ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ರಾಜಕೀಯದಿಂದ ಶಾಸಕಿಯಾದ ಲಕ್ಷ್ಮಿ: ಬಿಜೆಪಿ ಮುಖಂಡ ಸಂಜಯ ಪಾಟೀಲ ಹೇಳಿಕೆ

Last Updated 30 ಸೆಪ್ಟೆಂಬರ್ 2021, 6:12 IST
ಅಕ್ಷರ ಗಾತ್ರ

ಬೆಳಗಾವಿ: ‘ರಾತ್ರಿ ರಾಜಕೀಯದ ಸಂಸ್ಕೃತಿ ಗೊತ್ತಿದ್ದರಿಂದಲೇ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲದಿದ್ದರೆ ಅವರು ಶಾಸಕಿ ಆಗುವುದಕ್ಕೆ ಸಾಧ್ಯವಿರಲಿಲ್ಲ’ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಟೀಕಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಚುನಾವಣೆಗೆ ಮುನ್ನ, ನಾನು ನಿಮ್ಮ ಮನೆ ಮಗಳು ಎಂದೆಲ್ಲಾ ಹೇಳಿ ದೊಡ್ಡ ದೊಡ್ಡ ಕನಸುಗಳನ್ನು ತೋರಿಸಿದ್ದರು. ಆ ಕನಸುಗಳನ್ನು ನನಸು ಮಾಡಲಾಗಿಲ್ಲ. ಹೀಗಾಗಿ, ಗ್ರಾಮೀಣ ಕ್ಷೇತ್ರದ ಜನರು ಪ್ರತಿಕ್ರಿಯೆ ಕೊಡಲು ಆರಂಭಿಸಿದ್ದಾರೆ. ಅದಕ್ಕೆ ಬಿಜೆಪಿಯ ಹೆಸರನ್ನು ಶಾಸಕಿ ಕೊಡುತ್ತಿದ್ದಾರೆ. ರಾತ್ರಿ ರಾಜಕೀಯ ಮಾಡುವುದು ಬಿಜೆಪಿ ಸಂಸ್ಕೃತಿಯಲ್ಲ. ಅದು ಕಾಂಗ್ರೆಸ್‌ನವರ ಸಂಸ್ಕೃತಿ’ ಎಂದು ಆರೋಪಿಸಿದರು.

‘ಕ್ಷೇತ್ರದಲ್ಲಿ ಅವರು ಹೇಳುತ್ತಿರುವ ಅಭಿವೃದ್ಧಿ ಹೊಳೆ ಎಲ್ಲಿದೆ ಎನ್ನುವುದನ್ನು ಹೇಳಿದರೆ ನಾನೂ ನೋಡಿಕೊಂಡು ಬರುತ್ತೇನೆ’ ಎಂದು ವ್ಯಂಗ್ಯವಾಡಿದರು.

‘ಹೆಬ್ಬಾಳಕರಗೆ ಸತ್ಯ ಒಪ್ಪಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅವರು ಕೆಲಸ ಮಾಡೇ ಇಲ್ಲ ಎಂದು ಹೇಳಲಾಗುವುದಿಲ್ಲ. ಸಂವಿಧಾನದ ಪ್ರಕಾರ ಶಾಸಕರ ನಿಧಿಯಲ್ಲಿ ಒಂದಷ್ಟು ಕೆಲಸಗಳು ಸಹಜವಾಗಿಯೇ ನಡೆಯುತ್ತವೆ. ಅಭಿವೃದ್ಧಿಯ ಹೊಳೆ ಹರಿಯುತ್ತಿದ್ದರೆ, ಜನರು ಅವರ ವಿರುದ್ಧವಾಗಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅವರನ್ನು ಟೀಕಿಸಿ ಅಲ್ಲಲ್ಲಿ ಬ್ಯಾನರ್‌ ಹಾಕುತ್ತಿರಲಿಲ್ಲ. ಮರಾಠಿ ಜನ ಬ್ಯಾನರ್ ಹಾಕಿದ್ದಾರೆ. ಬಿಜೆಪಿಯವರು ಅಂತಹ ಹೊಲಸು ರಾಜಕೀಯ ಮಾಡುವುದಿಲ್ಲ. ವಿಚಾರ ತೆಗೆದುಕೊಂಡು ಜನರ ಬಳಿಗೆ ಹೋಗುವ ಪಕ್ಷ ನಮ್ಮದು’ ಎಂದರು.

‘ಜನರು ಮಾಡುತ್ತಿರುವ ಟೀಕೆ ಸಹಿಸಲಾಗದೆ, ಶಾಸಕರು ಬಿಜೆಪಿ ವಿರುದ್ಧ ಸಿಟ್ಟು ತೋರಿಸುತ್ತಿದ್ದಾರೆ. ಅಭಿವೃದ್ಧಿಯ ರಾಣಿ ಎಂದು ಸ್ವಯಂಘೋಷಣೆ ಮಾಡಿಕೊಳ್ಳುವವರಿಗೆ ನಾವೇನೂ ಪ್ರತಿಕ್ರಿಯೆ ನೀಡಲಾಗುವುದಿಲ್ಲ. ಚುನಾವಣೆ ಬಂದಾಗ, ಎಲ್ಲವನ್ನೂ ಜನರು ನಿರ್ಧರಿಸುತ್ತಾರೆ’ ಎಂದು ಹೇಳಿದರು.

‘ನಾನು ಮಾಡಿಸಿದ್ದ ರಸ್ತೆಯ ಮೇಲೆಯೇ ಓಡಾಡುತ್ತಾರೆ. ಆದರೆ, ಹಿಂದಿನ ಶಾಸಕರು ಏನನ್ನೂ ಮಾಡಿಲ್ಲ ಎಂದು ಶಾಸಕಿ ಟೀಕಿಸುತ್ತಾರೆ. ನಾನು ಅವರಂತೆ ಟೀಕಿಸಲು ಹೋಗುವುದಿಲ್ಲ’ ಎಂದು ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಸಂಜಯ ತಿರುಗೇಟು ನೀಡಿದರು.

‘ಟೀಕೆ ಸಹಿಸುವ ಶಕ್ತಿಯು ಶಾಸಕರಿಗೆ ಬರಲಿ’ ಎಂದರು. ‘ಜನರ ಮುಂದೆ ಭಾವನಾತ್ಮಕ ಸಂಗತಿಗಳನ್ನು ತೆಗೆದುಕೊಂಡು ಹೋಗುವುದು ಅವರ ಸಂಸ್ಕೃತಿ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT