ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜನನಿಬಿಡ ರಸ್ತೆಯಲ್ಲೇ ಓಡಾಡಿದ ಚಿರತೆ

Last Updated 22 ಆಗಸ್ಟ್ 2022, 7:54 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಹಿಂಡಲಗಾ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಚಿರತೆ ಮತ್ತೆ ಕಾಣಿಸಿಕೊಂಡಿದೆ. ರಾಜಾರೋಷವಾಗಿ ರಸ್ತೆ ಪಕ್ಕದಲ್ಲೇ ಓಡಾಡುತ್ತಿರುವುದನ್ನು ಖಾಸಗಿ ಬಸ್ ಸವಾರರು ಮೊಬೈಲಿನಲ್ಲಿ ವಿಡಿಯೊ ಮಾಡಿದ್ದಾರೆ.

ನಗರದೊಳಗೇ ಇರುವ ಗಾಲ್ಫ್ ಮೈದಾನದ ಪಕ್ಕದ ಹಿಂಡಲಗಾ ರಸ್ತೆಯಲ್ಲಿ ಎಡಬದಿಯಲ್ಲಿ ಮತ್ತೆ ಚಿರತೆ ಕಿಲೋಮೀಟರ್ ದೂರದವರೆಗೆ ಓಡಿದೆ. ಜನನಿಬಿಡ, ವಾಹನ ದಟ್ಟಣೆ ಇರುವ ಗಾಂಧಿ ಚೌಕದಿಂದ ಒಂದು ಕಿ.ಮೀ ದೂರ ಓಡಿದೆ. ನಂತರ ರಸ್ತೆಯ ಎಡಬದಿಯಿಂದ ಬಲಬದಿಗೆ ಹಾರಿ, ಗಾಲ್ಫ್ ಮೈದಾನದ ಪೊದೆ ಸೇರಿಕೊಂಡಿದೆ.

ಮೊದಲು ಬಸ್ ಚಾಲಕ ಚಿರತೆ ಕಂಡಿರು. ಅನುಮಾನ ಬಂದು ವಾಹನದ ವೇಗ ನಿಧಾನ ಮಾಡಿದರು. ಆಗ ಚಿರತೆ ಮತ್ತೆ ವಾಹನದ ಹಿಂಬದಿಯಿಂದ ರಸ್ತೆ ದಾಟಿ ಎಡಬದಿಯಿಂದ ಅರಾಮವಾಗಿ ನಡೆಯತೊಡಗಿತು. ಅದು ಚಿರತೆ ಎಂದು ಖಚಿತ ಮಾಡಿಕೊಂಡ ಪ್ರಯಾಣಿಕರೊಬ್ಬರು ವಿಡಿಯೊ ಚಿತ್ರಿಸಿಕೊಂಡು.

ಶಾಲೆ ಆವರಣದಲ್ಲೇ ಕಾಣಿಸಿತ್ತು:ಕೆಲವು ಖಾಸಗಿ ಶಾಲೆಗಳಿಗೆ ಈ ಜಾಗ ಕೂಗಳತೆ ದೂರದಲ್ಲೇ ಇದೆ. ಮೂರು ದಿನಗಳ ಹಿಂದಷ್ಟೇ ವನಿತಾ ವಿದ್ಯಾಲಯ ಶಾಲೆ ಆವರದಲ್ಲಿ ಚಿರತೆ ಕಂಡಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದರು. ಮಕ್ಕಳ ಮಾತನ್ನು ಹಗುರವಾಗಿ ತೆಗೆದುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ನೆಪಕ್ಕೆ ಮಾತ್ರ ಪರಿಶೀಲನೆ ನಡೆಸಿದ್ದರು.

ಚಿರತೆ ಕಾಣಿಸಿಕೊಂಡ ವಿಡಿಯೊ ಕೆಲವೇ ಕ್ಷಣಗಳಲ್ಲಿ ನಗರದಾದ್ಯಂತ ಹರಿದಾಡಿತು. ಈ ಭಾಗದ ಕೆಲವು ಯುವಕ, ಯುವತಿಯರು ಈ ಸುದ್ದಿ ಮಾಹಿತಿ ಹಂಚಿಕೊಳ್ಳುವುದಕ್ಕಾಗಿಯೇ ವಾಟ್ಸ್ ಆಪ್ ಗ್ರೂಪ್ ಮಾಡಿಕೊಂಡಿದ್ದರಿಂದ ಮಾಹಿತಿ ಶೀಘ್ರ ಹರಡಿತು.

18 ದಿನಗಳ ಬಳಿಕ ಚಿರತೆ ಹಗಲಿನಲ್ಲಿಯೇ ಕಾಣಿಸಿಕೊಂಡಿದ್ದರಿಂದ ವಿದ್ಯಾರ್ಥಿಗಳು, ಪಾಲಕರು, ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

ಅಶಿಸ್ತಿನ ಕಾರ್ಯಾಚರಣೆ:ಆಗಸ್ಟ್ 5ರಂದು ಜಾಧವ್ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿದ್ದ ಚಿರತೆ ಅಲ್ಲಿಯೇ ಠಿಕಾಣೆ ಹೂಡಿದೆ. ಆಗಾಗ ಕಾಣಿಸಿಕೊಂಡಿದೆ ಎಂದು ಜನ ಪದೇಪದೇ ಹೇಳುತ್ತಲೇ ಇದ್ದರು. ಆದರೆ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ತಳ್ಳಿ ಹಾಕುತ್ತಲೇ ಬಂದರು.

ಶುಕ್ರವಾರ 100 ಪೊಲೀಸರು, 100 ಅರಣ್ಯ ಸಿಬ್ಬಂದಿ ಸೇರಿ 200 ಜನ ಏಕಕಾಲಕ್ಕೆ ಕಾರ್ಯಾಚರಣೆಗೆ ಇಳಿದರು. ಬಡಿಗೆ ಹಿಡಿದುಕೊಂಡು ಕೂಗುತ್ತ, ಚೀರುತ್ತ, ಪಟಾಕಿ ಸಿಡಿಸುತ್ತ ಹೋದರು. 250 ಎಕರೆ ದಟ್ಟ ಪೊದೆ ಇರುವ ಈ ಪ್ರದೇಶವನ್ನು ಕೇವಲ ಎರಡು ತಾಸಿನಲ್ಲಿ ಸುತ್ತಿಬಂದು ಕಾರ್ಯಾಚರಣೆ ಮುಗಿಸಿದರು.

ಈ ರೀತಿ ಕಾರ್ಯಾಚರಣೆ ಮಾಡುವುದು ಅವೈಜ್ಞಾನಿಕ, ಅಶಿಸ್ತು. ಇದರಿಂದ ಚಿರತೆ ಭಯಗೊಂಡು ಮತ್ತಷ್ಟು ಅಪಾಯ ಸೃಷ್ಟಿ ಮಾಡುವ ಸಾಧ್ಯತೆ ಇದೆ ಎಂದು ಪಶುತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಿಯೂ ಚಿರತೆ ಸುಳಿವು ಪತ್ತೆಯಾಗಿಲ್ಲ. ಹೆಜ್ಜೆ ಗುರುತು, ಲದ್ದಿಯೂ ಸಿಕ್ಕಿಲ್ಲ. ಅದು ಮರಳಿ ಕಾಡಿಗೆ ಹೋಗಿರಬಹುದು ಎಂದು ಎಸಿಎಫ್ ಶಿವಾನಂದ ಕುಸನಾಳ ತಿಳಿಸಿದ್ದರು.

ದಾರಿ ತಪ್ಪಿಸಿದ ಅಧಿಕಾರಿಗಳು: 12 ಕಡೆ ಟ್ರ್ಯಾಪ್ ಕ್ಯಾಮೆರಾ ಹಾಕಿ, 8 ಕಡೇ ಬೋನು ಇಡಲಾಗಿದೆ. ಆದರೆ ಎಲ್ಲಿಯೂ ಚಿರತೆ ಕಾಣಿಸಿಕೊಂಡಿಲ್ಲ. ಎರಡು ವಾರ ಕಣ್ಣಿಟ್ಟಿದ್ದ ಸಿಬ್ಬಂದಿ ನಂತರ ಕೂಂಬಿಂಗ್ ಕೂಡ ನಿಲ್ಲಿಸಿದ್ದರು.

ಆಗಸ್ಟ್ 7, 8ರಂದು ಗಾಲ್ಫ್ ಮೈದಾನದ ಟ್ರ್ಯಾಪ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಚಿರತೆ ಚಲನವಲನ ಸೆರೆಯಾಗಿಲ್ಲ. ಜನ ಹೇಳುವುದೆಲ್ಲ ಗಾಳಿಸುದ್ದಿ ಎಂದೇ ಹೇಳಿದ್ದರು.

ಹೀಗಾಗಿ ಈ ಭಾಗದಲ್ಲಿ ಎರಡು ವಾರಗಳಿಂದ ರಜೆ ಕೊಟ್ಟಿದ್ದ 22 ಶಾಲೆಗಳನ್ನು ಆ.16ರಿಂದ ಮತ್ತೆ ಆರಂಭಿಸಲಾಗಿದೆ.

ಈ ಮಧ್ಯೆ ಕೆಲವು ನಕಲಿ ವಿಡಿಯೊ, ಫೋಟೊಗಳು ಹರಿದಾಡಿದ್ದು ಇಲಾಖೆಗೆ ತಲೆನೋವಾಗಿತ್ತು.


ಗುರಿ ತಪ್ಪಿದ ಅರಿವಳಿಕೆ ಚುಚ್ಚುಮದ್ದು: ಮತ್ತೆ ಗಾಲ್ಫ್ ಮೈದಾನ ಸೇರಿದ ಚಿರತೆ


ನಗರದ ಕ್ಲಬ್ ರಸ್ತೆಯಲ್ಲಿ ಕಾರ್ಯಾಚರಣೆಗೆ ಇಳಿದ ಸಿಬ್ಬಂದಿಯನ್ನು ಯಾಮಾರಿಸಿದ ಚಿರತೆ ಕಣ್ಣೆದುರಲ್ಲೇ ನೆಗೆದು ಪರಾರಿಯಾಯಿತು.

ಗಾಲ್ಫ್ ಮೈದಾನದ ಎಡಬದಿಯಿಂದ ಸದ್ದು ಮಾಡುತ್ತ ಕೆಲವು ಸಿಬ್ಬಂದಿ ಮುನ್ನುಗ್ಗಿದರು. ಮರದ ಹಿಂದೆ ಚಿರತೆ ಅವಿತಿದ್ದು ಕಾಣಿಸಿತು. ಒಂದು ಕಡೆಯಿಂದ ಚಿರತೆ ಓಡಿಸುವುದು, ಅದಕ್ಕೆ ಅಭಿಮುಖವಾಗಿ ಬಲೆ ಹಿಡಿದು ನಿಲ್ಲುವುದಾಗಿ ಯೋಜನೆ ರೂಪಿಸಲಾಯಿತು.

ಉಪಾಯದಂತೆ ಸಿಬ್ಬಂದಿ ಸದ್ದು ಮಾಡಿದ ತಕ್ಷಣ ಚಿರತೆ ನೆಗೆದು ರಸ್ತೆಗೆ ಬಂತು. ತುಸು ದೂರದಲ್ಲಿ ಎದುರಿನಲ್ಲಿ ಗನ್ ಹಿಡಿದು ನಿಂತಿದ್ದ ಶಾರ್ಪ್ ಶೂಟರ್; ಅರಿವಳಿಕೆ ಚುಚ್ಚುಮದ್ದು ಹಾರಿಸಿದರೂ ಅದು ಚಿರತೆಗೆ ಚುಚ್ಚಲಿಲ್ಲ. ಬಲೆ ಹಿಡಿದು ನಿಂತಿದ್ದವರ ಕಡೆಗೂ ಬರಲಿಲ್ಲ.

ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ರಸ್ತೆ ಎಡಬದಿಯಿಂದ ನೆಗೆದು ಬಲಬದಿಗೆ ನುಗ್ಗಿತು. ತಂತಿಬೇಲಿಯನ್ನು ಹರಿದು ಮತ್ತೆ ಗಾಲ್ಫ್ ಮೈದಾನದ ಪೊದೆ ಸೇರಿಕೊಂಡಿತು.

ಕಣ್ಣ ಮುಂದಿದ್ದರೂ ಅದನ್ನು ಸೆರೆಹಿಡಿಯುವ ಕಾರ್ಯಾಚರಣೆ ಮತ್ತೆ ವಿಫಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT