ಭಾನುವಾರ, ಸೆಪ್ಟೆಂಬರ್ 15, 2019
30 °C

120 ವಕೀಲರಿಗೆ ಆರ್ಥಿಕ ನೆರವು

Published:
Updated:
Prajavani

ಬೆಳಗಾವಿ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಪ್ರವಾಹದಿಂದ ಹಾನಿ ಅನುಭವಿಸಿದ 120 ಮಂದಿ ವಕೀಲರಿಗೆ ಬೆಂಗಳೂರು ಮತ್ತು ಬೆಳಗಾವಿ ವಕೀಲರ ಸಂಘಗಳ ವತಿಯಿಂದ ನೀಡಲಾದ ₹ 18 ಲಕ್ಷ ಆರ್ಥಿಕ ನೆರವಿನ ಚೆಕ್‌ಗಳನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಶುಕ್ರವಾರ ವಿತರಿಸಿದರು.

ನಂತರ ಮಾತನಾಡಿದ ಅವರು, ‘ಹಿಂದೆಂದೂ ಕಂಡರಿಯದಂತಹ ಧಾರಾಕಾರ ಮಳೆಯಿಂದಾಗಿ ಅಪಾರ ನಷ್ಟವಾಗಿದೆ. ಪ್ರವಾಹದಿಂದಾಗಿ ಶ್ರೀಮಂತರು ಕೂಡ ಉಟ್ಟ ಬಟ್ಟೆಯಲ್ಲಿಯೇ ಮನೆಗಳನ್ನು ಬಿಟ್ಟು ಬಂದಿದ್ದಾರೆ. ಮನೆಗಳನ್ನು ಕಳೆದುಕೊಂಡವರೂ ಇದ್ದಾರೆ. ಸಂತ್ರಸ್ತರಿಗೆ ಸರ್ಕಾರದಿಂದ ಎಲ್ಲ ರೀತಿಯಿಂದಲೂ ನೆರವು ಒದಗಿಸಲಾಗುತ್ತಿದೆ. ವಕೀಲರ ಸಂಘದವರು ತಮ್ಮ ಸಹೋದ್ಯೋಗಿಗಳಿಗೆ ಸಹಾಯಹಸ್ತ ಚಾಚಿರುವುದು  ಅಭಿನಂದನಾರ್ಹ. ಸರ್ಕಾರದಿಂದಲೂ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್, ‘ನೆರೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಬಹಳ ಹಾನಿಯಾಗಿದೆ. ಹೀಗಾಗಿ, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಸಂದೇಶ ಸಾರುವುದಕ್ಕಾಗಿ ನೆರವು ನೀಡುತ್ತಿದ್ದೇವೆ’ ಎಂದು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಆರ್.ಜೆ. ಸತೀಶ್ ಸಿಂಗ್, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಕರ್ನಾಟಕ ಆಡಳಿತ ನ್ಯಾಯಮಂಡಳಿ ಸದಸ್ಯ ನಾರಾಯಣಸ್ವಾಮಿ, ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯ ಕಲ್ಮೇಶ ಕಿವಡ, ಬೆಳಗಾವಿ  ವಕೀಲರ ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ, ಹಿರಿಯ ವಕೀಲರಾದ ಎ.ಬಿ. ಪಾಟೀಲ, ಎ.ಕೆ. ಕೊಟ್ರಶೆಟ್ಟಿ ಇದ್ದರು.

Post Comments (+)