ಗುರುವಾರ , ಜನವರಿ 23, 2020
20 °C

ಕೆಎಲ್‌ಎಸ್ ಐಎಂಇಆರ್‌ಗೆ ಸ್ವಾಯುತ್ತ ಸಂಸ್ಥೆ ಮಾನ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಇಲ್ಲಿನ ಹಿಂದವಾಡಿಯಲ್ಲಿರುವ ಕರ್ನಾಟಕ ಕಾನೂನು ಸಂಸ್ಥೆಯ (ಕೆಎಲ್‌ಎಸ್‌) ವ್ಯವಸ್ಥಾಪನಾ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗೆ (ಐಎಂಇಆರ್) ಯುಜಿಸಿಯುಂದ ಸ್ವಾಯತ್ತ ಸಂಸ್ಥೆ ಮಾನ್ಯತೆ ದೊರೆತಿದೆ’ ಎಂದು ಐಎಂಇಆರ್‌ ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಸ್. ಮುತಾಲಿಕ್‌ ದೇಸಾಯಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐಎಂಇಆರ್ ಅನ್ನು ಕೆಎಲ್‌ಎಸ್‌ ಪೋಷಕ ದಿ.ರಾವಸಾಹೇಬ ಗೋಗಟೆ ಅವರ ಜನ್ಮ ದಿನವಾದ (1991, ಸೆ. 16ರಂದು) ಸ್ಥಾಪಿಸಲಾಯಿತು. ಮ್ಯಾನೇಜ್‌ಮೆಂಟ್ ಶಿಕ್ಷಣ, ಸಂಶೋಧನೆ ಹಾಗೂ ಔದ್ಯಮಿಕ ಸಲಹೆ ನೀಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಸಂಸ್ಥೆ ಈ ಭಾಗದ ವಿದ್ಯಾರ್ಥಿಗಳು, ಉದ್ಯಮಿಗಳ ಮೆಚ್ಚುಗೆ ಗಳಿಸಿದೆ’ ಎಂದರು.

‘ಸಂಸ್ಥೆಯು 2 ವರ್ಷಗಳ ಪೂರ್ಣಾವಧಿಯ ಎಂಬಿಎ ಪದವಿ ಶಿಕ್ಷಣ ನೀಡುತ್ತಿದೆ. ಎಐಸಿಟಿಇಯಿಂದ ಗುರುತಿಸಲ್ಪಟ್ಟು, ವಾರ್ಷಿಕ 120 ವಿದ್ಯಾರ್ಥಿಗಳ ಪ್ರವೇಶ ಅನುಮತಿಯೊಂದಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿದೆ. ನ್ಯಾಕ್‌ನಿಂದ 2016ರಲ್ಲಿ ‘ಎ’ ಗ್ರೇಡ್ (ಸಿಜಿಪಿಎ 3.24) ಮತ್ತು 2017ರಲ್ಲಿ ಯುಜಿಸಿಯಿಂದ 2(ಎಫ್) ಮತ್ತು 12(ಬಿ) ಮಾನ್ಯತೆ ಪಡೆದಿದೆ’ ಎಂದು ಮಾಹಿತಿ ನೀಡಿದರು.

‘‌ಸ್ವಾಯುತ್ತ ಸಂಸ್ಥೆ ಮಾನ್ಯತೆಗಾಗಿ 2019ರರ ಏಪ್ರಿಲ್‌ನಲ್ಲಿ ಯುಜಿಸಿಗೆ ಅರ್ಜಿ ಸಲ್ಲಿಸಲಾಗಿತ್ತು. ಯುಜಿಸಿಯು ವಿವಿಧ ಕ್ಷೇತ್ರಗಳ ಐವರು ಸಾಧಕರ ಸಮಿತಿ ರಚಿಸಿತ್ತು. ಅವರು ನ.21 ಹಾಗೂ 22ರಂದು ಭೇಟಿ ನೀಡಿ ಕಾಲೇಜಿನ ಎಲ್ಲ ಸೌಲಭ್ಯಗಳು, ಬೆಂಬಲಿತ ಸೇವಾ ಸೌಲಭ್ಯಗಳನ್ನು ವೀಕ್ಷಿಸಿದ್ದರು. ವಿವಿಧ ದಾಖಲೆಗಳನ್ನು ಪರಿಶೀಲಿಸಿ, ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಮಾಹಿತಿ ಸಂಗ್ರಹಿಸಿದ್ದರು. ಬಳಿಕ 10 ವರ್ಷಗಳ ಕಾಲಾವಧಿಗೆ ಅಂದರೆ 2010–21ರಿಂದ 2029–30ರವೆರೆಗೆ ಸ್ವಾಯತ್ತ ಸಂಸ್ಥೆ ಮಾನ್ಯತೆ ನೀಡಲು ಸಮಿತಿ ನಿರ್ಧರಿಸಿದೆ’ ಎಂದು ತಿಳಿಸಿದರು.

ನಿರ್ದೇಶಕ ‌ಡಾ.ಅತುಲ್ ಆರ್. ದೇಶಪಾಂಡೆ ಇದ್ದರು.

ಪ್ರತಿಕ್ರಿಯಿಸಿ (+)