ಸೋಮವಾರ, ನವೆಂಬರ್ 23, 2020
22 °C
ಅವಿರೋಧ ಆಯ್ಕೆ; ಬಿಜೆಪಿ ಮುಖಂಡರ ಒಗ್ಗಟ್ಟು ಪ್ರದರ್ಶನ

ಬೆಳಗಾವಿ ಡಿಸಿಸಿ ಬ್ಯಾಂಕ್: ರಮೇಶ ಕತ್ತಿ ಅಧ್ಯಕ್ಷ, ಸುಭಾಷ ಢವಳೇಶ್ವರ ಉಪಾಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ತಿಂಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ರಮೇಶ ಕತ್ತಿ ಹಾಗೂ ಉಪಾಧ್ಯಕ್ಷ ಸುಭಾಷ ಢವಳೇಶ್ವರ ಅವಿರೋಧವಾಗಿ ಪುನರಾಯ್ಕೆಯಾದರು.

ಅವರ ಅಧಿಕಾರದ ಅವಧಿ ಐದು ವರ್ಷಗಳವರೆಗೆ ಇರಲಿದೆ. ಬಿಮ್ಸ್‌ ಮುಖ್ಯ ಆಡಳಿತಾಧಿಕಾರಿ ಸಯೀದಾ ಅಫ್ರೀನಬಾನು ಬಳ್ಳಾರಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ರಮೇಶ ಕತ್ತಿ ಹುಕ್ಕೇರಿ ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ ಹಾಗೂ ಮೂಡಲಗಿಯ ಸುಭಾಷ ಢವಳೇಶ್ವರ ಅವರು ನೇಕಾರ ಸಹಕಾರ ಸಂಘಗಳನ್ನು ಹೊರತುಪಡಿಸಿ ಕೈಗಾರಿಕಾ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಮೂರು ಬಣಗಳಾಗಿ ಹೋಳಾಗಿದ್ದ ಜಿಲ್ಲೆಯ ಬಿಜೆಪಿ ಮುಖಂಡರು ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇದರೊಂದಿಗೆ ಕುತೂಹಲಕ್ಕೆ ತೆರೆಬಿದ್ದಿತು.

ಅಭಿ‍ಪ್ರಾಯ ಆಲಿಸಿದ ಮುಖಂಡರು: ಪ್ರವಾಸಿಮಂದಿರದಲ್ಲಿ ಶನಿವಾರ ಬೆಳಿಗ್ಗೆ ಅಂತಿಮ ಸುತ್ತಿನ ಸಭೆ ನಡೆಸಿದ ಬಿಜೆಪಿ ಮುಖಂಡರು,‌ ನಿರ್ದೇಶಕರ ಅಭಿಪ್ರಾಯಗಳನ್ನು ಆಲಿಸಿ ಅವಿರೋಧ ಆಯ್ಕೆಗೆ ತೀರ್ಮಾನಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಪ್ರತಿಷ್ಠಿತ ಡಿಸಿಸಿ ಬ್ಯಾಂಕ್‌ನ ಶತಮಾನೋತ್ಸವ ಆಚರಣೆ ಈ ವರ್ಷ ಬರಲಿದೆ. ಹೀಗಾಗಿ ಈ ಬಾರಿ ಚುನಾವಣೆ ಬೇಡ, ಎಲ್ಲರೂ ಸಮಾಲೋಚನೆ ನಡೆಸಿ ಒಮ್ಮತದ ನಿರ್ಣಯಕ್ಕೆ ಬರಬೇಕು ಎಂದು ವರಿಷ್ಠರು ಅಪೇಕ್ಷೆ ವ್ಯಕ್ತಪಡಿಸಿದ್ದರು. ಜೊತೆಗೆ 14 ಹಾಲಿ ನಿರ್ದೇಶಕರನ್ನು ಮುಂದುವರಿಸುವಂತೆಯೂ ಸಲಹೆ ನೀಡಿದ್ದರು. ಅವರ ಮಾತು ಉಳಿಸಿಕೊಳ್ಳುವಲ್ಲಿ ನಾವೆಲ್ಲರೂ ಸಫಲರಾಗಿದ್ದೇವೆ’ ಎಂದು ತಿಳಿಸಿದರು.

‘ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನೇ ಮುಂದುವರಿಸಿದ್ದೇವೆ. ಪಕ್ಷದ ಎಲ್ಲ ಮುಖಂಡರೂ ರಾಜಕೀಯ ವ್ಯತ್ಯಾಸಗಳನ್ನು ಬದಿಗಿಟ್ಟು ಒಂದಾಗಿ ಹೋಗಲು ನಿರ್ಧರಿಸಿದ್ದೇವೆ’ ಎಂದರು.

ಮೂವರ ನೇತೃತ್ವದಲ್ಲಿ: ಅರಭಾವಿ ಶಾಸಕರೂ ಆಗಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ‘ಜಿಲ್ಲೆಯಲ್ಲಿ ಇನ್ನು ಮುಂದೆ ಉಮೇಶ ಕತ್ತಿ, ರಮೇಶ ಜಾರಕಿಹೊಳಿ ಹಾಗೂ ಲಕ್ಷಣ ಸವದಿ ಅವರ ನೇತೃತ್ವದಲ್ಲಿ ಪಕ್ಷ ಬಲಪಡಿಸುತ್ತೇವೆ. ಗೊಂದಲ ಅಥವಾ ಭಿನ್ನಾಭಿಪ್ರಾಯಗಳು ನಮ್ಮಲ್ಲಿಲ್ಲ. ಚರ್ಚೆಯನ್ನು ಭಿನ್ನಾಭಿಪ್ರಾಯ ಎಂದು ಪರಿಗಣಿಸಲಾಗದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಎಲ್ಲರಿಗೂ ಅವಕಾಶವಿದೆ. ಆದರೆ, ಅವಿರೋಧ ಆಯ್ಕೆ ಮೂಲಕ ನಮ್ಮ ಒಗ್ಗಟ್ಟಿನ ಸಂದೇಶವನ್ನು ಇಡೀ ರಾಜ್ಯಕ್ಕೆ ರವಾನಿಸಿದ್ದೇವೆ’ ಎಂದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ಉಮೇಶ ಕತ್ತಿ, ಮಹಾಂತೇಶ ದೊಡ್ಡಗೌಡರ ಹಾಗೂ ನಿರ್ದೇಶಕರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು