ಒಳ್ಳೆಯದನ್ನು ಪ್ರೋತ್ಸಾಹಿಸುವುದು ಅಭಿನಂದನಾರ್ಹ: ಸಿದ್ಧರಾಮ ಶ್ರೀ

7
ಕಾದಂಬರಿ, ಕಥೆ, ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ

ಒಳ್ಳೆಯದನ್ನು ಪ್ರೋತ್ಸಾಹಿಸುವುದು ಅಭಿನಂದನಾರ್ಹ: ಸಿದ್ಧರಾಮ ಶ್ರೀ

Published:
Updated:
Deccan Herald

ಗೋಕಾಕ: ‘ಒಳ್ಳೆಯದನ್ನು ಪ್ರೀತಿಸಿ, ಪ್ರೋತ್ಸಾಹಿಸಿ, ಗೌರವಿಸುವುದು ಬಸವರಾಜ ಕಟ್ಟೀಮನಿ ಅವರ ತತ್ವ ಹಾಗೂ ಕಾರ್ಯಶೈಲಿಯಾಗಿತ್ತು. ಅವರ ಹೆಸರಿನ ಪ್ರತಿಷ್ಠಾನವೂ ಆ ನಿಟ್ಟಿನಲ್ಲಿಯೇ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನಾರ್ಹ’ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಹಾಗೂ ಇಲ್ಲಿನ ಭಾವಸಂಗಮ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವರಾಜ ಕಟ್ಟೀಮನಿ ಕಾದಂಬರಿ, ಕಥೆ ಮತ್ತು ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಯುವ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರವನ್ನು ಸದಾ ಪ್ರೋತ್ಸಾಹಿಸುತ್ತಲೇ ಬಂದಿದ್ದ ಕಟ್ಟೀಮನಿ ಅವರು ಕುಂದರನಾಡಿನ ಅಮೂಲ್ಯ ರತ್ನ. ಅವರು ಉತ್ತರ ಕರ್ನಾಟಕ ಕಂಡ ಬಹುದೊಡ್ಡ ಪ್ರಗತಿಶೀಲ ಸಾಹಿತಿ, ಕಾದಂಬರಿಕಾರ, ಪತ್ರಿಕೋದ್ಯಮಿಯಾಗಿದ್ದರು’ ಎಂದು ಸ್ಮರಿಸಿದರು.‌

ಕೃಪೆಯಿಂದಾಗಿ:

ಪ್ರತಿಷ್ಠಾನದಿಂದ ನೀಡಿದ ‘ಕಾದಂಬರಿ’ ಪ್ರಶಸ್ತಿ ಸ್ವೀಕರಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಮಾತನಾಡಿ, ‘ನಾಡಿನ ಹೆಸರಾಂತ ಸಾಹಿತಿ ಕೃಷ್ಣಮೂರ್ತಿ ಪುರಾಣಿಕರು ಹಾಗೂ ಬಸವರಾಜ ಕಟ್ಟೀಮನಿ ಅವರ ಕೃಪೆಯೇ ನನ್ನ ಸಾಧನೆಗಳಿಗೆ ಕಾರಣ’ ಎಂದರು.

‘ವಿದ್ಯಾರ್ಥಿ ಜೀವನಕ್ಕೆ ನೆರವಾದ ನಾಗನೂರ ಸ್ವಾಮೀಜಿಯವರ ಬೋರ್ಡಿಂಗ್‌ ಇಲ್ಲದಿದ್ದರೆ ನಾನು ಈ ಹಂತ ತಲುಪಲು ಆಗುತ್ತಲೇ ಇರಲಿಲ್ಲ. ಇಂಥ ಮಠಗಳ ಆಶೀರ್ವಾದದಿಂದ ಅನೇಕ ಸಾಹಿತಿಗಳು ಸೃಷ್ಟಿಯಾಗಿದ್ದಾರೆ. ಈ ವ್ಯವಸ್ಥೆ ಮುಂದುವರಿಯಲಿ’ ಎಂದು ಆಶಿಸಿದರು.

ಕಥಾ ಪ್ರಶಸ್ತಿ ಸ್ವೀಕರಿಸಿದ ಚಂದ್ರಕಾಂತ ಕುಸನೂರು ಮತ್ತು ಪತ್ರಿಕೋದ್ಯಮಿ ಪ್ರಶಸ್ತಿ ಪಡೆದ ಜಗದೀಶ ಕೊಪ್ಪ ಅನಿಸಿಕೆ ವ್ಯಕ್ತಪಡಿಸಿದರು.

ದೀಪ್ತಿ ಭದ್ರಾವತಿ (ಕಥಾಸಂಕಲನ, 2015ನೇ ಸಾಲು), ಟಿ.ಎಸ್. ಗೊರವರ (ಕಾದಂಬರಿ 2016ನೇ ಸಾಲು), ದಯಾನಂದ (ಕಥಾಸಂಕಲನ, 2017ನೇ ಸಾಲು), ಶ್ರೀಧರ ಬನವಾಸಿ (ಕಾದಂಬರಿ 2017ನೇ ಸಾಲು) ಅವರಿಗೆ ಯುವಪುರಸ್ಕಾರ ಪ್ರದಾನ ಮಾಡಲಾಯಿತು. 2016ನೇ ಸಾಲಿನ ಕಥಾ ಪ್ರಶಸ್ತಿಗೆ ಭಾಜವಾದ ಶಾಂತಿ ಅಪ್ಪಣ್ಣ ಗೈರುಹಾಜರಾಗಿದ್ದರು. ಕೃತಿಗಳ ಕುರಿತು ಪ್ರೊ.ದುಷ್ಯಂತ ನಾಡಗೌಡ ಮಾತನಾಡಿದರು.

ಕೊರತೆ ಇಲ್ಲ:

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ‘ಯುವ ಪ್ರತಿಭೆಗಳ ಕೊರತೆ ಇದೆ ಎಂಬ ಭಾವನೆ ಬೇಡವೇ ಬೇಡ’ ಎಂದರು.

ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ, ಪ್ರತಿಷ್ಠಾನದ ಸದಸ್ಯ ಶಿವಕುಮಾರ ಕಟ್ಟೀಮನಿ, ಭಾವಸಂಗಮ ಅಧ್ಯಕ್ಷ ಮಹಾಂತೇಶ ತಾಂವಶಿ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು. ಸದಸ್ಯ ಪ್ರೊ.ಚಂದ್ರಶೇಖರ ಅಕ್ಕಿ ಪ್ರಾಸ್ತಾವಿಕ ಮಾತನಾಡಿದರು. ಶಿರೀಷ ಜೋಶಿ ಮತ್ತು ಶೈಲಾ ಕೊಕ್ಕರಿ ನಿರೂಪಿಸಿದರು. ಪ್ರೊ.ಗಂಗಾಧರ ಮಳಗಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !