ರಾಷ್ಟ್ರಪತಿಗಾಗಿ ‘ಸ್ಮಾರ್ಟ್‌ ಸಿಟಿ’ಯಾದ ಬೆಳಗಾವಿ!

7

ರಾಷ್ಟ್ರಪತಿಗಾಗಿ ‘ಸ್ಮಾರ್ಟ್‌ ಸಿಟಿ’ಯಾದ ಬೆಳಗಾವಿ!

Published:
Updated:
Deccan Herald

ಬೆಳಗಾವಿ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಶನಿವಾರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ನವವಧುವಿನಂತೆ ಶೃಂಗಾರಗೊಂಡಿದೆ. ರಸ್ತೆಗಳಿಗೆ ಟಾರ್‌ ಹಾಕಿ, ಅಭಿವೃದ್ಧಪಡಿಸಲಾಗಿದೆ. ರಸ್ತೆಯ ಮೇಲಿದ್ದ ಕಸ, ದೂಳು, ಮಣ್ಣನ್ನು ಗೂಡಿಸಿ, ಸ್ವಚ್ಛಗೊಳಿಸಲಾಗಿದೆ. ತ್ಯಾಜ್ಯವನ್ನು ತೆರವುಗೊಳಿಸಿ, ‘ಸ್ಮಾರ್ಟ್‌ ಸಿಟಿ’ಯ ಝಲಕ್‌ ತೋರಿಸುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಿದೆ.

ತಮ್ಮ ವಿಶೇಷ ವಿಮಾನದ ಮೂಲಕ ಬೆಳಿಗ್ಗೆ 10.40ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕೋವಿಂದ್‌ ಅವರು ಬಂದಿಳಿಯಲಿದ್ದಾರೆ. ರಸ್ತೆಯ ಮಾರ್ಗವಾಗಿ ಮುತಗಾ, ನಿಲಜಿ, ಬಸವನ ಕುಡಚಿ, ನ್ಯೂ ಗಾಂಧಿನಗರ, ಅಶೋಕ ವೃತ್ತ, ರಾಣಿ ಚನ್ನಮ್ಮನ ವೃತ್ತ, ಬೋಗಾರವೇಸ್‌, ಕಾಂಗ್ರೆಸ್‌ ರೋಡ್‌, ಉದ್ಯಮಬಾಗ್‌ ಮೂಲಕ ಕರ್ನಾಟಕ ಲಾ ಸೊಸೈಟಿಯ ಜಿಐಟಿ ಕಾಲೇಜಿನ ಆವರಣಕ್ಕೆ ಆಗಮಿಸಲಿದ್ದಾರೆ. ಸಂಸ್ಥೆಯ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುವರು.

ಜಿಐಟಿ ಕಾಲೇಜಿನ ಆವರಣದಲ್ಲಿ ಬೃಹತ್‌ ಪೆಂಡಾಲ್‌ ಹಾಕಲಾಗಿದೆ. ಸುಮಾರು 5,000 ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಅತಿ ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಹಾಗೂ ಕೆಲವು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಹದ್ದಿನ ಕಣ್ಣು

ವಿಮಾನ ನಿಲ್ದಾಣದಿಂದ ಕಾಲೇಜಿನವರೆಗೆ ರಾಷ್ಟ್ರಪತಿಯವರು ಸಂಚರಿಸುವ 26 ಕಿ.ಮೀ ರಸ್ತೆಯ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ. ರಸ್ತೆಯಲ್ಲಿ ಎಲ್ಲಿಯೂ ಗುಂಡಿ ಬೀಳದಂತೆ ನೋಡಿಕೊಂಡಿದ್ದಾರೆ. ಕಳೆದ ವಾರದಿಂದ ಈಚೆಗೆ ಗುಂಡಿ ಮುಚ್ಚುವ ಹಾಗೂ ಟಾರ್‌ ಹಾಕುವ ಕೆಲಸವನ್ನು ಮಾಡಿತ್ತು. ರಸ್ತೆಯ ಪಕ್ಕ ಸುಣ್ಣ ಬಣ್ಣ ಬಳಿದಿದೆ. ಅಕ್ಕಪಕ್ಕ ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಮರಗಳ ಟೊಂಗೆಗಳನ್ನು ಕತ್ತರಿಸಿ, ನೀಟಾಗಿ ಮಾಡಿದೆ.

ಫುಟ್‌ಪಾತ್‌ ವ್ಯಾಪಾರಸ್ಥರಿಗೆ ಎಚ್ಚರಿಕೆ

ರಾಷ್ಟ್ರಪತಿ ಅವರು ಹಾದುಹೋಗುವ ಮಾರ್ಗದ ಫುಟ್‌ಪಾತ್‌ ಮೇಲೆ ವ್ಯಾಪಾರ ನಡೆಸದಂತೆ ಪೊಲೀಸರು ಈಗಾಗಲೇ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಪ್ರತಿಯೊಂದು ವೃತ್ತ ಹಾಗೂ ಒಳರಸ್ತೆಗಳ ಜೊತೆ ಸಂಪರ್ಕ ಕಲ್ಪಿಸುವ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಗ್ಗೆ ರಾಷ್ಟ್ರಪತಿಯವರು ಬರುವಾಗ ಹಾಗೂ ಮಧ್ಯಾಹ್ನ ವಾಪಸ್‌ ಹೋಗುವಾಗ ಸಾರ್ವಜನಿಕರ ವಾಹನಗಳು ಸಂಚರಿಸದಂತೆ ನಿಷೇಧ ಹೇರಲಾಗಿದೆ.

ರಿಹರ್ಸಲ್‌

ಮುನ್ನಾ ದಿನವಾದ ಶುಕ್ರವಾರ ರಾಷ್ಟ್ರಪತಿ ಆಗಮನದ ರಿಹರ್ಸಲ್‌ ನಡೆಯಿತು. ಪೊಲೀಸರ ಬೆಂಗಾವಲು, ಹಿರಿಯ ಅಧಿಕಾರಿಗಳು, ಅಂಬುಲೆನ್ಸ್‌ ಸೇರಿದಂತೆ ಸುಮಾರು 50 ವಾಹನಗಳು ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಜಿಐಟಿ ಕಾಲೇಜಿನವರೆಗೆ ಹಾಗೂ ಮಧ್ಯಾಹ್ನ 12.30ಕ್ಕೆ ಜಿಐಟಿ ಕಾಲೇಜಿನಿಂದ ವಿಮಾನ ನಿಲ್ದಾಣದವರೆಗೆ ರಿಹರ್ಸಲ್‌ ನಡೆಸಿದವು.

ಸಂಚಾರ ಮಾರ್ಗ ಬದಲು

ವಿಮಾನ ನಿಲ್ದಾಣದಿಂದ ಕಾಲೇಜಿನವರೆಗಿನ ಮುಖ್ಯ ರಸ್ತೆಯಲ್ಲಿ ವಾಹನಗಳ ನಿಲುಗಡೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸಬೇಕು. ಅಂಬುಲೆನ್ಸ್‌ಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !