ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಜಿತ ಜವಳಕರ್‌– ರಮೇಶ ಪಾಟೀಲ ಪ್ರಕರಣ: ಇಬ್ಬರ ಜಗಳಕ್ಕೆ ಬಿಜೆಪಿ ರಾಜಕೀಯ ಬಣ್ಣ

Published 28 ನವೆಂಬರ್ 2023, 15:58 IST
Last Updated 28 ನವೆಂಬರ್ 2023, 15:58 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾನಗರ ಪಾಲಿಕೆ ಸದಸ್ಯ ಅಭಿಜಿತ ಜವಳಕರ್‌ ಮತ್ತು ರಮೇಶ ಪಾಟೀಲ ಮಧ್ಯೆ ವೈಯಕ್ತಿಕ ಕಾರಣಕ್ಕೆ ಗಲಾಟೆಯಾಗಿದೆ. ಈ ಬೆಳವಣಿಗೆಗೂ ನಮ್ಮ ಪಕ್ಷಕ್ಕೂ ಮತ್ತು ಪಾಲಿಕೆಯ ಬೆಳವಣಿಗೆಗಳಿಗೂ ಸಂಬಂಧವಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಜವಳಕರ್‌ ಬಂಧನ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕರು ರಾಜಕಾರಣ ಮಾಡುತ್ತಿದ್ದಾರೆ’ ಎಂಬ ಬಿಜೆಪಿ ನಾಯಕರ ಆರೋಪಕ್ಕೆ, ಇಲ್ಲಿ ಮಂಗಳವಾರ ಅವರು ಹೀಗೆ ಪ್ರತಿಕ್ರಿಯಿಸಿದರು.

‘ಇಬ್ಬರು ವ್ಯಕ್ತಿಗಳ ಮಧ್ಯೆ ನಡೆದ ಜಗಳಕ್ಕೆ ಬಿಜೆಪಿ ರಾಜಕೀಯ ಬಣ್ಣ ನೀಡಿದೆ. ಈ ಹಿಂದೆ ರಮೇಶ ಪಾಟೀಲ ಬಂಧನಕ್ಕಾಗಿ ಪಾಲಿಕೆಯ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದರು. ನಂತರ ಎಂಇಎಸ್ ಮುಖಂಡರು ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತಾರೆ. ನಮಗೆ ಅದರ ಅಗತ್ಯವಿಲ್ಲ’ ಎಂದರು.

‘ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನೂ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಬಿಜೆಪಿಯವರು ಅನಗತ್ಯವಾಗಿ ಪೊಲೀಸರಿಗೆ ತೊಂದರೆ ನೀಡುತ್ತಿದ್ದಾರೆ. ಯಾರು ತಪ್ಪು ಮಾಡಿದ್ದಾರೆಯೇ ಅವರ ವಿರುದ್ಧ ಪೊಲೀಸರು ಕ್ರಮ ಜರುಗಿಸುತ್ತಾರೆ. ನ್ಯಾಯಾಲಯ ತೀರ್ಪು ಕೊಡುತ್ತದೆ’ ಎಂದರು.

‘ಆಸ್ಪತ್ರೆಯಿಂದ ಬಿಡುಗಡೆಯಾಗುವ ಮುನ್ನವೇ ರೋಗಿ ಬಂಧಿಸಲಾಗಿದೆ. ಕಾಂಗ್ರೆಸ್‌ ನಾಯಕರು ಪೊಲೀಸರು ಕುಮ್ಮಕ್ಕು ನೀಡಿದ್ದಾರೆ’ ಎಂಬ ಆರೋಪಕ್ಕೆ, ‘ರೋಗಿಯು ಆಸ್ಪತ್ರೆಯಿಂದ ಬಿಡುಗಡೆಯಾದ ಸಾರಾಂಶ ಪೊಲೀಸರ ಬಳಿ ಇದೆ. ತೆಲಂಗಾಣದ ಚುನಾವಣಾ ಪ್ರಚಾರಕ್ಕೆ ಹೋಗಿರುವ ಇಲ್ಲಿನ ಶಾಸಕ ಮತ್ತೊಂದು ಪತ್ರ ತಂದುಕೊಟ್ಟಿದ್ದಾನೆ’ ಎಂದು ಪರೋಕ್ಷವಾಗಿ ಶಾಸಕ ಅಭಯ ಪಾಟೀಲ ಅವರಿಗೆ ತಿವಿದರು.

‘ಬೆಳಗಾವಿಯ ತಿನಿಸು ಕಟ್ಟೆಯಲ್ಲಿ ಮಳಿಗೆಗಳನ್ನು ಹಂಚಿಕೆ ಮಾಡುವಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸಚಿವ ಸಂಪುಟದ ನಿರ್ಧಾರದ ಪ್ರಕಾರ, ಫಲಾನುಭವಿಗಳು ಆರ್ಥಿಕವಾಗಿ ದುರ್ಬಲ ವರ್ಗದವರಾಗಿರಬೇಕು. ಆದರೆ, ಶ್ರೀಮಂತರಿಗೆ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಮಳಿಗೆ ಪಡೆದವರಲ್ಲಿ ಪಾಲಿಕೆಯ ಇಬ್ಬರು, ಸದಸ್ಯರ ಪತ್ನಿಯರಿದ್ದಾರೆ. ಹಾಗಾಗಿ ಸದಸ್ಯರನ್ನು ಅನರ್ಹಗೊಳಿಸಬೇಕೆಂಬ ದೂರಿನ ವಿಚಾರಣೆ ಪ್ರಗತಿಯಲ್ಲಿದೆ’ ಎಂದರು.

‘ಮಳಿಗೆಗಳ ಹಂಚಿಕೆ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅವರ ತನಿಖಾ ವರದಿ ಬಂದ ನಂತರ, ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಮಳಿಗೆಗಳನ್ನು ಹಂಚಿಕೆ ಮಾಡುವ ಟೆಂಡರ್‌ನ ಜಾಹೀರಾತುಗಳನ್ನು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ನೀಡಬೇಕಾಗಿತ್ತು. ಆದರೆ, ಜನರಿಗೆ ಹೆಚ್ಚಿನ ಮಾಹಿತಿಯಿಲ್ಲದ ಪತ್ರಿಕೆಗಳಿಗೆ ನೀಡಲಾಗಿದೆ’ ಎಂದರು.

‘ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣವಾಗಿದ್ದರಿಂದ ಎಪಿಎಂಸಿ ತರಕಾರಿ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸಮನ್ವಯ ಸಭೆ ನಡೆಸಿ, ಇಬ್ಬರಿಗೂ ನಷ್ಟವಾಗದಂತೆ ನೋಡಿಕೊಳ್ಳುತ್ತಾರೆ. ಈ ಹಿಂದೆ ವಿರೋಧಿಸಿದ್ದ ಶಾಸಕ ಅಭಯ ಪಾಟೀಲ ಅವರೇ ಈಗ ಬೆಂಬಲಕ್ಕೆ ನಿಂತಿದ್ದರಿಂದ ಖಾಸಗಿ ಮಾರುಕಟ್ಟೆ ಆರಂಭವಾಗಿದೆ’ ಎಂದರು.

‘ಬೆಳಗಾವಿಯಲ್ಲಿ ಈಗ ಬಿಹಾರ ಸ್ಥಿತಿ ನಿರ್ಮಾಣವಾಗುತ್ತಿದೆ’ ಎಂಬ ಶಾಸಕ ಅಭಯ ಪಾಟೀಲ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ, ‘ಈ ಹಿಂದೆ ರಸ್ತೆಯಲ್ಲಿ ಒಂದು ಗುಂಡಿ ಬಿದ್ದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ, ಅವರ ಮೇಲೆ ಜಾತಿ ನಿಂದನೆ (ಅಟ್ರಾಸಿಟಿ) ಕೇಸ್‌ ಹಾಕಿದ್ದರು. ಆಗ ಇದು ರಾಜಸ್ಥಾನ ಆಗಿತ್ತಾ?’ ಎಂದೂ ಟಾಂಗ್‌ ಕೊಟ್ಟರು.

‘ಸಿಎಂ ಡಿಸಿಎಂ ವಿವೇಚನೆಗೆ ಬಿಟ್ಟಿದ್ದು’
‘ವಿವಿಧ ನಿಗಮ–ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸುವುದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ಈ ಬಗ್ಗೆ ಅವರೇ ನಿರ್ಧರಿಸುತ್ತಾರೆ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ‘ನಿಗಮ– ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸುವವರ ಕುರಿತು ನನ್ನೊಂದಿಗೆ ಚರ್ಚಿಸಿಲ್ಲ. ಆದರೆ ಶಾಸಕರನ್ನು ಅಧ್ಯಕ್ಷರಾಗಿ ನೇಮಿಸಲಾಗುವುದು. ನೇಮಕ ಆಗುವವರ ಪಟ್ಟಿಗಾಗಿ ನಾವು ಕಾಯುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT