ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿಗಾಗಿ ಬೀದಿಯಲ್ಲೇ ಇಷ್ಟಲಿಂಗ ಪೂಜೆ, ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕಾರಿಣಿ ಸಭೆ
Published 18 ಆಗಸ್ಟ್ 2023, 15:51 IST
Last Updated 18 ಆಗಸ್ಟ್ 2023, 15:51 IST
ಅಕ್ಷರ ಗಾತ್ರ

ಬೆಳಗಾವಿ: ‘‍ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂಬ ಬೇಡಿಕೆಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ. ಇದು ಈಡೇರದೇ ಇದ್ದರೆ ಬೀದಿಯಲ್ಲಿ ಕುಳಿತು ಇಷ್ಟಲಿಂಗ ಪೂಜೆ ಮಾಡುವ ಮೂಲಕ ಪ್ರತಿಭಟನೆ ಆರಂಭಿಸಲಾಗುವುದು’ ಎಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಶುಕ್ರವಾರ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಮಟ್ಟದ ಕಾರ್ಯಕಾರಣಿ ಸಭೆಯ ಬಳಿಕ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು.

‘ಈ ಹಿಂದಿನ ಬಿಜೆಪಿ ಸರ್ಕಾರ ನಮ್ಮನ್ನು 2ಡಿ ವರ್ಗಕ್ಕೆ ಸೇರಿಸಿತ್ತು. ಅದನ್ನು ತಿರಸ್ಕರಿಸಿದ್ದೇವೆ. 2ಎ ವರ್ಗಕ್ಕೆ ಸೇರಿಸಬೇಕು ಎಂದು ಹೊಸ ಸರ್ಕಾರದ ಮುಂದೆಯೂ ಬೇಡಿಕೆ ಇಟ್ಟಿದ್ದೇವು. ಅಧಿವೇಶನ ಮುಗಿಯುವವರೆಗೆ ಕಾಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಇದಾಗಿ ತಿಂಗಳು ಕಳೆದಿದೆ. ಸರ್ಕರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಮತ್ತೆ ಹೋರಾಟ ಆರಂಭಿಸುವಂತೆ ಸಮಾಜದ ಮುಖಂಡರು ಕೋರಿದ್ದಾರೆ’ ಎಂದು ಶ್ರೀಗಳು ಹೇಳಿದರು.

‘ಚುನಾವಣೆ ಸಂದರ್ಭದಲ್ಲಿ ನಮ್ಮ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಿದ್ದೇವು. ಆದರೆ, ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ. ಈ ಬಾರಿ ನಿಪ್ಪಾಣಿ ನಗರದಿಂದ ಆಗಸ್ಟ್‌ ಕೊನೆಯ ವಾರದಿಂದಲೇ ಹೋರಾಟ ಆರಂಭಿಸುವ ಉದ್ದೇಶವಿದೆ. ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯಮಟ್ಟ ಹೀಗೆ ವಿವಿಧ ಸ್ತರಗಳಲ್ಲಿ ಹೋರಾಟ ಮಾಡಲಾಗುವುದು. ಬೀದಿಯಲ್ಲಿ ಕುಳಿತೇ ಲಿಂಗಪೂಜೆ ಮಾಡುವ ಮೂಲಕ ವಿಶಿಷ್ಟ ರೂಪ ನೀಡಲಾಗುವುದು’ ಎಂದರು.

‘ಕಾಂಗ್ರೆಸ್‌ ಸರ್ಕಾರದ ಮೇಲೆ ಪಂಚಮಸಾಲಿ ಸಮಾಜದ ಋಣವಿದೆ. ನಾವು ಮತ ಹಾಕಿದ್ದೇವೆ. ಸಮಾಜದವರೂ ಸಿದ್ದರಾಮಯ್ಯ ಅವರನ್ನು ನಂಬಿ ಮತ ಹಾಕಿದ್ದಾರೆ. ಸಿದ್ದರಾಮಯ್ಯ ಅವರು ಈ ಋಣ ತೀರಿಸಬೇಕು’ ಎಂದು ಆಗ್ರಹಿಸಿದರು.

‘ನಮ್ಮ ಸಮಾಜದ ಶಾಸಕರು ವಿಧಾನಸಭೆಯ ಒಳಗಿನಿಂದಲೇ ಹೋರಾಟ ಮಾಡಲಿದ್ದಾರೆ’ ಎಂದೂ ಶ್ರೀಗಳು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಸದ್ಯದಲ್ಲೇ ಲೋಕಸಭೆ ಚುನಾವಣೆ ಬರಲಿದೆ. ಅದಕ್ಕೂ ಮುನ್ನ ಹೋರಾಟ ತೀವ್ರ ಮಾಡುತ್ತೇವೆ. ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳ ನಾಯಕರ ಮೇಲೆ ಒತ್ತಡ ಹೇರಲು ಇದು ಸರಿಯಾದ ಸಂದರ್ಭ’ ಎಂದರು.

‘ಯಾವುದೇ ಹೋರಾಟಕ್ಕೂ ಶೀಘ್ರವಾದ ಫಲ ಸಿಗುವುದಿಲ್ಲ. ನಾವು ಕಾಯಲೇಬೇಕಾಗುತ್ತದೆ. ಅದರಲ್ಲೂ ಮೀಸಲಾತಿ ವಿಚಾರ ಅತ್ಯಂತ ಸೂಕ್ಷ್ಮವಾದದ್ದು. ಹೀಗಾಗಿ ವಿಳಂಬವಾಗಿದೆ. ಸಮಾಜದ ಜನ ಒಂದಾಗಿದ್ದೇವೆ. ಹೋರಾಟ ಆರಂಭಿಸಿದ ತಕ್ಷಣ ಎಲ್ಲರೂ ಬಂದು ಸೇರುತ್ತಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಜಿ ಶಾಸಕರಾದ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ಡಾ.ವಿಶ್ವನಾಥ ಪಾಟೀಲ ಹಾಗೂ ಮುಖಂಡರು ಇದ್ದರು.

‘ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿ ಪಕ್ಷದ್ದು’

‘ಬಿಜೆಪಿಯವರು ಬೇಡಿಕೆ ಈಡೇರಿಸಲಿಲ್ಲ ಎಂಬ ಕಾರಣಕ್ಕೆ ಪಂಚಮಸಾಲಿ ಸಮಾಜ ಕಾಂಗ್ರೆಸ್‌ ಪಕ್ಷ ಗೆಲ್ಲಿಸಿದೆ. ಈ ವಿಶ್ವಾಸ ಉಳಿಸಿಕೊಳ್ಳುವುದು ಪಕ್ಷದ ಜವಾಬ್ದಾರಿ’ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ‘ಈ ಹಿಂದೆಯೇ ನಾನು ಲಕ್ಷ್ಮೀ ಹೆಬ್ಬಾಳಕರ ವಿಜಯಾನಂದ ಕಾಶಪ್ಪನವರ ಸೇರಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಅವರು ಕಾಲಾವಕಾಶ ಕೇಳಿದ್ದರು’ ಎಂದರು. ‘ಸಮಾಜದ ವಿಷಯ ಬಂದಾಗ ನಾವು ಒಂದಾಗಿ ಹೋರಾಡುತ್ತೇವೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಮಾಜದ ಪರವಾಗಿ ನಾನು ನಿಲ್ಲುತ್ತೇನೆ’ ಎಂದರು. ಸ್ವಾಮೀಜಿ ಕಾಂಗ್ರೆಸ್‌ ಜತೆಗೆ ಹೊಂದಾಣಿಕೆ ಮಾಡಿಕೊಂಡರೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಶ್ರೀಗಳು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವವರಲ್ಲ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಈ ರೀತಿ ಹೇಳಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT