ಭಾನುವಾರ, ಮೇ 16, 2021
22 °C

ಲೋಕಸಭಾ ಉಪ ಚುನಾವಣೆ: ಬೆಳಗಾವಿಯಲ್ಲಿ ₹ 62 ಲಕ್ಷ ನಗದು, ಮದ್ಯ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಹಣ ಅಥವಾ ಮದ್ಯದ ಅಕ್ರಮ ಸಾಗಣೆ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಇದುವರೆಗೆ, ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 62.55 ಲಕ್ಷವನ್ನು ಚೆಕ್‌ಪೋಸ್ಟ್‌ಗಳಲ್ಲಿ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

‘ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ 27 ಚೆಕ್‌ಪೋಸ್ಟ್‌ಗಳಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ತಂಡಗಳು ನಿಗಾ ವಹಿಸಿವೆ. ಈವರೆಗೆ ವಶಪಡಿಸಿಕೊಂಡ ನಗದಿನಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಪೊಲೀಸ್ ಮತ್ತಿತರ ತಂಡಗಳಿಂದ, ಪ್ರಸ್ತುತಪಡಿಸಿದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ₹ 19.83 ಲಕ್ಷವನ್ನು ಸಂಬಂಧಪಟ್ಟವರಿಗೆ ವಾಪಸ್ ಕೊಡಲಾಗಿದೆ. ಇನ್ನುಳಿದ ₹ 42,71,620ವನ್ನು ನಿಯಮಾವಳಿ ಪ್ರಕಾರ ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

4,020 ಲೀಟರ್ ಮದ್ಯ ವಶ

‘ವಿವಿಧೆಡೆ ತಪಾಸಣೆ ಕೈಗೊಂಡು ₹ 11.25 ಲಕ್ಷ ಮೌಲ್ಯದ 4,020 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟಾರೆ ₹ 42.26 ಲಕ್ಷ ಮೌಲ್ಯದ ಒಟ್ಟು 16 ದ್ವಿಚಕ್ರವಾಹನಗಳು, 1 ಕಂಟೇನರ್, 1 ಕ್ಯಾಂಟರ್, 4 ಕಾರು‌ ಹಾಗೂ ಒಂದು ಜೀಪು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯವರು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ 128 ಪ್ರಕರಣಗಳು ವರದಿಯಾಗಿವೆ’ ಎಂದು ತಿಳಿಸಿದ್ದಾರೆ.

ಮಾರ್ಗಸೂಚಿ ಉಲ್ಲಂಘನೆ ದೂರು ದಾಖಲು

‘ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟಾರೆ 22 ದೂರುಗಳನ್ನು ಸ್ವೀಕರಿಸಲಾಗಿದೆ. ಈ 22 ದೂರುಗಳ ಪೈಕಿ 18 ಪ್ರಕರಣಗಳನ್ನು ಪರಿಶೀಲಿಸಿ ಒಟ್ಟು ₹ 56ಸಾವಿರ ದಂಡ ವಿಧಿಸಲಾಗಿದೆ. ಮೂರು ಪ್ರಕರಣಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಇನ್ನುಳಿದ ಒಂದು ದೂರಿಗೆ ಸಂಬಂಧಿಸಿದಂತೆ ಪ್ರಕರಣ ಖಚಿತವಾಗಿಲ್ಲ. ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ನಗರ ಪ್ರದೇಶಗಳಲ್ಲಿ ಮಾರ್ಷಲ್‌ಗಳನ್ನು ನಿಯೋಜಿಸಿ, ದಂಡ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲು ನಿರ್ಧರಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಉಪ ಚುನಾವಣೆ ಸಂದರ್ಭದಲ್ಲಿ ‌ಅಕ್ರಮ ಹಣ ಮತ್ತು ಮದ್ಯ‌ ಸಾಗಣೆ ತಡೆಗಟ್ಟಲು ಹಾಗೂ ಇನ್ನಿತರ ಚುನಾವಣಾ ಅಕ್ರಮಗಳನ್ನು ಪತ್ತೆ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೂರುಗಳು ಬಂದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕ್ರಮ ವಹಿಸಲು ಅನುಕೂಲ ಆಗುವಂತೆ 27 ಎಫ್.ಎಸ್.ಟಿ. ತಂಡಗಳು ಕಾರ್ಯನಿರ್ವಹಿಸುತ್ತಿವೆ. ಪ್ರಚಾರ ಸಭೆಗಳು, ರ‍್ಯಾಲಿ ಮತ್ತಿತರ ಚಟುವಟಿಕೆಗಳ ಮೇಲೆ ನಿಗಾ ವಹಿಸಲು 48 ವಿ.ಎಸ್.ಟಿ. ತಂಡಗಳು ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ’ ಎಂದು ತಿಳಿಸಿದ್ದಾರೆ.

‘ಚುನಾವಣಾ ಅಕ್ರಮಗಳ ಕುರಿತು ಸಾರ್ವಜನಿಕರಿಂದ ನೇರವಾಗಿ ದೂರು ಅಥವಾ ಮಾಹಿತಿ ಸ್ವೀಕರಿಸಲು ಸಿ–ವಿಜಿಲ್, ದೂರು ನಿರ್ವಹಣಾ ಕೋಶ ಹಾಗೂ ಮಾದರಿ ನೀತಿಸಂಹಿತೆ ನಿಯಂತ್ರಣ ಕೊಠಡಿ ಸ್ಥಾಪನೆ ಮೊದಲಾದ ಕ್ರಮ ವಹಿಸಲಾಗಿದೆ. ಚುನಾವಣಾ ಆಯೋಗದಿಂದ ನಿಯೋಜಿತವಾಗಿರುವ ಚುನಾವಣಾ ಸಾಮಾನ್ಯ, ವೆಚ್ಚ ಮತ್ತು ಹಾಗೂ ‌ಪೊಲೀಸ್ ವೀಕ್ಷಕರು ಕೂಡ ಚುನಾವಣಾ ಪ್ರಕ್ರಿಯೆಯನ್ನು ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಸುಗಮ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸಾರ್ವಜನಿಕರು ಸಹಕರಿಸಬೇಕು’ ಎಂದು ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು