ಪಿಯು: ಸಾಧನೆಗೆ ಅಡ್ಡಿಯಾಗದ ದೃಷ್ಟಿ ದೋಷ! ಬಸಮ್ಮ ಮಠದಗೆ ಶೇ 90 ಅಂಕ

ಶನಿವಾರ, ಏಪ್ರಿಲ್ 20, 2019
24 °C

ಪಿಯು: ಸಾಧನೆಗೆ ಅಡ್ಡಿಯಾಗದ ದೃಷ್ಟಿ ದೋಷ! ಬಸಮ್ಮ ಮಠದಗೆ ಶೇ 90 ಅಂಕ

Published:
Updated:
Prajavani

ಬೆಳಗಾವಿ: ಇಲ್ಲಿನ ಲಿಂಗರಾಜ ಪಿಯು ಕಾಲೇಜಿನ, ದೃಷ್ಟಿದೋಷವುಳ್ಳ ವಿದ್ಯಾರ್ಥಿನಿ ಬಸಮ್ಮ ಮಠದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಷಯದಲ್ಲಿ ಶೇ 90ರಷ್ಟು (540) ಅಂಕಗಳನ್ನು ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ದೃಷ್ಟಿ ದೋಷ ಇರುವವರು ಕೂಡ ಸಾಮಾನ್ಯರಂತೆ ಹೆಚ್ಚಿನ ಅಂಕಗಳನ್ನು ಗಳಿಸಬಹುದು ಎನ್ನುವುದನ್ನು ನಿರೂಪಿಸಿ ಗಮನಸೆಳೆದಿದ್ದಾರೆ.

ಪ‍್ರಥಮ ಭಾಷೆ ಇಂಗ್ಲಿಷ್‌ನಲ್ಲಿ 93, ದ್ವಿತೀಯ ಭಾಷೆ ಹಿಂದಿ–95, ಇತಿಹಾಸ–81, ಅರ್ಥಶಾಸ್ತ್ರ–92, ಸಮಾಜವಿಜ್ಞಾನ–94 ಹಾಗೂ ರಾಜ್ಯಶಾಸ್ತ್ರದಲ್ಲಿ 85 ಅಂಕಗಳನ್ನು ಗಳಿಸಿದ್ದಾರೆ. ಕಾಲೇಜಿನ ಬೋಧಕರು, ಬೋಧಕೇತರರು ಹಾಗೂ ಸಹಪಾಠಿಗಳ ಮೆಚ್ಚುಗೆಗೂ ಪಾತ್ರವಾಗಿದ್ದಾರೆ.

ಆಂಜನೇಯ ನಗರದ ನಿವಾಸಿ, ಮೆಕ್ಯಾನಿಕಲ್ ಎಂಜಿನಿಯರ್ ಗುರಯ್ಯ ಮಠದ– ಪ್ರೀತಿ ಮಠದ ದಂಪತಿಯ ಪುತ್ರಿ ಇವರು. ‘ಹುಟ್ಟಿನಿಂದಲೂ ನನಗೆ ದೃಷ್ಟಿದೋಷವಿದೆ. ಬ್ರೈಲ್ ಲಿಪಿಯ ಸಹಾಯದಿಂದ ಓದುತ್ತೇನೆ. ಪರೀಕ್ಷೆ ಬರೆಯುವುದಕ್ಕೆ ಸಹಾಯಕರನ್ನು ತೆಗೆದುಕೊಂಡಿದ್ದೆ. ಒಳ್ಳೆಯ ಅಂಕಗಳು ಬಂದಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಲಿಂಗರಾಜ ಕಾಲೇಜಿನಲ್ಲೇ ಪದವಿ ಅಭ್ಯಾಸ ಮಾಡುತ್ತೇನೆ. ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿ, ಐಎಎಸ್‌ ಅಧಿಕಾರಿಯಾಗಬೇಕು, ಜನರ ಸೇವೆ ಮಾಡಬೇಕು ಎನ್ನುವ ಬಯಕೆ ಇದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿಯಲ್ಲೂ ಶೇ 95.52ರಷ್ಟು ಅಂಕ ಗಳಿಸಿದ್ದ ಸಾಧನೆ ಅವರದು. ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಾರೆ. 2011ರಿಂದ 2014ರವರೆಗೆ ಅಬಾಕಸ್ ಕಲಿಯುತ್ತಿದ್ದರು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಒಮ್ಮೆ ಚಿನ್ನದ ಪದಕ ಹಾಗೂ ಎರಡು ಬಾರಿ ಪ್ರಥಮ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ. 2011ರಿಂದ ಸಂಗೀತವನ್ನೂ ಕಲಿಯುತ್ತಿದ್ದಾರೆ. ಹಾಡುತ್ತಾರೆ ಹಾಗೂ ಹಾರ್ಮೋನಿಯಂ ನುಡಿಸುತ್ತಾರೆ.

 

 

 

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !