ಮಂಗಳವಾರ, ಮಾರ್ಚ್ 28, 2023
23 °C

ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಗತಿಗೆ ಕ್ರಮ: ಬಾಲಚಂದ್ರ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ (ಬೆಳಗಾವಿ ಜಿಲ್ಲೆ): ‘ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಗತಿಗಾಗಿ ಕ್ರಮ ವಹಿಸಲಾಗಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಕಾರ್ಖಾನೆಯ ಮಾರ್ಗದರ್ಶಕ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಕಾರ್ಖಾನೆಯ ಆಡಳಿತ ಮಂಡಳಿಯ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ‘ಕಾರ್ಖಾನೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಹಕಾರಿ ತತ್ವದಡಿ ಸ್ಥಾಪಿತವಾಗಿ ಈ ಭಾಗದ ರೈತರ ಜೀವನಾಡಿಯಾಗಿದೆ. ಬೆಳೆಗಾರರ ಕೊಡುಗೆಯೂ ಅಪಾರವಾಗಿದೆ. ಕಾರ್ಮಿಕರ ಸಹಕಾರವೂ ಅಗತ್ಯವಾಗಿದೆ. ಕಬ್ಬು ವಿಭಾಗವು ಅಷ್ಟೇನೂ ಜವಾಬ್ದಾರಿ ಅರಿಯದೆ ಇರುವುದರಿಂದ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದೆ’ ಎಂದರು.

‘ರೈತರು ಇಳುವರಿ ಕಬ್ಬನ್ನು ಪೂರೈಸಬೇಕು. ಅದಕ್ಕಾಗಿಯೇ ಆಡಳಿತದಲ್ಲಿ ಬದಲಾವಣೆಗೆ ಮುಂದಾಗಿದ್ದೇವೆ. ಅಧಿಕ ಇಳುವರಿ ಕಬ್ಬನ್ನು ಪೂರೈಸಲು ಆಡಳಿತ ಮಂಡಳಿಯವರು ಹೊಸದಾಗಿ ನೇಮಕಗೊಂಡಿರುವ ಸಿಬ್ಬಂದಿಗೆ ಸಂಪೂರ್ಣ ಸಹಕಾರ ನೀಡಬೇಕು. ಹಿಂದಿನ ಕಹಿ ಘಟನೆಗಳು ಮರುಕಳಿಸಬಾರದು. ಅಭಿವೃದ್ಧಿಯೊಂದೇ ನಮ್ಮ ಗುರಿಯಾಗಬೇಕು’ ಎಂದು ಹೇಳಿದರು.

‘ಈ ಹಿಂದಿನ ಕಬ್ಬು ವಿಭಾಗದ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದರಿಂದ ಹಾನಿಯಾಗಿದೆ. ಕಡಿಮೆ ಇಳುವರಿ ಕಬ್ಬನ್ನು ರೈತರಿಂದ ಪಡೆಯುತ್ತಿದ್ದರು. ಇದಕ್ಕಾಗಿಯೇ ಸಮರ್ಥವಾಗಿ ನಿಭಾಯಿಸಲು ಹೊಸ ಸಿಇಒ ಹಾಗೂ ಸಿಡಿಒ ಸಹಿತ ನಾಲ್ವರನ್ನು ನಿಯೋಜಿಸಲಾಗಿದೆ. ಯಾವುದೇ ಸಮಸ್ಯೆಗಳಿದ್ದರೆ ತುರ್ತಾಗಿ ಪರಿಹರಿಸಲು ಸಮಿತಿಯನ್ನು ರಚಿಸಲಾಗಿದೆ. ಪರಸ್ಪರ ಸಹಕಾರದಿಂದ ಕರ್ತವ್ಯ ನಿರ್ವಹಿಸಿದರೆ ಒಳಿತಾಗಲಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಲಾಭದ ಜೊತೆಗೆ ಜಿಲ್ಲೆಯಲ್ಲಿಯೇ ಮಾದರಿ ಕಾರ್ಖಾನೆ ಮಾಡಲು ನಾವೆಲ್ಲರೂ ಶ್ರಮಿಸೋಣ’ ಎಂದು ತಿಳಿಸಿದರು.

ಅಧ್ಯಕ್ಷ ಅಶೋಕ ಪಾಟೀಲ, ಉಪಾಧ್ಯಕ್ಷ ರಾಮಣ್ಣ ಮಹಾರಡ್ಡಿ, ನಿರ್ದೇಶಕರಾದ ಕೆಂಚನಗೌಡ ಪಾಟೀಲ, ಕೃಷ್ಣಪ್ಪ ಬಂಡ್ರೊಳ್ಳಿ, ಲಕ್ಷ್ಮಣ ಗಣಪ್ಪಗೋಳ, ಶಿದ್ಲಿಂಗ ಕಂಬಳಿ, ಶಿವಲಿಂಗ ಪೂಜೇರಿ, ಗಿರೀಶ ಹಳ್ಳೂರ, ಮಹಾದೇವಪ್ಪ ಭೋವಿ, ಭೂತಪ್ಪ ಗೊಡೇರ, ಮಲ್ಲಿಕಾರ್ಜುನ ಕಬ್ಬೂರ ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು