ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಅಧಿಕಾರಿಗಳಿಗೆ ಶಾಸಕದ್ವಯರ ಕ್ಲಾಸ್

ಯೋಜನೆಗಳ ಪ್ರಗತಿ ಪರಿಶೀಲನೆ
Last Updated 10 ಜನವರಿ 2020, 15:46 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಟುತ್ತಾ ಸಾಗಿರುವುದಕ್ಕೆ ಅಸಮಾಧಾನಗೊಂಡ ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶುಕ್ರವಾರ ಸಭೆ ನಡೆಸಿದ ಅವರು ಬೀದಿದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ನಗರದಲ್ಲಿ ಶೇ 50ರಷ್ಟು ಬೀದಿದೀಪಗಳು ಬೆಳಗುತ್ತಿಲ್ಲ. ಅವುಗಳ ಸಮರ್ಪಕ ನಿರ್ವಹಣೆ ಮಾಡಲಾಗುತ್ತಿಲ್ಲ. ಅಧಿಕಾರಿಗಳು ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆಲವು ಕಿಡಿಗೇಡಿಗಳು ವಿದ್ಯುತ್ ಕಂಬ, ದೀಪಗಳನ್ನು ಹಾಳು ಮಾಡುತ್ತಿದ್ದಾರೆ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರ ವಿರುದ್ಧ ಕ್ರಮ ವಹಿಸುವಂತೆ ಪೊಲೀಸರಿಗೆ ದೂರು ನೀಡಬೇಕು’ ಎಂದು ಅಭಯ ಸೂಚಿಸಿದರು.

‘ಉದ್ಯಾನಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಕೂಡಲೇ ಎಲ್ಲ ಉದ್ಯಾನಗಳಿಗೂ ವಾಚ್‌ಮನ್‌ಗಳನ್ನು ನೇಮಿಸಬೇಕು. ಕೋಟೆ ಕೆರೆಯನ್ನು ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಬಹಳ ವರ್ಷಗಳಿಂದಲೂ ಒಬ್ಬನೇ ಗುತ್ತಿಗೆದಾರ ನಿರ್ವಹಣೆಯ ಗುತ್ತಿಗೆ ಪಡೆಯುತ್ತಿದ್ದಾರೆ. ಮಾರ್ಚ್‌ನಿಂದ ಗುತ್ತಿಗೆದಾರರನ್ನು ಬದಲಾಯಿಸಿ, ಸಮರ್ಪಕ ನಿರ್ವಹಣೆ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

‘ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ವಿಷಯದಲ್ಲಿ ಗುತ್ತಿಗೆದಾರರು ಲೋಪಗಳನ್ನು ಮಾಡುತ್ತಿದ್ದಾರೆ. ಇದರಿಂದ ಪಾಲಿಕೆಯ ಹಣ ಪೋಲಾಗುತ್ತಿದೆ. ಗುತ್ತಿಗೆದಾರರು ಎಷ್ಟು ವಾಹನಗಳನ್ನು ಬಳಸುತ್ತಿದ್ದಾರೆ, ಎಷ್ಟು ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ, ಹೇಗೆ ವಿಲೇವಾರಿ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಸಂಬಂಧಿಸಿದವರು ನಿಗಾ ವಹಿಸಬೇಕು’ ಎಂದು ತಾಕೀತು ಮಾಡಿದರು.

‘ಸ್ಮಾರ್ಟ್ ಸಿಟಿ ಯೋಜನೆಯಲ್ಲಿ, ಪೌರಕಾರ್ಮಿಕರ ಕೆಲಸದ ಮೇಲೆ ನಿಗಾ ವಹಿಸಲು ಪ್ರತಿ ಮನೆಗೆ ಆರ್‌ಎಫ್‌ಐಡಿ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಆದರೆ, ಕೆಲವು ಕಿಡಗೇಡಿಗಳು ಅವುಗಳನ್ನು ಕಿತ್ತೆಸೆಯುವುದು ಕಂಡುಬಂದಿದೆ. ಸೆನ್ಸರ್‌ಗಳ ಬಗ್ಗೆ ಸುಳ್ಳು ವದಂತಿಗಳನ್ನು ಹರಡಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಸ್ಮಾರ್ಟ್‌ ಸಿಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಎಚ್ಚರಿಕೆ ನೀಡಿದರು.

‘ನಗರಪಾಲಿಕೆ ಮತ್ತು ದಂಡುಮಂಡಳಿ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ಇಬ್ಬರ ಜಗಳದಿಂದ ನಗರದ ಸ್ವಚ್ಛತೆ ಹಾಳಾಗುತ್ತಿದೆ’ ಎಂದು ಅನಿಲ ಬೆನಕೆ ದೂರಿದರು. ‘ದಂಡು ಮಂಡಳಿ ಪ್ರದೇಶಕ್ಕೆ ನೀರು ಪೂರೈಸುವುದನ್ನು ನಿಲ್ಲಿಸಿ ಅವರಿಗೆ ಬುದ್ಧಿ ಕಲಿಸಬೇಕು’ ಎಂದು ಅಭಯ ಪಾಟೀಲ ಸಲಹೆ ನೀಡಿದರು.

ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ, ಬುಡಾ ಆಯುಕ್ತ ಪ್ರೀತಂ ನಸಲಾ‍ಪುರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT