ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸಲ್ ಬಿಮಾ: ಸದ್ಬಳಕೆಗೆ ಸಲಹೆ

ಅನುಷ್ಠಾನ ಸಭೆ ನಡೆಸಿದ ಜಿಲ್ಲಾಧಿಕಾರಿ
Last Updated 12 ನವೆಂಬರ್ 2020, 14:18 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ 2020–21ನೇ ಸಾಲಿನ ಹಿಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಇಲ್ಲಿ ಗುರುವಾರ ನಡೆದ ಹಿಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಅನುಷ್ಠಾನದ ಜಿಲ್ಲಾ ಮಟ್ಟದ ಉಸ್ತುವಾರಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರಕೃತಿ ವಿಕೋಪ ಹಾಗೂ ಕೀಟ ಅಥವಾ ರೋಗ ಬಾಧೆಗಳಿಂದ ಅಧಿಸೂಚಿತ ಬೆಳೆಗಳಿಗೆ ವಿಮಾ ರಕ್ಷಣೆ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶ. ತಾಲ್ಲೂಕಿನ ಪ್ರಮುಖ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅಧಿಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹೊಸ ಮಾರ್ಗಸೂಚಿ ಅನ್ವಯ ಪ್ರಸಕ್ತ ಸಾಲಿನಿಂದ ವಿಮೆ ಆಯ್ಕೆ ಐಚ್ಛಿಕವಾಗಿದೆ. ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಬಯಸದಿದ್ದಲ್ಲಿ ಸಂಬಂಧಿಸಿದ ಬ್ಯಾಂಕ್‌ನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ನಿಗದಿತ ನಮೂನೆಯಲ್ಲಿ ಮುಚ್ಚಳಿಕೆ ಪತ್ರವನ್ನು ನೀಡಬೇಕು. ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು’ ಎಂದು ತಿಳಿಸಿದರು.

‘ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ಮುಚ್ಚಳಿಕೆ ಪತ್ರವನ್ನು ಬ್ಯಾಂಕ್‌ ವ್ಯವಸ್ಥಾಪಕರಿಗೆ ನೀಡಬೇಕು. ರೈತರು ತಮ್ಮ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್, ಸಹಕಾರಿ ಸಂಘ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮೆ ಕಂತನ್ನು ಪಾವತಿಸಿ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಸಾಮಾನ್ಯ ಸೇವಾ ಕೇಂದ್ರಗಳ ಜಿಲ್ಲಾ ಪ್ರತಿನಿಧಿಗಳನ್ನು ಮೊ:9449976218, 9008593066 ಸಂಪರ್ಕಿಸಬಹುದಾಗಿದೆ’ ಎಂದರು.

‘ಯೋಜನೆಯಲ್ಲಿ ಪಾಲ್ಗೊಳ್ಳಲು ಹುರುಳಿ (ಮಳೆ ಆಶ್ರಿತ) ಬೆಳೆಗೆ ನ.17, ಮುಸುಕಿನ ಜೋಳ (ನೀರಾವರಿ) ಮತ್ತು ಗೋಧಿ (ನೀರಾವರಿ) ಬೆಳೆಗಳಿಗೆ ಡಿ.16 ಹಾಗೂ ಉಳಿದೆಲ್ಲಾ ಅಧಿಸೂಚಿತ ಬೆಳೆಗಳಿಗೆ ನ. 30 ಕೊನೆಯ ದಿನಾಂಕವಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT