ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ರಕ್ತದ ಸಂಗ್ರಹಕ್ಕೆ ಬೇಕಿದೆ ಇನ್ನಷ್ಟು ಜಾಗೃತಿ..

ಜಿಲ್ಲಾಸ್ಪತ್ರೆ ರೋಗಿಗಳಿಗೆ ಬೇಕು ವಾರ್ಷಿಕ 11 ಸಾವಿರ ಯೂನಿಟ್‌ ರಕ್ತ, ಬಿಮ್ಸ್‌ ರಕ್ತನಿಧಿ ಕೇಂದ್ರದಲ್ಲಿ ಸಂಗ್ರಹವಾಗುತ್ತಿದೆ 7 ಸಾವಿರ ಯೂನಿಟ್‌
Published 14 ಜೂನ್ 2024, 6:11 IST
Last Updated 14 ಜೂನ್ 2024, 6:11 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಬಿಮ್ಸ್‌) ರಕ್ತನಿಧಿ ಕೇಂದ್ರವು ಜಿಲ್ಲೆಯ ವಿವಿಧೆಡೆ ರಕ್ತದಾನ ಶಿಬಿರ ನಡೆಸಿ, ವಾರ್ಷಿಕ 7 ಸಾವಿರಕ್ಕೂ ಅಧಿಕ ಯೂನಿಟ್‌ ರಕ್ತ ಸಂಗ್ರಹಿಸುತ್ತಿದೆ. ಆದರೆ, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಬೇಡಿಕೆಯಂತೆ ರಕ್ತ ಪೂರೈಸಲು ಕೆಲವೊಮ್ಮೆ ಖಾಸಗಿ ರಕ್ತನಿಧಿ ಕೇಂದ್ರಗಳ ನೆರವು ಪಡೆಯುತ್ತಿದೆ.

ಜಿಲ್ಲಾಸ್ಪತ್ರೆಯಲ್ಲಿ ಬೆಳಗಾವಿ ಮಾತ್ರವಲ್ಲದೆ, ಅಕ್ಕಪಕ್ಕದ ಜಿಲ್ಲೆಗಳ ರೋಗಿಗಳು ದಾಖಲಾಗುತ್ತಾರೆ. ಇಲ್ಲಿ ಚಿಕಿತ್ಸೆ ಪಡೆಯುವವರಿಗೆ ಬಿಮ್ಸ್‌ ರಕ್ತನಿಧಿ ಕೇಂದ್ರದಿಂದ ರಕ್ತ ಪೂರೈಕೆಯಾಗುತ್ತದೆ. ಬಿಪಿಎಲ್‌ ಪಡಿತರ ಚೀಟಿದಾರರಿಗೆ ಉಚಿತವಾಗಿ ಪೂರೈಸಿದರೆ, ಎಪಿಎಲ್‌ ಪಡಿತರ ಚೀಟಿದಾರರಿಗೆ ಪ್ರತಿ ಯೂನಿಟ್‌ಗೆ ₹300 ಶುಲ್ಕ ಪಡೆಯಲಾಗುತ್ತದೆ.

ಈ ಆಸ್ಪತ್ರೆಯಲ್ಲಿ ದಾಖಲಾಗುವವರಿಗೆ ವಾರ್ಷಿಕ ಸರಾಸರಿ 11 ಸಾವಿರ ಯೂನಿಟ್‌ ರಕ್ತದ ಅಗತ್ಯವಿದೆ. ಈ ಪೈಕಿ ಬಿಮ್ಸ್‌ ರಕ್ತನಿಧಿ ಕೇಂದ್ರದಲ್ಲಿ 2023–24ರಲ್ಲಿ 7,500 ಯೂನಿಟ್‌ ಸಂಗ್ರಹವಾಗಿತ್ತು. 2024ರ ಜನವರಿ 1ರಿಂದ ಜೂನ್‌ 12ರವರೆಗೆ 3,400 ಯೂನಿಟ್‌ ರಕ್ತ ಸಂಗ್ರಹವಾಗಿದೆ.

ಪ್ರತಿದಿನ 30 ಯೂನಿಟ್‌ ಬೇಕು

‘ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಿಗಳಿಗೆ ಪ್ರತಿದಿನ 30ರಿಂದ 35 ಯೂನಿಟ್‌ ರಕ್ತದ ಅವಶ್ಯಕತೆಯಿದೆ. ಹೆರಿಗೆಯಾಗುವವರು, ನವಜಾತ ಶಿಶುಗಳು, ಅಪಘಾತದಲ್ಲಿ ಗಾಯಗೊಂಡವರು, ಅನಿಮಿಯಾ, ಕ್ಯಾನ್ಸರ್‌ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು, ಡಯಾಲಿಸಿಸ್‌ ಚಿಕಿತ್ಸೆ, ವಿವಿಧ ಶಸ್ತ್ರಚಿಕಿತ್ಸೆಗೆ ಒಳಪಡುವವರು, ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುವವರಿಗೆ ಅದನ್ನು ಬಳಸಲಾಗುತ್ತಿದೆ. ಈಗ ಜಿಲ್ಲಾಸ್ಪತ್ರೆ ಆವರಣದಲ್ಲೇ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ತಲೆ ಎತ್ತಿದೆ. ಅದು ಕಾರ್ಯಾರಂಭ ಮಾಡಿದರೆ, ದಿನಕ್ಕೆ 70ರಿಂದ 100 ಯೂನಿಟ್‌ ರಕ್ತ ಬೇಕಾಗುತ್ತದೆ’ ಎಂದು ಬಿಮ್ಸ್‌ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ರವೀಂದ್ರ ಪಾಟೀಲ, ಡಾ.ಶ್ರೀದೇವಿ ಬೋಬಾಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಿರಂತರವಾಗಿ ಶಿಬಿರ ಮಾಡುತ್ತಿದ್ದೇವೆ

‘ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸುತ್ತಿದ್ದೇವೆ. ಅಲ್ಲದೆ, ಶಾಲಾ–ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಂಘ–ಸಂಸ್ಥೆಗಳಲ್ಲೂ ಶಿಬಿರ ನಡೆಯುತ್ತಿವೆ. ಜನರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುತ್ತಿದ್ದಾರೆ. ಕಬ್ಬೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ನಡೆದ ಶಿಬಿರದಲ್ಲಿ 118 ಮಂದಿ ರಕ್ತದಾನ ಮಾಡಿದ್ದಾರೆ’ ಎಂದರು.

11 ಖಾಸಗಿ ಕೇಂದ್ರಗಳಿವೆ

‘ಬೆಳಗಾವಿ ಜಿಲ್ಲೆಯಲ್ಲಿ 11 ಖಾಸಗಿ ರಕ್ತನಿಧಿ ಕೇಂದ್ರಗಳಿವೆ. ಅವರು ಆಯೋಜಿಸುವ ರಕ್ತದಾನ ಶಿಬಿರಗಳಲ್ಲಿ ಸಂಗ್ರಹವಾಗುವ ರಕ್ತದಲ್ಲಿನ ಶೇ 25ರಷ್ಟು ಭಾಗವನ್ನು ಬಿಮ್ಸ್‌ ರಕ್ತನಿಧಿ ಕೇಂದ್ರಕ್ಕೆ ನೀಡಬೇಕೆಂಬ ನಿಯಮವಿದೆ. ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಅಗತ್ಯವಿರುವ ಹೆಚ್ಚಿನ ಮತ್ತು ಆಯ್ದ ರಕ್ತದ ಗುಂಪುಗಳ ರಕ್ತವನ್ನು ಆ ಕೇಂದ್ರಗಳಿಂದಲೂ ಪಡೆಯುತ್ತಿದ್ದೇವೆ’ ಎಂದು ಅವರು ಹೇಳಿದರು.

‘ಮಳೆಗಾಲ, ಚಳಿಗಾಲಕ್ಕೆ ಹೋಲಿಸಿದರೆ, ಪ್ರತಿವರ್ಷ ಬೇಸಿಗೆಯಲ್ಲಿ ರಕ್ತ ಸಂಗ್ರಹ ಪ್ರಮಾಣ ಕಡಿಮೆ ಇರುತ್ತದೆ. ಈ ಬಾರಿ ಬೇಸಿಗೆಯಲ್ಲೂ ಬಿಸಿಲಿನ ಧಗೆ, ಲೋಕಸಭೆ ಚುನಾವಣೆ ಕಾರಣಕ್ಕೆ ನಿರೀಕ್ಷೆಯಂತೆ ರಕ್ತ ಸಂಗ್ರಹವಾಗಿಲ್ಲ. ಈಗ ಶಾಲಾ–ಕಾಲೇಜು ಆರಂಭಗೊಂಡಿದ್ದು, ಯುವಸಮೂಹ ಉತ್ಸಾಹದಿಂದ ರಕ್ತದಾನ ಮಾಡುತ್ತಿದೆ. ರಕ್ತದಾನಿಗಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ದೇವೆ’ ಎಂದು ವಿವರಿಸಿದರು.

ರಕ್ತದಾನ ಶಿಬಿರಗಳ ಸಂಖ್ಯೆ ಹೆಚ್ಚಿಸಿದ್ದೇವೆ. ರಕ್ತದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ರೋಗಿಗಳಿಗೆ ಯಾವ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ -ಡಾ.ಅಶೋಕಕುಮಾರ ಶೆಟ್ಟಿ ನಿರ್ದೇಶಕ ಬಿಮ್ಸ್‌

ಶಿಬಿರಗಳಲ್ಲಿ ಸಂಗ್ರಹವಾಗುವ ರಕ್ತವನ್ನು ಕೆಂಪು ರಕ್ತಕಣ ಪ್ಲೇಟ್‌ಲೇಟ್ಸ್‌ ಸೇರಿದಂತೆ ನಾಲ್ಕು ವಿಧಗಳಾಗಿ ವಿಂಗಡಿಸಿ ಬಳಸುತ್ತೇವೆ. ಒಬ್ಬರು ರಕ್ತದಾನ ಮಾಡಿದರೆ ನಾಲ್ವರ ಜೀವ ಉಳಿಸಬಹುದು.

-ಡಾ.ರವೀಂದ್ರ ಪಾಟೀಲ ವೈದ್ಯಾಧಿಕಾರಿ ಬಿಮ್ಸ್‌ ರಕ್ತನಿಧಿ ಕೇಂದ್ರ ಬೆಳಗಾವಿ

ವಾಹನ ಸೌಕರ್ಯ ಬಿಮ್ಸ್‌ ರಕ್ತನಿಧಿ ಕೇಂದ್ರವು ರಕ್ತ ಸಂಗ್ರಹಕ್ಕಾಗಿಯೇ ಸಂಚಾರಿ ವಾಹನ ಸೌಕರ್ಯ ಕಲ್ಪಿಸಿದೆ. ಅದರಲ್ಲಿ ವೈದ್ಯರು ವೈದ್ಯಕೀಯ ಸಿಬ್ಬಂದಿ ಇರುತ್ತಾರೆ. ಕನಿಷ್ಠ ಐದು ಮಂದಿ ರಕ್ತದಾನ ಮಾಡುವುದಾಗಿ ತಿಳಿಸಿದರೂ ಜನರು ಇದ್ದ ಕಡೆಗೆ ವಾಹನ ತೆರಳುತ್ತದೆ. ರಕ್ತದಾನ ಮಾಡಲು ಇಚ್ಛಿಸುವವರು ಮೊ.ಸಂ.6960386594 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT