ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ತೂರಾಟ: ಮೂವರು ಆರೋಪಿಗಳ ಬಂಧನ

ನಿಷೇಧಾಜ್ಞೆ ಜಾರಿ, ಪೊಲೀಸರ ಕ್ರೀಡಾಕೂಟ ಮುಂದೂಡಿಕೆ
Last Updated 19 ಡಿಸೆಂಬರ್ 2019, 9:37 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಶಿವಾಜಿನಗರದ ಆರ್‌ಟಿಒ ವೃತ್ತದ ಬಳಿ ವಾಹನಗಳ ಮೇಲೆ ಮಂಗಳವಾರ ನಡೆದಿದ್ದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್‌ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.

ಆಜಾದ್ ನಗರದ ಝುಲ್ಫಿಕರ್‌ ಮೊಹಮ್ಮದ್ ಹವತ್ ಹಕೀಂ, ನ್ಯೂ ಗಾಂಧಿನಗರದ ವಾಸಿಂ ಅಹಮದ್ ಮೊಕಾಶಿ ಹಾಗೂ ಉಜ್ವಲ ನಗರ ನಿವಾಸಿ ಮೊಹಮ್ಮದ್ ತಾಹಿರ್ ಅಮಾನುಲ್ಲಾ ದೇವಲಾಪುರ ಬಂಧಿತರು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಆಧರಿಸಿ, ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಜಮಿಯತ್‌ ಉಲೇಮಾ–ಎ–ಹಿಂದ್ ಸಂಘಟನೆ ನೇತೃತ್ವದಲ್ಲಿ ಮುಸ್ಲಿಮರು ಹಮ್ಮಿಕೊಂಡಿದ್ದ ಮೆರವಣಿಗೆ ಬಳಿಕ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ 7 ಬಸ್, ಕಾರು, ಪೆಟ್ರೋಲ್ ಟ್ಯಾಂಕರ್‌ ಹಾಗೂ ಎಟಿಎಂ ಕೇಂದ್ರದ ಮೇಲೆ ಕಲ್ಲು ತೂರಲಾಗಿತ್ತು. ಇದರಿಂದ ವಾಹನಗಳು, ಎಟಿಎಂ ಬಾಗಿಲಿನ ಗಾಜು ಪುಡಿಪುಡಿಯಾಗಿತ್ತು. ಬಸ್‌ನಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದರು.

ನಗರದಾದ್ಯಂತ ನಿಷೇಧಾಜ್ಞೆ:‘ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹಾಗೂ ಕಾಯ್ದೆ ವಿರೋಧಿಸಿ ಡಿ. 21ರಂದು ಹಲವು ಸಂಘಟನೆಗಳು ಬಂದ್ ಘೋಷಿಸುವ ಅಥವಾ ಪ್ರತಿಭಟನೆ ನಡೆಸುವ ಸಾಧ್ಯತೆಗಳಿವೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ನಗರ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಡಿ. 19ರ ರಾತ್ರಿ 9ರಿಂದ ಡಿ. 21ರ ಮಧ್ಯರಾತ್ರಿ 12ರವರೆಗೆ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ತಿಳಿಸಿದ್ದಾರೆ.

‘ಸಾರ್ವಜನಿಕರು ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೇ ಶಾಂತಿ ಕಾಪಾಡಬೇಕು. ನಿಷೇಧಾಜ್ಞೆ ಉಲ್ಲಂಘಿಸಿದವರು ಹಾಗೂ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಪ್ರಯತ್ನಿಸಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಕಮೀಷನರೇಟ್ ವತಿಯಿಂದ ಎಲ್ಲ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಡಿ. 19ರಿಂದ 21ರವರೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟವನ್ನೂ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT