ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಗಡ ಅಭಯಾರಣ್ಯ: 3 ತಿಂಗಳಿಂದ ‘ಪ್ರಭಾರ’ ಆರ್‌ಎಫ್‌ಒ

ಕಣಕುಂಬಿ ಅಧಿಕಾರಿಗೆ ಪ್ರಭಾರ; ಕಾರ್ಯದೊತ್ತಡ
Last Updated 25 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಅರಣ್ಯ ಸಚಿವ ಉಮೇಶ ಕತ್ತಿ ಅವರ ತವರು ಜಿಲ್ಲೆಯಾದ ಬೆಳಗಾವಿಯ ಖಾನಾಪುರದಲ್ಲಿರುವ ಭೀಮಗಡ ಅಭಯಾರಣ್ಯದಲ್ಲಿ ಆರ್‌ಎಫ್‌ಒ ಹುದ್ದೆಗೆ ಪೂರ್ಣಕಾಲಿಕ ಅಧಿಕಾರಿ ನೇಮಿಸುವ ಕಾರ್ಯ ಮೂರು ತಿಂಗಳಾದರೂ ನಡೆದಿಲ್ಲ.

ಹಿಂದೆ ಇದ್ದ ಅಮೃತ ಗಂಡೋಸಿ ಅವರು ಜುಲೈನಲ್ಲಿ ವರ್ಗಾವಣೆಯಾಗಿದ್ದಾರೆ. ಬಳಿಕ ಸಮೀಪದ ಕಣಕುಂಬಿಯ ಆರ್‌ಎಫ್‌ಒ ಸಂತೋಷ ಹುಬ್ಬಳ್ಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಪ್ರಮುಖ ಅಭಯಾರಣ್ಯದ ಮೇಲೆ ನಿಗಾ ವಹಿಸಬೇಕಾದ ಅಧಿಕಾರಿಯ ಹುದ್ದೆ ತ್ವರಿತವಾಗಿ ಭರ್ತಿ ಆಗದಿರುವುದು ಅಲ್ಲಿನ ಕಾರ್ಯಚಟುವಟಿಕೆಗಳು ಮತ್ತು ಸಂರಕ್ಷಣೆಯ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈ ಅಭಯಾರಣ್ಯವು 19ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ವ್ಯಾಪಿಸಿದೆ. ಪಶ್ಚಿಮ ಬೆಟ್ಟಗಳ ಸಾಲಿನ ದಟ್ಟ ಅರಣ್ಯ ಹೊಂದಿರುವ ಮತ್ತು ಅಪರೂಪದ ಜೀವಿಗಳಿಗೆ ಆಶ್ರಯ ನೀಡಿರುವ ವನ್ಯಧಾಮ ಇದಾಗಿದೆ. ವಿನಾಶದ ಅಂಚಿನಲ್ಲಿರುವ ಸಸ್ಯ ಹಾಗೂ ಪ್ರಾಣಿ ಸಂಪತ್ತಿನ ಆಗರವಾಗಿದೆ. ನೆರೆಯ ಕಣಕುಂಬಿ ಹಾಗೂ ಭೀಮಗಡ ಎರಡು ಕಡೆಗಳಲ್ಲೂ ರಾತ್ರಿ ಪೆಟ್ರೋಲಿಂಗ್‌ ಅತ್ಯಗತ್ಯವಾಗಿದೆ. ಜೊತೆಗೆ, ಕಳ್ಳ ಬೇಟೆ ತಡೆ ಮೊದಲಾದವುಗಳ ಮೇಲೆ ಅಧಿಕಾರಿ ನಿಗಾ ವಹಿಸಬೇಕಾಗುತ್ತದೆ.ಈಗಿರುವ ಒಬ್ಬರೇ ಅಧಿಕಾರಿಯು ಎರಡೂ ಕಡೆಗಳಲ್ಲಿ ಸಮರ್ಪಕವಾಗಿ ನಿರ್ವಹಿಸುವುದು ಕಷ್ಟಸಾಧ್ಯವಾಗಿದೆ. ಒಂದೆಡೆ ‍ಪೆಟ್ರೋಲಿಂಗ್ ಮಾಡಿದರೆ ಇನ್ನೊಂದೆಡೆಗೆ ಹೋಗಲಾಗದ ಸ್ಥಿತಿ ಇದೆ. ಇದು ಸಾಮಾನ್ಯ ಅರಣ್ಯವಲ್ಲವಾದ್ದರಿಂದ ಹೆಚ್ಚಿನ ಆದ್ಯತೆ ಕೊಡಬೇಕಾಗುತ್ತದೆ ಎನ್ನುತ್ತಾರೆ ಪರಿಸರ ಹೋರಾಟಗಾರರು.

‘ಪೂರ್ಣಕಾಲಿಕ ಆರ್‌ಎಫ್‌ಒ ದೀರ್ಘ ಕಾಲದವರೆಗೆ ಇಲ್ಲದಿದ್ದರೆ ತೊಂದರೆ ಖಂಡಿತ ಆಗುತ್ತದೆ. ಭೀಮಗಡ ಅಭಯಾರಣ್ಯದ ಆರ್‌ಎಫ್‌ಒ ಹುದ್ದೆ ಖಾಲಿ ಇರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಉಂಟಾಗುವ ಸಮಸ್ಯೆಗಳ ಬಗ್ಗೆಯೂ ಗಮನಸೆಳೆಯಲಾಗಿದೆ. ನೇಮಕಾತಿಗೆ ಕ್ರಮ ವಹಿಸುವಂತೆ ಕೋರಲಾಗಿದೆ. ಆದರೆ, ನೇಮಕಾತಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಸಾಲಿಮಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಖಾನಾಪುರ ಎಸಿಎಫ್‌ ಹುದ್ದೆಯೂ ಖಾಲಿ ಇದೆ. ಬೇರೊಬ್ಬರಿಗೆ ಪ್ರಭಾರ ವಹಿಸಲಾಗಿದೆ. ಈ ವಿಷಯವನ್ನೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನೇಮಕಾತಿ ಅಥವಾ ವರ್ಗಾವಣೆ ಸರ್ಕಾರದ ಮಟ್ಟದಲ್ಲಿ ಆಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT