ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಪಾಲಿಕೆ ಚುನಾವಣೆ: ಶಾಂತಿಯುತ ಮತದಾನ

ಹಕ್ಕು ಚಲಾಯಿಸಿದ ಮತದಾರರು; ದೂರ ಉಳಿದ ಹಲವರು!
Last Updated 3 ಸೆಪ್ಟೆಂಬರ್ 2021, 13:54 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಚುನಾವಣೆ ಮತದಾನ ಬಹುತೇಕ ಶಾಂತಿಯುತವಾಗಿ ಶುಕ್ರವಾರ ನಡೆಯಿತು.

58 ವಾರ್ಡ್‌ಗಳಲ್ಲಿ 385 ಅಭ್ಯರ್ಥಿಗಳು‌ ಕಣದಲ್ಲಿದ್ದರು. ವಿವಿಧೆಡೆ ಸ್ಥಾಪಿಸಿದ್ದ ಒಟ್ಟು 415 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಮಾಳಿ ಗಲ್ಲಿಯ ಮತಗಟ್ಟೆಯಲ್ಲಿ ನಕಲಿ ಮತದಾನದ ಆರೋಪ ಕೇಳಬಂದಿದ್ದರಿಂದ ಉಂಟಾಗಿದ್ದ ಗೊಂದಲ ಮತ್ತು ಅಲ್ಲಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ಅರೋಪ ಕೇಳಿಬಂದಿದ್ದು ಬಿಟ್ಟರೆ ಮತದಾನವು ಬಹುತೇಕ ಸುಗಮವಾಗಿ ನಡೆಯಿತು.

ಎಲ್ಲ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದು, ಅದು ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳಲ್ಲಿ ಭದ್ರವಾಗಿದೆ. ಅವುಗಳನ್ನು ಬಿ.ಕೆ. ಮಾಡೆಲ್‌ ಶಾಲೆಯಲ್ಲಿ ರೂಪಿಸಿರುವ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಲಾಗಿದೆ.

ಇಲ್ಲಿ ಇದೇ ಮೊದಲಿಗೆ ರಾಜಕೀಯ ಪಕ್ಷಗಳು (ಬಿಜೆಪಿ, ಕಾಂಗ್ರೆಸ್, ಆಮ್‌ ಆದ್ಮಿ ಪಕ್ಷ, ಜೆಡಿಎಸ್, ಎಸ್‌ಡಿಪಿಐ, ಉತ್ತಮ ಪ್ರಜಾಕೀಯ ಪಕ್ಷ, ಎಐಎಂಎಐಎಂ) ತಮ್ಮ ಚಿಹ್ನೆ ಮೇಲೆ ಸ್ಪರ್ಧಿಸಿದ್ದವು. ಇದರಿಂದಾಗಿ ‌ಚುನಾವಣೆ ಗಮನಸೆಳೆದಿದೆ. ಬಿಜೆಪಿಯ 55 ಹಾಗೂ ಕಾಂಗ್ರೆಸ್‌ನ 45 ಅಭ್ಯರ್ಥಿಗಳು ಕಣದಲ್ಲಿದ್ದರು. ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ನಡೆದಿಲ್ಲ. ಇಡೀ ದಿನ ನೀರಸ ಮತದಾನ ಕಂಡುಬಂತು. ಸಂಜೆ ಕೊಂಚ ಬಿರುಸು ಪಡೆಯಿತು.

ಕೊನೆ ಕ್ಷಣದ ಕಸರತ್ತು:

ಬೆಳಿಗ್ಗೆ 7ರ ಸುಮಾರಿಗೆ ಉತ್ತರ ಮತ ಕ್ಷೇತ್ರದಲ್ಲಿ ಸೇರಿದಂತೆ ಅಲ್ಲಲ್ಲಿ ತುಂತುರು ಮಳೆ ಬೀಳುತ್ತಿದ್ದುದ್ದರಿಂದ ಮತದಾನಕ್ಕೆ ಅಡ್ಡಿಯಾಯಿತು. ಮತಗಟ್ಟೆಗಳ ಬಳಿ ಬೆರಳೆಣಿಕೆಯ ಮತದಾರರಷ್ಟೆ ಕಂಡುಬಂದರು. 7.30ರ ಸುಮಾರಿಗೆ ಬಿಸಿಲು ಬಂದಿತು. ಕ್ರಮೇಣ ಮತದಾನವೂ ಬಿರುಸು ಪಡೆಯಿತು. ಮತದಾರರು ಮತಗಟ್ಟೆಗಳತ್ತ ಬರತೊಡಗಿದರು. ಮತಗಟ್ಟೆಗಳಿಗೆ ಹೋಗುವ ದಾರಿಯಲ್ಲಿ ಅವರಿಗೆ ಎದುರಾಗುತ್ತಿದ್ದ ಅಭ್ಯರ್ಥಿಗಳು, ಬೆಂಬಲಿಗರು ತಮಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಕುಟುಂಬದವರು ಅಥವಾ ಕಾರ್ಯಕರ್ತರು ಮತದಾರರ ಮನವೊಲಿಕೆಗೆ ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದರು.

ಮತದಾನ ಕೇಂದ್ರಗಳ ನೂರು ಮೀಟರ್ ಅಂತರದ ಹೊರಗೆ ಟೆಂಟ್‌ಗಳನ್ನು ಹಾಕಿಕೊಂಡಿದ್ದ ಅಥವಾ ಟೇಬಲ್‌ಗಳನ್ನು ಇಟ್ಟುಕೊಂಡು ಕುಳಿತಿದ್ದ ಅಭ್ಯರ್ಥಿಗಳ ಕಡೆಯವರು ಹಾಗೂ ಕಾರ್ಯಕರ್ತರು ಮತದಾರರಿಗೆ ಮತಗಟ್ಟೆ ಸಂಖ್ಯೆಯ ಚೀಟಿ ಮೊದಲಾದ ಮಾಹಿತಿ ಬರೆದುಕೊಡುತ್ತಿದ್ದಾರೆ. ತಮ್ಮ ಅಭ್ಯರ್ಥಿಗೇ ಮತ ಹಾಕುವಂತೆ ಕೋರುತ್ತಿದ್ದರು.

ಮತಗಟ್ಟೆ ಬಳಿಯೇ ಮತಯಾಚನೆ:

ವಾರ್ಡ್ ನಂ.34ರ ಶಾಹೂನಗರ ಸರ್ಕಾರಿ ಶಾಲೆ ಆವರಣದ ಬಳಿಯೇ ಮತ ಯಾಚಿಸುತ್ತಿದ್ದ ಬಿಜೆಪಿ ಅಭ್ಯರ್ಥಿ ಶ್ರೇಯಸ್ ನಾಕಾಡಿ ಹಾಗೂ ಪಕ್ಷೇತರ ಅಭ್ಯರ್ಥಿ ವಂದನಾ ಬೆಳಗಾಂವಕರ ಅವರನ್ನು ಪೊಲೀಸರು ಅಲ್ಲಿಂದ ಹೊರಗಡೆಗೆ ಕಳುಹಿಸಿದರು.

ಅಲ್ಲಲ್ಲಿ ವೃದ್ಧೆ–ವೃದ್ಧೆಯರು ಮತ ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದರು. ಕೆಲವರು ತಾವಾಗಿಯೇ ಬಂದಿದ್ದರೆ, ಕೆಲವರು ಕುಟುಂಬದವರ ಸಹಾಯದೊಂದಿಗೆ ಮತಗಟ್ಟೆಗಳಿಗೆ ಬಂದಿದ್ದರು.

ವಾರ್ಡ್‌ ನಂ.19ರ ಶಿವಬಸವನಗರದ ಜಿ.ಜಿ. ಯಳ್ಳೂರ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಶತಾಯಿಷಿ ಜಾನಾಬಾಯಿ ಚೌಗುಲೆ ಮತ ಚಲಾಯಿಸಿದ್ದು ಗಮನಸೆಳೆಯಿತು. ‘ಮತ ಹಾಕುವುದನ್ನು ತಪ್ಪಿಸಬಾರದೆಂದು ಬಂದಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ಸೆ.6ರಂದು ಮತ ಎಣಿಕೆ ನಡೆಯಲಿದ್ದು ಫಲಿತಾಂಶ ಪ್ರಕಟಗೊಳ್ಳಲಿದೆ. ಮತದಾರರು ಯಾರಿಗೆ ಮಣೆ ಹಾಕಿದ್ದಾರೆ ಎನ್ನುವುದು ಅಂದು ಗೊತ್ತಾಗಲಿದೆ. ರಾಜಕೀಯ ಪಕ್ಷಗಳಿಗೆ ದೊರೆತಿರುವ ಬೆಂಬಲದ ಪ್ರಮಾಣವೂ ತಿಳಿದುಬರಲಿದೆ. ರಾಜಕೀಯ ಪಕ್ಷಗಳ ಅಧಿಕೃತ ಸ್ಪರ್ಧೆಯಿಂದಾಗಿ ಈ ಬಾರಿಯ ಚುನಾವಣೆಯ ಫಲಿತಾಂಶ ಕುತೂಹಲ ಮೂಡಿಸಿದೆ. ಯಾವ ಪಕ್ಷಗಳಿಗೆ ಎಷ್ಟು ಸ್ಥಾನಗಳು ದೊರೆಯಬಹುದು ಎನ್ನುವ ಚರ್ಚೆಯೂ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ.

ಮತದಾರರಿಗೆ ಪಿಕಪ್, ಡ್ರಾಪ್ ಸೇವೆ!

ಹಲವು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಮತದಾರರನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ಪಿಕಪ್ ಮತ್ತು ಡ್ರಾಪ್ ಸೇವೆಯನ್ನು ನೀಡಿದರು.

ಅಭ್ಯರ್ಥಿಗಳ ಕಡೆಯವರು, ಮತದಾರರ ಮನೆಗಳ ಬಳಿಗೆ ಆಟೊರಿಕ್ಷಾ ತಂದು ನಿಲ್ಲಿಸಿ, ‘ಮತದಾನ ಮಾಡಿದ್ದೀರಾ’ ಎಂದು ಕೇಳುತ್ತಿದ್ದರು. ‘ಇಲ್ಲ’ ಎಂದರೆ, ‘ಮತಗಟ್ಟೆಗೆ ಕರೆದೊಯ್ಯುತ್ತೇವೆ; ಮತ್ತೆ ಕರೆತಂದು ಬಿಡುತ್ತೇವೆ ಬನ್ನಿ’ ಎಂದು ಆಹ್ವಾನಿಸುತ್ತಿದ್ದರು. ಆಸಕ್ತರು ಅದನ್ನು ಬಳಸಿಕೊಂಡರು. ಶಾಹೂನಗರದ ವಿವಿಧ ಗಲ್ಲಿಗಳ ಜನರಿಗೆ ಇಂತಹ ಆಹ್ವಾನಗಳು ಹಲವು ಅಭ್ಯರ್ಥಿಗಳ ಕಡೆಯಿಂದ ಬಂದವು!

ವೃದ್ಧೆಯರಿಗೆ ತೊಂದರೆ

ಆ ಮತಗಟ್ಟೆಯಲ್ಲಿ ಅಂಗವಿಕಲರು, ವೃದ್ಧರ ಅನುಕೂಲಕ್ಕಾಗಿ ರ‍್ಯಾಂಪ್ ವ್ಯವಸ್ಥೆ ಇರಲಿಲ್ಲ. ಮೆಟ್ಟಿಲು ಹತ್ತಲು ಮತ್ತು ಇಳಿಯುವುದಕ್ಕೆ ಅವರು ತೊಂದರೆ ಅನುಭವಿಸಿದರು. ಕರ್ತವ್ಯಕ್ಕೆ ನಿಯೋಜನೆಗೊಂಡು ಕುರ್ಚಿಯಲ್ಲಿ ಕುಳಿತಿದ್ದ ಮಹಿಳಾ ಕಾನ್‌ಸ್ಟೆಬಲ್‌ ಆ ವೃದ್ಧೆಯರ ಸಹಾಯಕ್ಕೆ ಬರಲಿಲ್ಲ.

‘ಮೆಟ್ಟಿಲು ಹತ್ತುವುದು ಮತ್ತು ಇಳಿಯುವುದಕ್ಕೆ ತೊಂದರೆ ಆಗುತ್ತದೆ. ವಯಸ್ಸಾಗಿದೆಯಲ್ಲವೇ? ಆದ್ದರಿಂದ ಮೊಮ್ಮಗ ಆರ್ಯನ್ ಚೌಗುಲೆ ಅವರನ್ನು ಸಹಾಯಕ್ಕಾಗಿ ಜೊತೆಗೆ ಕರೆದುಕೊಂಡು ಬಂದಿದ್ದೇನೆ’ ಎಂದು ಶಿವಬಸವನಗರ ಮತಗಟ್ಟೆಗೆ ಬಂದಿದ್ದ 99 ವರ್ಷದ ಶರ್ಬತ್‌ ಬಾಯಿ ಚೌಗುಲೆ ತಿಳಿಸಿದರು.

ರಾಜ್ಯ ಅಂಗವಿಕಲರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಹೊಂಗಲ ಹಾಗೂ ಅಂಗವಿಕಲರ ವ್ಹೀಲ್ ಚೇರ್ ಬಾಸ್ಕೆಟ್‌ಬಾಲ್ ಅಂತರರಾಷ್ಟ್ರೀಯ ಆಟಗಾರ್ತಿ ಮನಿಷಾ ಹೊಂಗಲ ರಾಮತೀರ್ಥ ನಗರದ ವಾರ್ಡ್ ಸಂಖ್ಯೆ 46ರಲ್ಲಿ ಮತದಾನ ಮಾಡಿ, ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡರು. ಮತದಾನದ ಮಹತ್ವ ಸಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT