ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧಿಕಾರಕ್ಕೆ ತರಲು ಒಗ್ಗೂಡಿ ದುಡಿಯಿರಿ: ಕಾರ್ಯಕರ್ತರಿಗೆ ಯಡಿಯೂರಪ್ಪ ಕರೆ

ವಿಜಯ ಸಂಕಲ್ಪ ಯಾತ್ರೆಯಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದ ಬಿ.ಎಸ್. ಯಡಿಯೂರಪ್ಪ
Last Updated 8 ಮಾರ್ಚ್ 2023, 16:16 IST
ಅಕ್ಷರ ಗಾತ್ರ

ನಿಪ್ಪಾಣಿ: ‘ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ದೇಶದ ಉದ್ದ– ಅಗಲಕ್ಕೂ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದೆ. ರಾಜ್ಯದಲ್ಲಿಯೂ ಕಾರ್ಯಕರ್ತರೆಲ್ಲರೂ ಒಗ್ಗೂಡಿ ಜಿಲ್ಲೆಯಲ್ಲಿ ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷಕ್ಕೆ ಉತ್ತಮ ಕೊಡುಗೆ ನೀಡಿ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಬುಧವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಈ ಬಾರಿ ರಾಜ್ಯದಲ್ಲಿ 140ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲ್ಲುತ್ತೇವೆ. ವಿಜಯ ಸಂಕಲ್ಪ ಯಾತ್ರೆ ಹೋದಲ್ಲೆಲ್ಲ ಅಪಾರ ಸಂಖ್ಯೆಯ ಜನ ಸೇರುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದರು.

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಾರ್ಥಕತೆ ಬಿಜೆಪಿಯಲ್ಲಿದೆ. ಮಹಿಳೆಯರಿಗೆ ಸ್ಥಾನಮಾನ ಕೊಡುವ ಹಾಗೂ ಮಹಿಳೆಯರನ್ನು ಮುಂಚೂಣಿಯಲ್ಲಿ ತರುವ ಪಕ್ಷ ಬಿಜೆಪಿ. ಛತ್ರಪತಿ ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜ, ರಾಣಿ ಚನ್ನಮ್ಮ, ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಕಂಡ ಕನಸನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿ ಸಹ ಕಾಣುತ್ತಿದ್ದಾರೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ನೆಲಕಚ್ಚಿದೆ. ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸುಳ್ಳು ಆರೋಪಗಳಿಗೆ ಜನ ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ ಎಂಬುದು ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ ಅವರಿಗೆ ಗೊತ್ತಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ‘ಶಶಿಕಲಾ ಜೊಲ್ಲೆ ಅವರನ್ನು 3ನೇ ಬಾರಿ ವಿಧಾನಸಭೆಗೆ ಕಳುಹಿಸುವುದೇ ಇಂದಿನ ನಮ್ಮ ಸಂಕಲ್ಪ. ಜೊಲ್ಲೆ ಮೂರನೇಯ ಬಾರಿ ಸಚಿವೆ ಆಗುವುದು ಕಟ್ಟಿಟ್ಟ ಬುತ್ತಿ’ ಎಂದರು.

ಮುಖಂಡರಾದ ಉಜ್ವಲಾ ಬಡವನ್ನಾಚೆ, ಶಶಿಕಾಂತ ನಾಯಿಕ, ಅರುಣ ಶಹಾಪೂರ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಉಪಾಧ್ಯಕ್ಷ ಮಲಗೊಂಡಾ ಪಾಟೀಲ, ಸಂಚಾಲಕ ಆರ್.ವೈ. ಪಾಟೀಲ ಮತ್ತು ಸಂಚಾಲಕರು, ನಗರಸಭೆ ಅಧ್ಯಕ್ಷ ಜಯವತ ಭಾಟಲೆ ಮತ್ತು ಸದಸ್ಯರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಇದ್ದರು.

*
‘ಕಾಂಗ್ರೆಸ್‌ಗೆ ಅರಿಸಿನ– ಕುಂಕುಮ ಅಲರ್ಜಿ’

ನಿಪ್ಪಾಣಿ: ‘ಕೇಸರಿ ಬಣ್ಣ ಕಂಡರೆ ಕಾಂಗ್ರೆಸ್‍ಗೆ ಅಲರ್ಜಿ. ಕುಂಕುಮ– ಅರಿಸಿನ ಕಂಡರೂ, ಅವರಿಗೆ ಆಗಲ್ಲ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಕೇಸರಿ ಪೇಟ ಕಿತ್ತು ಬಿಸಾಡಿದ್ದರು. ಇಂಥವರಿಗೆ ಮತ ಹಾಕಬೇಡಿ’ ಎಂದು ಬಿಜೆಪಿ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಬುಧವಾರ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್‍ಗೆ ಸೋಲು ಕಟ್ಟಿಟ್ಟ ಬುತ್ತಿ. ನಿಮ್ಮನ್ನು ವಿದ್ಯುನ್ಮಾನ ಮತಯಂತ್ರಗಳಲ್ಲ, ಜನರೇ ಸೋಲಿಸಲಿದ್ದಾರೆ’ ಎಂದು ತಿಳಿಸಿದರು.

‘ಕನ್ನಡ, ಮರಾಠಿ ಭಾಷೆ ಬೇರೆ ಬೇರೆಯಾಗಿರಬಹುದು. ಆದರೆ, ಸಂಸ್ಕೃತಿ ಒಂದೇ. ಅದರಲ್ಲೂ ಸನಾತನ ಹಿಂದೂ ಸಂಸ್ಕೃತಿ ನಮ್ಮನ್ನೆಲ್ಲ ಒಂದಾಗಿಸಿದೆ’ ಎಂದರು.

‘ಯಾರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ’

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ನಮ್ಮ‌ ಶಾಸಕರ ಜತೆ ಮಾತುಕತೆ ಮಾಡಿ, ಕಾಂಗ್ರೆಸ್‌ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಈಡೇರುವುದಿಲ್ಲ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಚಿಕ್ಕೋಡಿಯಲ್ಲಿ ಹೇಳಿದರು.

ತಾಲ್ಲೂಕಿನ ಅಂಕಲಿಯಲ್ಲಿ ಬುಧವಾರ ವಿಜಯ ಸಂಕಲ್ಪ ಯಾತ್ರೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಹಾಗೂ ಶಿವಕುಮಾರ ಅವರು ಅಧಿಕಾರದ ಹಗಲಗನಸು ಕಾಣುತ್ತಿದ್ದಾರೆ. ಅದು ನಡೆಯುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT