ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನದ ಯಶಸ್ಸಿಗೆ ಬಿಜೆಪಿಯವರು ಸಹಕರಿಸಲಿ: ಪಿ.ವಿ. ಮೋಹನ್‌

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್ ಹೇಳಿಕೆ
Last Updated 29 ನವೆಂಬರ್ 2018, 8:50 IST
ಅಕ್ಷರ ಗಾತ್ರ

ಬೆಳಗಾವಿ: ‘ಸುವರ್ಣ ವಿಧಾನಸೌಧದಲ್ಲಿ ಡಿ. 10ರಿಂದ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ಯಶಸ್ಸಿಗೆ ಬಿಜೆಪಿಯವರು ಸಹಕಾರ ನೀಡಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಚರ್ಚಿಸಬೇಕು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್‌ ಒತ್ತಾಯಿಸಿದರು.

‌‌‘ಅಧಿವೇಶನದಲ್ಲಿ ‌ಈ ಭಾಗದ ಎಲ್ಲ ಶಾಸಕರೂ ಸಕ್ರಿಯವಾಗಿ ಭಾಗವಹಿಸಬೇಕು. ಹೋದ ವರ್ಷದ ರೀತಿಯಲ್ಲಿಯೇ ಗಲಾಟೆ ಎಬ್ಬಿಸಿ, ಕಲಾಪಕ್ಕೆ ಅಡ್ಡಿಪಡಿಸಬಾರದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪಕ್ಷದ ಹೈಕಮಾಂಡ್‌ ಹಾಗೂ ಕಾರ್ಯಕರ್ತರನ್ನು ಜೋಡಿಸಲು ಶಕ್ತಿ ಎನ್ನುವ ಕಾರ್ಯಕ್ರಮ ರೂಪಿಸಲಾಗಿದೆ. ಇದು ಮೊಬೈಲ್ ಆಧಾರಿತ ಕಾರ್ಯಕ್ರಮವಾಗಿದ್ದು, ಪಕ್ಷ ಬಲಪಡಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ 10 ಲಕ್ಷ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಜೋಡಿಸಲು ಯೋಜಿಸಲಾಗಿದೆ. ಈ ಪೈಕಿ ಈಗಾಗಲೇ 7 ಲಕ್ಷ ಮಂದಿಯ ನೋಂದಣಿಯಾಗಿದೆ’ ಎಂದು ತಿಳಿಸಿದರು.

ನೇರ ಸಂಪರ್ಕಕ್ಕಾಗಿ:‘ಈ ಕಾರ್ಯಕ್ರಮದ ಮೂಲಕ ಕಾರ್ಯಕರ್ತರ ಅಭಿಪ್ರಾಯ, ವಿಚಾರಗಳು ರಾಷ್ಟ್ರಮಟ್ಟದ ನಾಯಕರಿಗೆ ಗೊತ್ತಾಗುತ್ತವೆ. ವಿಚಾರ‌ ವಿನಿಮಯ ನಡೆಯುತ್ತದೆ. ದೂರುಗಳಿದ್ದಲ್ಲಿ ಹೇಳಿಕೊಳ್ಳಬಹುದು. ಜಿಲ್ಲೆಯಲ್ಲಿ ಕಿತ್ತೂರು, ಖಾನಾಪುರ, ಗೋಕಾಕ, ಬೆಳಗಾವಿ ಗ್ರಾಮೀಣ, ಹುಕ್ಕೇರಿಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನಿಗದಿತ ಸಂಖ್ಯೆಗೆ ಎಪಿಕ್ ಕಾರ್ಡ್ ಕಳುಹಿಸಿದ ನಂತರ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳುತ್ತದೆ’ ಎಂದು ಹೇಳಿದರು.

‘ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 3ಸಾವಿರ ಮಂದಿ ನೋಂದಣಿಗೆ ಉದ್ದೇಶಿಸಲಾಗಿದೆ. ಆದರೆ, ಸಾವಿರದಷ್ಟು ಮಾತ್ರವೇ ಸಾಧನೆಯಾಗಿದೆ. ನೋಂದಣಿ ಪ್ರಕ್ರಿಯೆ ಕುಂಠಿತವಾಗುತ್ತಿರುವುದರಿಂದ, ಹೆಚ್ಚಿನ ನಿಗಾ ವಹಿಸಲಾಗುತ್ತಿದೆ’ ಎಂದರು.

ಕಪ್ಪುಹಣ ದ್ವಿಗುಣ:ಕೆಪಿಸಿಸಿ ಉಪಾಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ‘ಸುಳ್ಳು ಪ್ರಚಾರ, ವಾಗ್ದಾನಗಳಿಂದ ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ವಿದೇಶಗಳಲ್ಲಿ ಇರುವ ಕಪ್ಪು ಹಣವನ್ನು ತರುತ್ತೇವೆ ಎಂದು ನರೇಂದ್ರ ಮೋದಿ ಹೇಳಿದ್ದರು. ಆದರೆ, ಅವರು ಪ್ರಧಾನಿಯಾದ ನಂತರ ವಿದೇಶಗಳಲ್ಲಿನ ಕಪ್ಪುಹಣದ ಪ್ರಮಾಣ ದ್ವಿಗುಣಗೊಂಡಿದೆ. ಯುವಕರಿಗೆ ಉದ್ಯೋಗ ದೊರಕಿಸಿಕೊಡುವುದು ಅವರಿಂದ ಸಾಧ್ಯವಾಗಿಲ್ಲ’ ಎಂದು ದೂರಿದರು.

‘ವಿಧಾನಮಂಡಲ ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಆಗ ಪಕ್ಷದ ಕೆಲವರಿಗೆ ಸಚಿವ ಸ್ಥಾನ ಸಿಗಲಿದೆ. ನಂತರ, ನಿಗಮ–ಮಂಡಳಿಗಳಿಗೆ ನೇಮಕ ಮಾಡಲಾಗುವುದು. ನಿಷ್ಠಾವಂತರಿಗೆ ಅವಕಾಶಗಳು ಸಿಗಲಿವೆ’ ಎಂದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ‍್ಪ ಅವರು ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆಗೆ ಹೋಗಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರು ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಲು ಹೋಗಿದ್ದಾರೆ. ಅವರಂತೆಯೇ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹಾಗೂ ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಕೂಡ ಹೋಗಿ ಮನವಿ ಕೊಟ್ಟಿದ್ದಾರೆ. ಇದನ್ನು ಗಮನಿಸಿದರೆ, ಸರ್ಕಾರಕ್ಕೆ ಏನೂ ತೊಂದರೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಪದಾಧಿಕಾರಿಗಳಾದ ಮೋಹನರೆಡ್ಡಿ, ರಾಜಾ ಸಲೀಂ, ಶೇಖರಪ್ಪ ಈಟಿ, ಕಿರಣ, ಗಿರೀಶ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT