ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | 2023–24ರಲ್ಲಿ 90 ಮಹಿಳೆಯರ ಮೇಲೆ ಅತ್ಯಾಚಾರ: ನಾಗಲಕ್ಷ್ಮಿ

Published 20 ಆಗಸ್ಟ್ 2024, 14:27 IST
Last Updated 20 ಆಗಸ್ಟ್ 2024, 14:27 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ 2023–24ರಲ್ಲಿ 90 ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ನಡೆದಿರುವುದು ಜಿಲ್ಲಾಸ್ಪತ್ರೆಯ ನಿರ್ಭಯಾ ಘಟಕದಲ್ಲಿ ವರದಿಯಾಗಿದೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.

ಇಲ್ಲಿನ ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಇವು ಬೆಳಕಿಗೆ ಬಂದಿರುವ ಪ್ರಕರಣಗಳಷ್ಟೇ. ಇನ್ನೂ ಕೆಲವು ಬೆಳಕಿಗೆ ಬಾರದೆಯೂ ಇರಬಹುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ  ಆ.21ರಂದು ನಡೆಯಲಿರುವ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವುದು’ ಎಂದರು.

‘ಸವದತ್ತಿಯಲ್ಲಿ ಮಾಜಿ ದೇವದಾಸಿಯರನ್ನು ಭೇಟಿಯಾಗಿ ಚರ್ಚಿಸಿದ್ದೇನೆ.‌ ಅವರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕಿದೆ. ಸಂಬಂಧಿತ ಇಲಾಖೆಗೆ ಸೂಚನೆ ನೀಡಿ, ಮಾಜಿ ದೇವದಾಸಿಯರನ್ನೂ ಸಮಾಜದ ಮುಖ್ಯವಾಹಿನಿಗೆ ತರಲು ಯತ್ನಿಸಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಮಕ್ಕಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಪಾಠ ಬೋಧಿಸಬೇಕಿದೆ. ಈ ಸಂಬಂಧ ಕಾರ್ಯಕರ್ತೆಯರಿಗೂ ತರಬೇತಿ ಕೊಡಬೇಕಿದೆ’ ಎಂದರು.

‘ಜಿಲ್ಲಾಸ್ಪತ್ರೆಯೊಳಗೆ ಶುಚಿತ್ವ ಕಾಪಾಡಿಕೊಳ್ಳಲಾಗಿದೆ. ಆಸ್ಪತ್ರೆ ಆವರಣದಲ್ಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಶೌಚಗೃಹ, ವಿಶ್ರಾಂತಿ ಗೃಹ ವ್ಯವಸ್ಥೆ ಕಲ್ಪಿಸುವ ಹಾಗೂ ಆಸ್ಪತ್ರೆಯಲ್ಲಿನ ಕುಂದುಕೊರತೆ ನೀಗಿಸುವ ಸಂಬಂಧ ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ’ ಎಂದು ಹೇಳಿದರು.

ಅಧ್ಯಕ್ಷೆಗೆ ಮನವಿ:

ವಿದ್ಯಾರ್ಥಿ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಕರ್ನಾಟಕ ಅಸೋಸಿಯೇಷನ್‌ ಆಫ್‌ ರೆಸಿಡೆಂಟ್‌ ಡಾಕ್ಟರ್ಸ್‌ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಾನಿಕ ವೈದ್ಯರು,  ಇದೇವೇಳೆ ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಸಲ್ಲಿಸಿದರು. ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT