ಮಂಗಳವಾರ, ಅಕ್ಟೋಬರ್ 22, 2019
25 °C

ರೈತರನ್ನು ಆಹ್ವಾನಿಸದ್ದಕ್ಕೆ ಅಧಿಕಾರಿಗಳಿಗೆ ತರಾಟೆ

Published:
Updated:
Prajavani

ನೇಸರಗಿ: ಇಲ್ಲಿನ ಚನ್ನವೃಷಭೇಂದ್ರ ದೇವರಕೊಂಡ ಅಜ್ಜನ ದೇವಸ್ಥಾನದಲ್ಲಿ ಭಾನುವಾರ ನಡೆದ ರೈತ ಸಂಪರ್ಕ ಕೇಂದ್ರ ನೂತನ ಕಟ್ಟಡ ಉದ್ಘಾಟನೆ, ಸಮಗ್ರ ಕೃಷಿ ಅಭಿಯಾನ ಸಮಾರೋಪ ಮತ್ತು ಕೃಷಿ ವಸ್ತುಪ್ರದರ್ಶನ ಕಾರ್ಯಕ್ರಮಕ್ಕೆ ತಮ್ಮನ್ನು ಆಮಂತ್ರಿಸಿಲ್ಲವೆಂದು ಆರೋಪಿಸಿ ರೈತರು ಕೃಷಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಾಸಕ ಮಹಾಂತೇಶ ದೊಡ್ಡಗೌಡರ ಸಮ್ಮುಖದಲ್ಲಿಯೇ ರೈತರು ಅಸಮಾಧಾನ ವ್ಯಕ್ತಪಡಿಸಿದರು. ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ವ್ಯವಸ್ಥಿತವಾಗಿ ನಡೆಸಿದ್ದರೆ ಹೆಚ್ಚಿನ ಜನರಿಗೆ ಅನುಕೂಲವಾಗುತ್ತಿತ್ತು. ಈ ಅವ್ಯವಸ್ಥೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈತರಿಗಾಗಿ ಆಯೋಜಿಸಿರುವ ಕಾರ್ಯಕ್ರಮವಿದು. ಅವರಿಗೇ ಮಾಹಿತಿ ಇಲ್ಲವೆಂದರೆ ಹೇಗೆ? ಇದು ಸರಿಯಲ್ಲ. ಮುಂದಿನ ದಿನಗಳಲ್ಲಿ ಹೀಗಾದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕರು ತಿಳಿಸಿದರು.

ಬೈಲಹೊಂಗಲ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ ಪ್ರತಿಭಾ ಹೂಗಾರ, ಕೃಷಿ ಅಧಿಕಾರಿ ಆರ್.ಐ. ಕುಂಬಾರ, ‘ನಮ್ಮಿಂದ ತಪ್ಪಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ. ಹಿರಿಯ ಅಧಿಕಾರಿಗಳ ಸಲಹೆ ಪಡೆದು ಉತ್ತಮ ಕಾರ್ಯಕ್ರಮ ನಡೆಸಲಾಗುವುದು’ ಎಂದು ತಿಳಿಸಿದರು.

ನಂತರ ಕಾರ್ಯಕ್ರಮ ಉದ್ಘಾಟಿಸಿದ ಶಾಸಕರು, ‘ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ವಸ್ತುಪ್ರದರ್ಶನ ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅವರು ಬರುವಂತೆ ಪ್ರೇರೇಪಿಸಿ ಉತ್ತಮ ಕಾರ್ಯಕ್ರಮ ರೂಪಿಸಬೇಕು’ ಎಂದು ಸೂಚಿಸಿದರು.

‘ನೇಸರಗಿಯ ಎಪಿಎಂಸಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ, ಸರ್ಕಾರಿ ಐಟಿಐ ಸ್ಥಾಪಿಸಲು ಕ್ರಮ ವಹಿಸಲಾಗುವುದು’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗಪ್ಪ ಅರಕೇರಿ, ಮುಖಂಡ ಎಸ್.ಎಫ್. ದೊಡಗೌಡರ ಮಾತನಾಡಿದರು. ಮಲ್ಲಾಪುರ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ರೋಹಿಣ ಪಾಟೀಲ, ಲಾವಣ್ಯಾ ಶಿಲ್ಲೇದಾರ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಲಕ್ಷ್ಮಿ ತಳವಾರ, ಎಪಿಎಂಸಿ ಅಧ್ಯಕ್ಷೆ ನೀಲವ್ವ ಫಕೀರನ್ನವರ, ಉಪಾಧ್ಯಕ್ಷ ಮಲ್ಲನಾಯ್ಕ ಬಾಂವಿ, ದೇಶನೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ದೀಪಕಗೌಡ ಪಾಟೀಲ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಲಕ್ಷ್ಮಿ ತಳವಾರ, ಮುಖಂಡರಾದ ಪ್ರವೀಣ ಯಡಳ್ಳಿ, ಅಶ್ವಿನಿ ಕುಂಕೂರ, ಹೊಳೆವ್ವ ನಡುವಿನಮನಿ, ಕೆಂಚಪ್ಪ ಕಳ್ಳಿಬಡ್ಡಿ, ಬಾಳಪ್ಪ ಮಾಳಗಿ, ರಮೇಶ ರಾಯಪ್ಪಗೋಳ, ದೇಮಣ್ಣ ಗುಜನಟ್ಟಿ, ಮಲ್ಲೇಶ ಮಾಳನ್ನವರ, ಫಕೀರಪ್ಪ ಸೋಮನ್ನವರ ಇದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)