ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೂಸರ್‌ ಪಲ್ಟಿ: ಮೃತರ ಸಂಖ್ಯೆ 8ಕ್ಕೆ ಏರಿಕೆ

Last Updated 28 ಜೂನ್ 2022, 7:01 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಕಳ್ಯಾಳ್‌ ಸೇತುವೆ ಬಳಿ ಭಾನುವಾರ ಕ್ರೂಸರ್‌ ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಅಕ್ಕತಂಗೇರಹಾಳದ ಕಿರಣ ಅಶೋಕ ಕಳಸನ್ನವರ (33) ಮಂಗಳವಾರ ಬೆಳಿಗ್ಗೆ ಕೊನೆಯುಸಿರೆಳೆದರು. ಬೋರಲು ಬಿದ್ದಿದ್ದ ಕ್ರೂಸರ್‌ ಅಡಿಗೆ ಸಿಲುಕಿದ್ದ ಕಿರಣ ಗಂಭೀರವಾಗಿ ಗಾಯಗೊಂಡಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ, ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಗೆ ಸೇರಿಸಲಾಗಿತ್ತು.

ಸೋಮವಾರ ರಾತ್ರಿಯೇ ಕಿರಣ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದಿತ್ತು. ವೈದ್ಯರ ಪ್ರಯತ್ನಕ್ಕೆ ಅವರ ಮಿದುಳು ಸ್ಪಂದಿಸುತ್ತಿರಲಿಲ್ಲ. ಹೀಗಾಗಿ, ಮನೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದ್ದರು.

ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದೆ. ಇವರೊಂದಿಗೆ ಮೃತಪಟ್ಟ ಎಂಟು ಜನರಲ್ಲಿ ಆರು ಮಂದಿ ಅಕ್ಕತಂಗೇರಹಾಳ ಗ್ರಾಮದವರೇ ಆಗಿದ್ದಾರೆ.

ಚಿಕ್ಕಪ್ಪನ ದಾರಿಯಲ್ಲಿ ಹೊರಟ ಮಗ

ಅಕ್ಕತಂಗೇರಹಾಳ ಗ್ರಾಮದವರೇ ಆದ ಅಡಿವೆಪ್ಪ ಚಿಲಬಾಂವಿ (27), ಬಸವರಾಜ ದಳವಿ (30), ಬಸವರಾಜ ಹಣಮನ್ನವರ (51), ಆಕಾಶ ಗಸ್ತಿ (21) ಹಾಗೂ ಫಕೀರಪ್ಪ ಕಳಸನ್ನವರ (ಹರಿಜನ–55) ಹಾಗೂ ದಾಸನಟ್ಟಿ ಗ್ರಾಮದ ಮಲ್ಲಪ್ಪ ದಾಸನಟ್ಟಿ (30), ಮಲ್ಲಾಪುರ (ಎಸ್‌.ಎ) ಗ್ರಾಮದ ಬಸವರಾಜ ಸನದಿ (35) ಅವರು ಭಾನುವಾರ ಅಪಘಾತ ನಡೆದ ಸ್ಥಳದಲ್ಲೇ ಮೃತಪಟ್ಟಿದ್ದರು.

ಸದ್ಯ ಕೊನೆಯುಸಿರೆಳೆದ ಕಿರಣ, ಫಕೀರಪ್ಪ ಕಳಸನ್ನವರ ಅವರ ಅಣ್ಣನ ಮಗ. ಎರಡು ದಿನಗಳ ಹಿಂದೆ ಚಿಕ್ಕಪ್ಪ ಹೊರಟ ಮಸಣದ ದಾರಿಯನ್ನೇ ಕಿರಣ ಕೂಡ ತುಳಿದರು.

ಗಲಿಬಿಲಿಗೊಂಡ ವಿಶೇಷ ಚೇತನ ಪುತ್ರ

ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಕಿರಣ ಹಾಗೂ ಪತ್ನಿ ದುಡಿದು ಬದುಕು ಸಾಗಿದ್ದರು. ಅವರಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ. ಮೂರು ವರ್ಷದ ಪುತ್ರ ವಿಶೇಷ ಚೇತನವಾಗಿದ್ದು, ಕಿರಣ ಅವರೇ ಪ್ರತಿದಿನ ಮಗನ ಚಾಕರಿ ಮಾಡುತ್ತಿದ್ದರು. ಮೂರು ದಿನಗಳಿಂದ ತಂದೆ ಹತ್ತಿರಕ್ಕೆ ಬಾರದ ಕಾರಣ ಪುತ್ರ ಗಲಿಬಿಲಿಗೊಂಡಿದ್ದಾನೆ. ತಂದೆಗಾಗಿ ಕಾಯುತ್ತಿರುವ ಪುತ್ರನ ಸ್ಥಿತಿ ನೋಡದಾಗಿದೆ ಎಂದು ಕುಟುಂಬದವರು ತಿಳಿಸಿದರು.

ಶವಾಗಾರದ ಮುಂದೆ ಸೇರಿದ್ದ ಪತ್ನಿ, ಕುಟುಂಬದವರು ಹಾಗೂ ಸ್ನೇಹಿತರ ಗೋಳಾಟ ಹೇಳತೀರದಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT