತೆಯಿಂದ ಬೆನ್ನಿನ ಮೇಲೆ ಬೀಳುತ್ತಿರುವ ‘ಪೆಟ್ಟು’ ಯಾರಿಗೂ ಕಾಣುತ್ತಿಲ್ಲ. ಶಿಕ್ಷಕ ಕೊರತೆ ಎದುರಿಸುತ್ತಿರುವ ಜಿಲ್ಲೆಗಳಲ್ಲೂ ‘ಟಾಪ್‌’ನಲ್ಲಿದ್ದೇವೆ ಎಂಬ ‘ಹೆಗ್ಗಳಿಕೆ’ಯೂ ನಮ್ಮದೇ.

ಮಕ್ಕಳ ಹಾಜರಾತಿ ಹೆಚ್ಚಿಸಲು ಹಾಗೂ ಕಲಿಕಾ ಗುಣಮಟ್ಟಕ್ಕೆ ಸರ್ಕಾರಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಕೋಟ್ಯಂತರ ಹಣವನ್ನು ನೀರಿನಂತೆ ಹರಿಸುತ್ತಿವೆ. ಆದರೆ, ಇದಕ್ಕೆ ಬೇಕಾದಷ್ಟು ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ, ಶೈಕ್ಷಣಿಕ ಸುಧಾರಣೆ ಬೇರುಮಟ್ಟದಲ್ಲೇ ಊಣವಾಗಿದೆ. ಇದಕ್ಕೆ ಬೆಳಗಾವಿ ಜಿಲ್ಲೆಯೂ ಹೊರತಾಗಿಲ್ಲ.

ಅನುಕೂಲತೆಗಾಗಿ ಜಿಲ್ಲೆಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಎಂದು ಇಬ್ಬಾಗ ಮಾಡಲಾಗಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 2,424 ಹಾಗೂ ಚಿಕ್ಕೋಡಿಯಲ್ಲಿ 3,773 ಶಿಕ್ಷಕರ ಹುದ್ದೆಗಳು ಖಾಲಿ ಇವೆ.

ಕಳೆದ ಮೂರು ವರ್ಷಗಳಿಂದ ಕೊರೊನಾ ಸಂಕಷ್ಟ ಕಾಲದಲ್ಲಿ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಮುಚ್ಚಿದವು. ಇದರಿಂದಾಗಿ ಸರ್ಕಾರಿ ಶಾಲೆಗಳತ್ತ ಮಕ್ಕಳು, ಪಾಲಕರು ಮುಖ ಮಾಡಿದರು. ಮಕ್ಕಳ ಸಂಖ್ಯೆ ಹೆಚ್ಚಾಯಿತು. ಆದರೆ, ಅದಕ್ಕೆ ತಕ್ಕಂತೆ ಶಿಕ್ಷಕರ ನೇಮಕಾತಿ ಆಗಲಿಲ್ಲ.

ಕಲಿಕಾ ಸುಧಾರಣೆಗಾಗಿ ವರ್ಷದಿಂದ ವರ್ಷಕ್ಕೆ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಆದರೆ, ಅವುಗಳ ಅನುಷ್ಠಾನ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಬೇಡಿಕೆಗೆ ತಕ್ಕಷ್ಟು ಶಿಕ್ಷಕರೇ ಇಲ್ಲ. ಇದು ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಪ್ರಸಕ್ತ ಶೈಕ್ಷಣಿಕ ವರ್ಷ ತರಗತಿ ಆರಂಭಗೊಂಡು ನಾಲ್ಕು ತಿಂಗಳಾಗಿದೆ. ಆದರೆ, ಸೇವಾನಿವೃತ್ತಿ, ವರ್ಗಾವಣೆ ಮತ್ತಿತರ ಕಾರಣಗಳಿಂದ ತೆರವಾದ ಹುದ್ದೆಗಳ ಭರ್ತಿಗೆ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಈ ಸಮಸ್ಯೆ ಇಂದು, ನಿನ್ನೆಯದ್ದಲ್ಲ. ಹಲವು ವರ್ಷಗಳಿಂದಲೂ ಇದೇ ಸ್ಥಿತಿ ಇದ್ದು, ಕೆಲ ಶಾಲೆಗಳಿಗಂತೂ ಅತಿಥಿ ಶಿಕ್ಷಕರೇ ಆಧಾರವಾಗಿದ್ದಾರೆ.

ಬೆಳಗಾವಿ ಜಿಲ್ಲೆ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿರುವ 1,385 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2,197 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಖಾನಾಪುರ ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲೇ ಶಿಕ್ಷಕರ ಅಭಾವ ಹೆಚ್ಚಿದೆ. ಜೊತೆಗೆ ಸವದತ್ತಿ, ರಾಮದುರ್ಗ ತಾಲ್ಲೂಕಿನ ಶಾಲೆಗಳು ಶಿಕ್ಷಕರ ಕೊರತೆಯಿಂದ ಬಳಲುತ್ತಿವೆ. ಕೆಲ ಮರಾಠಿ ಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರು ಇಲ್ಲ. ಹಾಗಾಗಿ ತವರಿನಲ್ಲೇ ಕನ್ನಡ ಭಾಷಾ ಕಲಿಕೆಗೆ ಪೆಟ್ಟು ಬೀಳುತ್ತಿದೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ: ಇಲ್ಲಿ 1,789 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 3,169 ಶಿಕ್ಷಕರು ಇಲ್ಲ. 193 ಪ್ರೌಢಶಾಲೆಯಲ್ಲಿ 604 ಶಿಕ್ಷಕರ ಕೊರತೆ ಇದೆ. ಎರಡೂ ಸೇರಿ 3,773 ಶಿಕ್ಷಕರ ಹುದ್ದೆ ಖಾಲಿ ಇವೆ. ಈ ಪೈಕಿ ಪ್ರಾಥಮಿಕ ಶಾಲೆಯಲ್ಲಿ 1,689, ಪ್ರೌಢಶಾಲೆಯಲ್ಲಿ 315 ಸೇರಿ 2,004 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಕೆಲವೆಡೆ ಏಕೋಪಾಧ್ಯಾಯ ಶಾಲೆಗಳಿವೆ. ಅಂತಹ ಕಡೆಗಳಲ್ಲಿ ಹಾಲಿ ಶಿಕ್ಷಕರಿಗೆ ಕಾರ್ಯದೊತ್ತಡ ಇನ್ನೂ ಹೆಚ್ಚಿದೆ.

ಕಲಾ ಶಿಕ್ಷಕರ 264 ಹುದ್ದೆಗಳು ಮಂಜೂರು ಇದ್ದರೆ, 144 ಶಿಕ್ಷಕ ಹುದ್ದೆಗಳು ಭರ್ತಿಯಾಗಿವೆ. 120 ಹುದ್ದೆಗಳು ಖಾಲಿ ಇವೆ. ಕನ್ನಡ ಪಿಸಿಎಂ ವಿಷಯದ 80 ಮತ್ತು ಕನ್ನಡ ಸಿಬಿಝಡ್ ವಿಷಯದ 59 ಹುದ್ದೆಗಳು ಖಾಲಿ ಇವೆ. ದೈಹಿಕ ಶಿಕ್ಷಣ ಶಿಕ್ಷಕರ 61 ಹುದ್ದೆಯಲ್ಲಿ ಒಂದನ್ನೂ ನೇಮಕ ಮಾಡಿಲ್ಲ.

*

ಅತಿಥಿ ಶಿಕ್ಷಕರೇ ಆಧಾರ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕದಿಂದಾಗಿ ಶಿಕ್ಷಕರ ಕೊರತೆ ಪ್ರಮಾಣ ತಗ್ಗಿದೆ. ಇನ್ನೂ ಹಲವು ಕಡೆ ಶಿಕ್ಷಕರ ಕೊರತೆಯ ಕಾರಣ ಕಲಿಕಾ ಮಟ್ಟವೂ ಕುಸಿದಿದೆ. ಇದಕ್ಕೂ ಮುನ್ನ 70 ಶಿಕ್ಷಕರ ಹುದ್ದೆ ಖಾಲಿ ಇದ್ದವು. ಅತಿಥಿ ಶಿಕ್ಷಕರ ನೇಮಕಾತಿ ನಂತರವೂ 15 ಹುದ್ದೆಗಳು ಖಾಲಿ ಇವೆ.

*

ಗಡಿ ಹಳ್ಳಿಗೆ ಬಾರದ ಅತಿಥಿ ಶಿಕ್ಷಕರು

ರಾಮದುರ್ಗ: ತಾಲ್ಲೂಕಿನ ಕೊನೆಯ ಹಳ್ಳಿಗಳಾದ ಬೋಚಬಾಳ ಮತ್ತು ಮಲ್ಲಾಪೂರದಲ್ಲಿ ಶಿಕ್ಷಕರ ಕೊರತೆ ಎನ್ನುವುದಕ್ಕಿಂತ ಶಿಕ್ಷಕರೇ ಇಲ್ಲ. ಹಿಂದೆ ಇದ್ದ ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ.

ಬೋಚಬಾಳ ಶಾಲೆಯಲ್ಲಿ 315 ಮಕ್ಕಳಿದ್ದು, ಒಟ್ಟು 7 ಶಿಕ್ಷಕರ ಪೈಕಿ 2 ಮಾತ್ರ ಶಿಕ್ಷಕರಿದ್ದಾರೆ. ನಾಲ್ಕು ಅತಿಥಿ ಶಿಕ್ಷಕರಿದ್ದಾರೆ. ಮಲ್ಲಾಪೂರದ ಶಾಲೆಯಲ್ಲಿ 270 ಮಕ್ಕಳಿಗೆ ಒಟ್ಟು 2 ಶಿಕ್ಷಕರು ಮತ್ತು 6 ಜನ ಅತಿಥಿ ಶಿಕ್ಷಕರಿದ್ದಾರೆ. ರಾಮದುರ್ಗದ ಕೊನೆಯ ಹಳ್ಳಿಗಳಿಗೆ ಶಿಕ್ಷಕರು ಬರಲು ಹಿಂದೇಟು ಹಾಕುತ್ತಿರುವುದು ಇಲಾಖೆಗೆ ತಲೆನೋವಾಗಿದೆ.

*

*

ಮುಖ್ಯಶಿಕ್ಷಕರ ಹುದ್ದೆಗಳೂ ಖಾಲಿ

ಸವದತ್ತಿ: ಅವಿಭಜಿತ ತಾಲ್ಲೂಕಿನ ಯರಗಟ್ಟಿ ಭಾಗದಲ್ಲಿ ಈ ಮೊದಲು ಶಿಕ್ಷಕರ ಕೊರತೆ ಹೆಚ್ಚಿತ್ತು. ಇದೀಗ ಅಥಿತಿ ಶಿಕ್ಷಕರ ನೇಮಕ ಮಾಡಲಾಗಿದೆ. ಪ್ರೌಢಶಾಲೆಗಳ 23 ಮುಖ್ಯ ಶಿಕ್ಷಕರ ಹುದ್ದೆಯಲ್ಲಿ 15 ಭರ್ತಿಯಾಗಿವೆ. ಉಳಿದ 8 ಖಾಲಿ ಇದ್ದು, ಇದ್ದ ಶಿಕ್ಷಕರಿಗೆ ಅಧಿಕಾರ ನೀಡಲಾಗಿದೆ.

204 ಸಹ ಶಿಕ್ಷಕರಲ್ಲಿ 140 ಜನ ಕಾರ್ಯನಿರ್ವಹಿಸುತ್ತಿದ್ದಾರೆ. 56 ಹುದ್ದೆಗಳು ಖಾಲಿ ಇದ್ದು, ಅಥಿತಿ ಶಿಕ್ಷಕರನ್ನು
ನೇಮಿಸಲಾಗಿದೆ. ಅದೇ ರೀತಿ 27 ದೈಹಿಕ ಶಿಕ್ಷಕರಲ್ಲಿ 25 ಭರ್ತಿಯಾಗಿದೆ. ಪ್ರಾಥಮಿಕ ವಿಭಾಗದಲ್ಲಿ 333 ಶಿಕ್ಷಕರ ಪೈಕಿ 150 ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆಯಲ್ಲಿದೆ. 285 ಅಥಿತಿ ಶಿಕ್ಷಕರನ್ನು ನೇಮಿಸಲಾಗಿದೆಂದು ಬಿಇಒ ಎಸ್.ಸಿ. ಕರೀಕಟ್ಟಿ ತಿಳಿಸಿದ್ದಾರೆ.

*

ಮರಾಠಿ ಶಾಲೆಗಲ್ಲಿ ಕನ್ನಡ ಶಿಕ್ಷಕರೇ ಇಲ್ಲ

ಖಾನಾಪುರ: ತಾಲ್ಲೂಕಿನಲ್ಲಿ ಮುಕ್ಕಾಲು ಭಾಗದಷ್ಟು ಮರಾಠಿ ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಆದರೆ ಈ ಶಾಲೆಗಳಲ್ಲಿ ಮರಾಠಿ ಶಿಕ್ಷಕರ ಜೊತೆಯಲ್ಲೇ ಕನ್ನಡ ಭಾಷಾ ಶಿಕ್ಷಕರ ಕೊರತೆಯೂ ಬಹಳಷ್ಟಿದೆ.

ಕಣಕುಂಬಿ, ಜಾಂಬೋಟಿ, ನಾಗರಗಾಳಿ, ಲೋಂಡಾ ಅರಣ್ಯ ಪ್ರದೇಶವನ್ನು ಸುತ್ತುವರಿದ ಮತ್ತು ಭೀಮಗಡ ವನ್ಯಧಾಮ ವ್ಯಾಪ್ತಿಯ ಕಾನನದಂಚಿನ ಬಹುತೇಕ ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಲ್ಲ. ಈ ಶಾಲೆಗಳು ಮುಖ್ಯ ವಾಹಿನಿಯಿಂದ ಹಲವು ಕಿಲೋ ಮೀಟರ್‌ ದೂರದಲ್ಲಿವೆ. ಅವುಗಳಿಗೆ ಹೋಗಿಬರುವುದಕ್ಕೆ ವಾಹನ ಸೌಲಭ್ಯ ಇಲ್ಲ ಎಂಬ ಕಾರಣಕ್ಕೆ ಈ ಶಾಲೆಗಳಿಗೆ ಹೋಗಲು ಅತಿಥಿ ಶಿಕ್ಷಕರೂ ಹಿಂಜರಿಯುತ್ತಿದ್ದಾರೆ.

*

ಪ್ರಜಾವಾಣಿ ತಂಡ: ಸಂತೋಷ ಈ.ಚಿನಗುಡಿ, ಇಮಾಮ್‌ಹುಸೇನ್‌ ಗೂಡುನವರ, ಸುಧಾಕರ ತಳವಾರ, ಪ್ರಸನ್ನ ಕುಲಕರ್ಣಿ, ಚನ್ನಪ್ಪ ಮಾದರ, ಬಸವರಾಜ ಶಿರಸಂಗಿ, ಪ್ರದೀಪ ಮೇಲಿನಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT